Advertisement

ಅಕ್ರಮ-ಸಕ್ರಮ, ನಿವೇಶನ ಅರ್ಜಿಗಳು ಆರು ತಿಂಗಳೂಳಗೆ ಇತ್ಯರ್ಥ: ಕಾಗೋಡು

07:32 AM Mar 10, 2017 | Team Udayavani |

ಮಂಗಳೂರು: ಅಕ್ರಮ-ಸಕ್ರಮ ಹಾಗೂ 94 ಸಿ ಮತ್ತು 94ಸಿಸಿ ಅಡಿಯಲ್ಲಿ ಸ್ವೀಕರಿಸಲಾಗಿರುವ ಎಲ್ಲ ಅರ್ಜಿಗಳನ್ನು 6 ತಿಂಗಳೊಳಗೆ ಇತ್ಯರ್ಥಪಡಿಸಿ ಫಲಾನುಭವಿಗಳಿಗೆ ಆರ್‌ಟಿಸಿ, ಹಕ್ಕು ಪತ್ರ ನೀಡುವಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಸೂಚಿಸಿದರು.

Advertisement

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜರಗಿದ ಜಿಲ್ಲಾ ಕಂದಾಯ ಅಧಿಕಾರಿಗಳ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಇಲಾಖಾ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅಕ್ರಮ- ಸಕ್ರಮ ನಿಯಮ ಜಾರಿಗೆ ಬಂದು 19 ವರ್ಷಗಳು ಕಳೆದಿವೆ. ಆದರೆ ಇನ್ನೂ ಬಹಳಷ್ಟು ಅರ್ಜಿಗಳು ಇತ್ಯರ್ಥಗೊಳ್ಳದೆ ಬಾಕಿಯುಳಿದಿವೆ. ಅಧಿಕಾರಿಗಳು ಸಮಯ ಮಿತಿ ನಿಗದಿಪಡಿಸಿಕೊಂಡು ಕಾರ್ಯೋನ್ಮುಖರಾಗಬೇಕು. ಒಂದು ಸರ್ವೇ ನಂಬರ್‌ನ ಎಲ್ಲ ಅರ್ಜಿಗಳನ್ನು ಹಾಗೂ ಗ್ರಾಮದಲ್ಲಿರುವ ಎಲ್ಲ ಅರ್ಜಿಗಳು ಒಂದೇ ಬಾರಿ ಇತ್ಯರ್ಥಪಡಿಸಿ ಸಂಪೂರ್ಣ ವಿಲೇವಾರಿ ಮಾಡಬೇಕು ಹಾಗೂ ತತ್‌ಕ್ಷಣ ಸಾಗುವಳಿ ಚೀಟಿ ಹಾಗೂ ಆರ್‌ಟಿಸಿ ನೀಡಬೇಕು ಎಂದರು. 

ಅರ್ಜಿಗಳು ಜಾಸ್ತಿ ಇರುವ ಕಡೆ ಹೆಚ್ಚುವರಿ ಸಮಿತಿ ರಚಿಸಲು ಇಲಾಖೆ ಸಿದ್ಧವಿದೆ. ಅಕ್ರಮ-ಸಕ್ರಮ ಸಮಿತಿಗಳ ಸಭೆಗಳನ್ನು ಸಮರ್ಪಕವಾಗಿ ನಡೆಸಿ ತಿಂಗಳಿಗೆ ಗುರಿ ನಿಗದಿಪಡಿಸಿಕೊಂಡು ಬಾಕಿ ಇರುವ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಅವರು ಸೂಚಿಸಿದರು.

ದ.ಕ. ಜಿಲ್ಲೆಯಲ್ಲಿ ಬಂಟ್ವಾಳದಲ್ಲಿ 4973, ಬೆಳ್ತಂಗಡಿಯಲ್ಲಿ 4692, ಪುತ್ತೂರಿನಲ್ಲಿ 5738, ಕಡಬದಲ್ಲಿ 4165, ಮೂಡಬಿದಿರೆಯಲ್ಲಿ 2017, ಸುಳ್ಯದಲ್ಲಿ 644, ಮಂಗಳೂರಿನಲ್ಲಿ 39 ಸೇರಿ ಒಟ್ಟು 22,268 ಅರ್ಜಿಗಳು ವಿಲೇವಾರಿಗೆ ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಡಾ| ಜಗದೀಶ್‌ ಮಾಹಿತಿ ನೀಡಿದರು.

94 ಸಿ: ಗ್ರಾ.ಪಂ.ನಲ್ಲೇ ಹಕ್ಕುಪತ್ರ
94ಸಿಸಿ ಅಡಿಯಲ್ಲಿ ದ.ಕ. ಜಿಲ್ಲೆಯಲ್ಲಿ ಒಟ್ಟು 76,650 ಅರ್ಜಿಗಳು ಸ್ವೀಕೃತವಾಗಿದ್ದು, ಇದಧಿರಲ್ಲಿ 44,063 ವಿಲೇವಾರಿಯಾಗಿವೆ. 22,080 ಮಂಜೂರಾಗಿದ್ದು, ಈವರೆಗೆ 19,019 ಮಂದಿಗೆ ಹಕ್ಕುಪತ್ರ ನೀಡಲಾಗಿದೆ. 32,587 ಅರ್ಜಿಗಳು ತೀರ್ಮಾನಕ್ಕೆ ಬಾಕಿ ಇವೆ. 94 ಸಿಸಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 25,359 ಅರ್ಜಿ ಸ್ವೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ತಾ.ಪಂ. ಕಾರ್ಯನಿರ್ವಹಣಾಕಾರಿ ಪಿಡಿಒಗಳು ಪ್ರತಿ ಗ್ರಾಮದಲ್ಲಿ ಸಮೀಕ್ಷೆ ನಡೆಸಬೇಕು. ಅರ್ಹರು ಅರ್ಜಿ ನೀಡಿರದಿದ್ದರೆ ಸ್ಥಳದಲ್ಲೇ ಅರ್ಜಿ ಸ್ವೀಕರಿಸಬೇಕು. ಅರ್ಜಿಗಳನ್ನು ಗ್ರಾ. ಪಂ. ಮಟ್ಟದಲ್ಲೇ ವಿಲೇವಾರಿ ಮಾಡಿ ಅಲ್ಲೇ ಹಕ್ಕುಪತ್ರ ನೀಡಬೇಕು ಎಂದು ಸಚಿವ ಕಾಗೋಡು ತಿಮ್ಮಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು. ಈ ಹಿಂದೆ ಮಂಜೂರಾದ ನಿವೇಶನದಲ್ಲಿ ಫಲಾನುಭವಿ ವಾಸಿಸದೆ ಬೇರೆಯವರು ವಾಸವಾಗಿರುವ ಪ್ರಕರಣಗಳ ಬಗ್ಗೆ ಅಧಿಕಾರಿಗಳು ಪರಿಶೀಲಿಸುವಂತೆ ಸೂಚಿಸಿದ ಅವರು, ಒಂದೊಮ್ಮೆ ಜಮೀನು ಹೊಂಧಿದ್ದರೂ ಅವರ ಮನೆ ಸರಕಾರಿ ಜಾಗದಲ್ಲಿ ಇರುವ ಪ್ರಕರಣಗಳಲ್ಲಿ ಅದನ್ನೂ ಪರಿಶೀಲಿಸಿ 94 ಸಿಯಲ್ಲಿ ಪರಿಗಣಿಸುವಂತೆ ಸಚಿವರು ಸೂಚಿಸಿದರು.

Advertisement

ಎಂಡೋಸಲ್ಫಾನ್‌ 
ಎಂಡೋಸಲ್ಪಾನ್‌ ಪೀಡಿತರಿಗೆ 100 ಬೆಡ್‌ಗಳ ಶಾಶ್ವತ ಪುನರ್‌ವಸತಿ ಕೇಂದ್ರ ಸ್ಥಾಪನೆ ಬಗ್ಗೆ ಸಲ್ಲಿಕೆಯಾಗಿರುವ ಪ್ರಸ್ತಾವನೆ ಕಾರ್ಯಗತಗೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಜತೆಗೆ ಮಾತುಕತೆ ನಡೆಸುತ್ತೇನೆ ಎಂದು ಸಚಿವ ಕಾಗೋಡು ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 2998 ಸಂತ್ರಸ್ತರಿದ್ದು, ಮಾಸಿಕ ಒಟ್ಟು 78.69 ಲಕ್ಷ ಮಿತವೇತನ ನೀಡಲಾಗುತ್ತಿದೆ ಎಂದು ಡಿಎಚ್‌ಒ ಡಾ| ರಾಮಕೃಷ್ಣ ತಿಳಿಸಿದರು.

ಡಿಸಿ ಮನ್ನಾ ಜಮೀನು ಸಮಸ್ಯೆ, 9/11 ನಮೂನೆ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸುವುದಾಗಿ ಸಚಿವರು ತಿಳಿಸಿದರು. ಶಾಸಕ ಅಭಯಚಂದ್ರ ಉಪಸ್ಥಿತರಿದ್ದರು.

ಹೊಸ ತಾಲೂಕುಗಳ ರಚನೆ: ಬಜೆಟ್‌ನಲ್ಲಿ ಕ್ರಮಕ್ಕೆ ಸಿಎಂಗೆ ಕೋರಿಕೆ
ಡೀಮ್ಡ್ ಫಾರೆಸ್ಟ್‌: ಕಂದಾಯ ನಿಯಮದಡಿ ಬರುವ ಜಾಗ ಹೊರತುಪಡಿಸಲು ತಿದ್ದುಪಡಿ
ಲೀಸ್‌ಗೆ ನೀಡಿರುವ ಸರಕಾರಿ ಜಾಗದ ಬಗ್ಗೆ ಪರಿಶೀಲನೆ ನಡೆಸಿ ವರದಿಗೆ ಸೂಚನೆ
ದ.ಕ.: ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ 1,20,170 ಫಲಾನುಭವಿಗಳ ಪೈಕಿ 106085 ಮಂದಿಯ ಆಧಾರ್‌ ಸಂಖ್ಯೆ ಸೀಡಿಂಗ್‌

Advertisement

Udayavani is now on Telegram. Click here to join our channel and stay updated with the latest news.

Next