Advertisement
ಸಾಮಾನ್ಯವಾಗಿ ರೈಲು ಹೊರಡುವ 3 ಗಂಟೆ ಮೊದಲು ರೈಲ್ ಚಾರ್ಟ್ ತಯಾರಾಗುತ್ತದೆ. ಬಳಿಕವೂ ಟಿಕೆಟ್ ವೈಟಿಂಗ್ ಲಿಸ್ಟ್‌ನಲ್ಲಿದ್ದರೆ ನಿಯಮಾವಳಿ ಪ್ರಕಾರ ಟಿಕೆಟ್‌ನ್ನು ಕೌಂಟರ್‌ಗೆ ವಾಪಸ್ ಕೊಟ್ಟು ಹಣ ವಾಪಸ್ ಪಡೆಯಲು ಹಾಗೂ ಅನಿವಾರ್ಯವಾಗಿ ಪ್ರಯಾಣಿಸಲೇ ಬೇಕಿದ್ದರೆ ಜನರಲ್ ಟಿಕೆಟ್ ಪಡೆದು ಪ್ರಯಾಣಿಸಬಹುದು.
ರೈಲ್ವೇ ನಿಯಮಾವಳಿ ಪ್ರಕಾರ ವೈಟಿಂಗ್ ಲಿಸ್ಟ್ ಟಿಕೆಟ್ ಪ್ರಯಾಣಿಕರು ರಿಸರ್ವೇಶನ್ ಬೋಗಿಗೆ ಬಂದರೆ ಅವರನ್ನು ಟಿಕೆಟ್ ರಹಿತ ಪ್ರಯಾಣಿಕರೆಂದು ಪರಿಗಣಿಸಿ ಸಂಪೂರ್ಣ ಟಿಕೆಟ್ ದರದ ಜತೆಗೆ 250 ರೂ. ದಂಡ ವಿಧಿಸಲು ಅವಕಾಶವಿದೆ. ಆದರೆ ಮಂಗಳೂರು- ಮುಂಬಯಿ ಮಾರ್ಗದಲ್ಲಿ ಟಿಟಿಇಗಳು ಕಳೆದ ಎರಡು ದಶಕಗಳಿಂದಲೂ ನಿಯಮಗಳನ್ನು ಪಾಲಿಸುತ್ತಿಲ್ಲ; ಹಾಗಾಗಿ ವೈಟಿಂಗ್ ಲಿಸ್ಟ್ ಪ್ರಯಾಣಿಕರು ರಿಸರ್ವ್ ಬೋಗಿಯಲ್ಲಿ ಪ್ರಯಾಣಿಸುವುದು ರೂಢಿಯಾಗಿ ಬಿಟ್ಟಿದೆ ಎಂಬ ಆರೋಪಗಳು ಸತತವಾಗಿ ಕೇಳಿ ಬರುತ್ತಿವೆ.
Related Articles
ರೈಲು ಬೋಗಿಯ ಎರಡೂ ಸೀಟುಗಳ ಮಧ್ಯೆ ನೆಲದಲ್ಲಿ, ಒಂದು ಬಾಗಿಲಿನಿಂದ ಇನ್ನೊಂದು ಬಾಗಿಲಿಗೆ ಹೋಗುವ ಗ್ಯಾಂಗ್‌ವೇನಲ್ಲಿ ಮತ್ತು ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಕುಳಿತು, ಮಲಗಿ ಪ್ರಯಾಣಿಸುತ್ತಾರೆ. ಯಾವುದೇ ಪುರುಷ ಪ್ರಯಾಣಿಕರು ಶೌಚಾಲಯಕ್ಕೆ ಹೋಗಬೇಕಾದರೆ ಲೋವರ್ ಬರ್ತ್ ಹಾಗೂ ಸೈಡ್ ಲೋವರ್ ಬರ್ತ್‌ನಲ್ಲಿ ಕಾಲೂರಿ ಸರ್ಕಸ್ ಮಾಡಿಕೊಂಡು ಹೋಗಬೇಕಾಗಿದೆ. ಇನ್ನು ರೋಗಿಗಳು, ಹಿರಿಯ ನಾಗರಿಕರು, ಗರ್ಭಿಣಿಯರು, ಸ್ಕರ್ಟ್ ಧರಿಸಿದ ಹುಡುಗಿಯರ ಪಾಡು ಶೋಚನೀಯ.
Advertisement
ಇಷ್ಟೇ ಅಲ್ಲದೆ ಲೋವರ್ ಬರ್ತ್‌ನ ಸೀಟಿನ ಅಡಿಯಲ್ಲಿರುವ ಬ್ಯಾಗ್‌ಗಳಿಂದ ಅಮೂಲ್ಯ ಸೊತ್ತುಗಳು ಕಳವಾಗುವ ಘಟನೆಗಳೂ ಸಂಭವಿಸುತ್ತವೆ. ಕಳೆದ ಫೆಬ್ರವರಿಯಲ್ಲಿ ಮುಂಬಯಿನಿಂದ ಮಂಗಳೂರಿಗೆ ರಿಸರ್ವ್ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ 4.5 ಲಕ್ಷ ರೂ.ಗಳ ಚಿನ್ನಾಭರಣ ಕಳವಾಗಿದ್ದು, ರೈಲು ಶಿರೂರು ತಲಪುವಾಗ ಗಮನಕ್ಕೆ ಬಂದಿತ್ತು. ಈ ಮಹಿಳೆ ತನ್ನ ಪುತ್ರನಿಗೆ ಎಂಜಿನಿಯರಿಂಗ್ ಓದಿಸಲು ಚಿನ್ನವನ್ನು ಮಂಗಳೂರಿನ ಬ್ಯಾಂಕ್‌ನಲ್ಲಿ ಅಡವು ಇರಿಸಲು ತೆರಳುತ್ತಿದ್ದರು. ಇಂತಹ ಹಲವು ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಕೆಲವು ಮಾತ್ರ ಬೆಳಕಿಗೆ ಬರುತ್ತವೆ.
ಹಲವು ಬಾರಿ ಮನವಿರಿಸರ್ವ್ ಬೋಗಿಯಲ್ಲಿ ವೈಟಿಂಗ್ ಲಿಸ್ಟ್ ಟಿಕೆಟ್ ಪಡೆದವರು ಪ್ರಯಾಣಿಸುತ್ತಿರುವ ಬಗ್ಗೆ ಉಡುಪಿ, ಬೈಂದೂರು ಮತ್ತು ಮುಂಬಯಿ ರೈಲು ಯಾತ್ರಿ ಸಂಘಗಳು ಸೆಂಟ್ರಲ್ ಮತ್ತು ವೆಸ್ಟರ್ನ್ ರೈಲ್ವೇ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಆಗಿಲ್ಲ ಎಂದು ಮುಂಬಯಿ ರೈಲು ಯಾತ್ರಿ ಸಂಘದ ಕಾರ್ಯಕಾರಿ ಕಾರ್ಯದರ್ಶಿ ಒಲಿವರ್ ಡಿ’ಸೋಜಾ ಹೇಳುತ್ತಾರೆ. ಗ್ರಾಹಕರ ನ್ಯಾಯಾಲಯದ ಮೊರೆ ಹೋಗಬಹುದು
ರಿಸರ್ವ್ ಬೋಗಿಯಲ್ಲಿ ಕನ್‌ಫರ್ಮ್ ಟಿಕೆಟ್ ಪಡೆದು ಪ್ರಯಾಣಿಸುವರು ತಮಗಾದ ಅನನುಕೂಲತೆಗಳ ಬಗ್ಗೆ ವೀಡೀಯೋ ಚಿತ್ರೀಕರಣ ಮಾಡಿ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರೆ ರೈಲ್ವೇಯಿಂದ 30,000 ರೂ. ತನಕ ನಷ್ಟ ಪರಿಹಾರ ಪಡೆಯಲು ಅವಕಾಶವಿದೆ. ಈಗಾಗಲೇ ಕೆಲವರು ಈ ರೀತಿ ಪರಿಹಾರವನ್ನು ಪಡೆದ ನಿದರ್ಶನಗಳಿವೆ. ಈ ರೀತಿ ಪ್ರತಿಯೊಬ್ಬ ಕನ್ ಫರ್ಮ್ ಪ್ರಯಾಣಿಕರು ತಮಗಾದ ಕೆಟ್ಟ ಪ್ರಯಾಣದ ಅನುಭವಕ್ಕಾಗಿ 30,000 ರೂ. ಪಡೆದರೆ ಮಾತ್ರ ಟಿಟಿಇಗಳು ವೈಟಿಂಗ್ ಲಿಸ್ಟ್ ಪ್ರಯಾಣಿಕರ ವಿರುದ್ಧ ಕ್ರಮ ಜರಗಿಸಲು ಮುಂದಾಗುವರು. ‘ರೋಹಾ- ತೋಕೂರು ನಡುವಣ ಕೊಂಕಣ ರೈಲು ಮಾರ್ಗದಲ್ಲಿ ಸುಮಾರು 72 ರೈಲು ನಿಲ್ದಾಣಗಳಿವೆ ಎನ್ನುತ್ತಾರೆ ಒಲಿವರ್ ಡಿ’ಸೋಜಾ. ಮನವಿ ನೀಡಿದರೂ ಪ್ರಯೋಜನವಾಗಿಲ್ಲ
ವೈಟಿಂಗ್ ಲಿಸ್ಟ್ ಟಿಕೆಟ್ ಪಡೆದ ಪ್ರಯಾಣಿಕರು ರಿಸರ್ವ್ ಕೋಚ್‌ನಲ್ಲಿ ಪ್ರಯಾಣಿಸುವುದರಿಂದ ರಿಸರ್ವ್ ಟಿಕೆಟ್ ಪಡೆದು ಸಂಚರಿಸುವವರು ಅನುಭವಿಸುತ್ತಿರುವ ನೋವುಗಳನ್ನು ನಿವಾರಿಸುವ ನಿಟ್ಟಿನಲ್ಲಿ 2009ರಿಂದ ಪ್ರಯತ್ನಿಸುತ್ತಲೇ ಇದ್ದೇನೆ. ಸೆಂಟ್ರಲ್ ರೈಲ್ವೇ ಮತ್ತು ವೆಸ್ಟರ್ನ್ ರೈಲ್ವೇ ಕಮರ್ಶಿಯಲ್ ಮ್ಯಾನೇಜರ್‌ಗಳಿಗೆ ಮತ್ತು ಮಹಾರಾಷ್ಟ್ರದ ಸಂಸದ ಗೋಪಾಲ ಶೆಟ್ಟಿ ಅವರಿಗೂ ಮನವಿ ಸಲ್ಲಿಸುತ್ತಲೇ ಬಂದಿದ್ದೇನೆ. ಏನೂ ಪ್ರಯೋಜನವಾಗಿಲ್ಲ.
– ಒಲಿವರ್ ಡಿ’ಸೋಜಾ,
ಕಾರ್ಯಕಾರಿ ಕಾರ್ಯದರ್ಶಿ,
ರೈಲು ಯಾತ್ರಿ ಸಂಘ, ಮುಂಬಯಿ ಕಟ್ಟು ನಿಟ್ಟಿನ ತಪಾಸಣೆ
ಮಂಗಳೂರು- ಮುಂಬಯಿ ರೈಲುಗಳಲ್ಲಿ ಈಗ ಪ್ರಯಾಣಿಕರ ಒತ್ತಡ ಜಾಸ್ತಿ ಇಲ್ಲ. ರಿಸರ್ವ್ ಕೋಚ್‌ಗಳಲ್ಲಿ ವೈಟಿಂಗ್ ಲಿಸ್ಟ್ ಟಿಕೆಟ್‌ನ ಪ್ರಯಾಣಿಕರು ಸಂಚರಿಸುತ್ತಿರುವುದನ್ನು ತಡೆಯಲು ಟಿ.ಟಿ.ಇ.ಗಳು ಆಗಿಂದಾಗ್ಗೆ ಕಟ್ಟು ನಿಟ್ಟಿನ ತಪಾಸಣೆ ನಡೆಸುತ್ತಿದ್ದಾರೆ. ಆದರೆ ಕೆಲವೊಮ್ಮೆ ರಿಸರ್ವೇಶನ್‌ನಲ್ಲಿ ಟಿಕೆಟ್ ಪಡೆದವರ ಸಂಬಂಧಿಕರು ಎಂದು ಹೇಳಿ ಕೆಲವರು ರಿಸರ್ವ್ ಟಿಕೆಟ್ ಇರುವವರ ಅನುಮತಿ ಇದೆ ಎಂದು ಹೇಳಿ ಪ್ರಯಾಣಿಸುತ್ತಿದ್ದಾರೆ. ಇವರ ಹೊರತಾಗಿ ಬೇರೆ ಯಾರಿಗೂ ಅನುಮತಿ ಕೊಡುವುದಿಲ್ಲ. ಇತ್ತೀಚೆಗೆ ಬೇಸಗೆ ಕಾಲದ ಪ್ರಯಾಣಿಕರ ಒತ್ತಡವನ್ನು ಗಮನಿಸಿ ಎರಡು ವಿಶೇಷ ಸಾಪ್ತಾಹಿಕ ರೈಲುಗಳ ಓಡಾಟ ಆರಂಭಿಸಲಾಗಿದೆ. ಒಂದು ರೈಲು ಪ್ರತಿ ಗುರುವಾರ ಮಧ್ಯರಾತ್ರಿ 2 ಗಂಟೆಗೆ ಮಂಗಳೂರು ಜಂಕ್ಷನ್‌ನಿಂದ ಹೊರಡುತ್ತದೆ. ಇನ್ನೊಂದು ಕೊಚ್ಚುವೇಲಿ- ಮುಂಬಯಿ ಸಿಎಸ್‌ಟಿ ಮಧ್ಯೆ ಓಡಾಡುತ್ತಿದ್ದು, ಪ್ರತಿ ರವಿವಾರ ರಾತ್ರಿ 9.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ನಿರ್ಗಮಿಸುತ್ತದೆ.
– ಸುಧಾ ಕೃಷ್ಣ ಮೂರ್ತಿ,
ಸಾರ್ವಜನಿಕ ಸಂಪರ್ಕ ಅಧಿಕಾರಿ, ಕೊಂಕಣ
ರೈಲ್ವೇ (ಮಂಗಳೂರು ರೈಲು ನಿಲ್ದಾಣ). ಹಿಲರಿ ಕ್ರಾಸ್ತಾ