ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದಿದ್ದು, ಓರ್ವನನ್ನು ಬಂಧಿಸಲಾಗಿದೆ.
ಪಿಎಸ್‌ಐ ಪರೀಕ್ಷಾ ಹಗರಣ ಮಾಸುವ ಮುನ್ನ ಕಲಬುರಗಿಯಲ್ಲಿ ಮತ್ತೊಂದು ಹಗರಣ ಬಯಲಿಗೆ ಬಂದಿದ್ದು, ಎಫ್.ಡಿ.ಎ ಪರೀಕ್ಷೆಯಲ್ಲಿ ಬ್ಲೂಟುತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಹಾರ ಮತ್ತು ಕಾರ್ಮಿಕ ಇಲಾಖೆಯ ಎಫ್‌ಡಿಎ ಪರೀಕ್ಷೆ ನಡೆಯುತ್ತಿದ್ದು, ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ವಿವಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಪರೀಕ್ಷಾ ಅಭ್ಯರ್ಥಿ ತ್ರಿಮೂರ್ತಿ ಎಂಬಾತನ ಬಂಧನವಾಗಿದೆ. ಕಿವಿಯಲ್ಲಿ ಬ್ಲೂಟೂತ್ ಇಟ್ಟುಕೊಂಡು ಬರೆಯುತ್ತಿರುವುದನ್ನು ಪತ್ತೆ ಹಚ್ಚಿ ತದನಂತರ ಕಿವಿ ತಜ್ಞ ರ ಬಳಿ ಕರೆದೊಯ್ದು ಬ್ಲೂಟೂತ್ ಹೊರ ತೆಗೆದು ವಶಕ್ಕೆ ಪಡೆದು ಅಭ್ಯರ್ಥಿ ತ್ರಿಮೂರ್ತಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ರಾಘವೇಂದ್ರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅದೇ ರೀತಿ ಜಿಲ್ಲೆಯ ಅಫಜಲಪುರದಲ್ಲಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಒಟ್ಟು ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಐವರ ಪೈಕಿ ಇಬ್ಬರ ಬಳಿ ಪರೀಕ್ಷಾ ಅಕ್ರಮಕ್ಕೆ ಬಳಸುತ್ತಿದ್ದ ಡಿವೈಸ್ ಪತ್ತೆಯಾಗಿವೆ.
PSI ನೇಮಕಾತಿ ಅಕ್ರಮ ಮಾಸುವ ಮುನ್ನವೇ ಮತ್ತೆ ಅಕ್ರಮಕ್ಕೆ ಸಂಚು
ಎರಡು ವರ್ಷದ ಹಿಂದೆ ಪಿಎಸ್ಐ ಹುದ್ದೆಗಳ ನೇಮಕಾತಿ ಸಂಬಂದ ನಡೆದ ಪರೀಕ್ಷೆಯಲ್ಲೂ ಹಗರಣ ನಡೆದು ಹಗರಣದ ಕಿಂಗ್ ಪಿನ್ ಆರ್ ಡಿ. ಪಾಟೀಲ್ ಸೇರಿ ಹಲವರ ಬಂಧನವಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಆರ್ ಡಿ.ಪಾಟೀಲ್ ಸ್ವಗ್ರಾಮವಾಗಿರುವ ಸೊನ್ನ ಗ್ರಾಮದ ತ್ರಿಮೂರ್ತಿ ಎಂಬ ಅಭ್ಯರ್ಥಿ ಬಂಧನವಾಗಿರುವುದು ಹಾಗೂ ಅಫಜಲಪುರ ತಾಲೂಕಿನ ಅಭ್ಯರ್ಥಿಗಳೇ ಪೊಲೀಸರ ವಶಕ್ಕೊಳಗಾಗಿರುವುದು ಮತ್ತೆ ಹಲವಾರು ಅನುಮಾನಳಿಗೆ ಎಡೆ ಮಾಡಿಕೊಟ್ಟಿದೆ.ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರೆ ಮತ್ತಷ್ಟು ಕುಳಗಳು ಬಯಲಿಗೆ ಬರಲಿವೆ ಎನ್ನಲಾಗುತ್ತಿದೆ.