ಬೆಂಗಳೂರು: ನಗರದ ಸರಕಾರಿ ಕಲಾ ಕಾಲೇಜಿನಲ್ಲಿ ಬುಧವಾರ ನಡೆದ ಸ್ನಾತಕೋತ್ತರ ಪದವಿಯ ಅರ್ಥಶಾಸ್ತ್ರ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿರುವ ಆರೋಪ ಕೇಳಿಬಂದಿದ್ದು, ಕೇಂದ್ರದ ಮುಖ್ಯ ಅಧೀಕ್ಷಕರೂ ಆಗಿರುವ ಕಾಲೇಜಿನ ಪ್ರಾಂಶುಪಾಲ ಪಿ.ಟಿ. ಶ್ರೀನಿವಾಸ್ ನಾಯಕ್ ಅವರನ್ನು ಪರೀಕ್ಷಾ ಕಾರ್ಯದಿಂದ ಬಿಡುಗಡೆ ಮಾಡಲಾಗಿದೆ.
ಪರೀಕ್ಷೆ ನಡೆಯುವ ವೇಳೆ ಪರೀಕ್ಷಾ ಕೇಂದ್ರದಲ್ಲಿ ಅಧೀಕ್ಷಕರು ಇರಲಿಲ್ಲ ಎಂಬುದಾಗಿ ಸ್ವತಃ ನಾಯಕ್ ಅವರೇ ಒಪ್ಪಿಕೊಂಡಿರುವುದರಿಂದ ಪರೀಕ್ಷಾ ಕಾರ್ಯದಿಂದ ಬಿಡುಗಡೆ ಮಾಡಲಾಗಿದೆ. ಘಟನೆ ಕುರಿತು ಮಾಹಿತಿ ಕೇಳಲಾಗಿದ್ದು, ವರದಿ ಬಂದ ನಂತರ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ತಿಳಿಸಿದ್ದಾರೆ.
ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಮಾಶಾಸ್ತ್ರ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಜೆರಾಕ್ಸ್ ಪ್ರತಿ, ನೋಟ್ ಬುಕ್ ನೋಡಿಯೇ ವಿದ್ಯಾರ್ಥಿಗಳು ನಕಲು ಮಾಡಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಪ್ರಾಧ್ಯಾಪಕರೇ ಸಾಥ್ ನೀಡಿದ್ದಾರೆ ಎಂಬ ಆಪಾದನೆಗಳು ಕೂಡ ಕೇಳಿಬಂದಿವೆ.
ಮುಖ್ಯ ಅಧೀಕ್ಷಕರ ಬದಲಾವಣೆ ಜೊತೆಗೆ ಬಾಕಿ ಇರುವ ಪರೀಕ್ಷೆಗಳಿಗೆ ವಿಶ್ವವಿದ್ಯಾಲಯದ ಅಧಿಕಾರಿಗಳನ್ನೇ ಈ ಕೇಂದ್ರಕ್ಕೆ ಸಿಟ್ಟಿಂಗ್ ಸ್ಕ್ವಾಡ್ ಆಗಿ ನೇಮಿಸಲು ತೀರ್ಮಾನಿಸಲಾಗಿದೆ. ಮುಖ್ಯ ಅಧೀಕ್ಷಕರ ಬೇಜವಾಬ್ದಾರಿತನದಿಂದ ಇಂತಹ ಲೋಪವಾಗಿದೆ. ಪರೀಕ್ಷೆ ವೇಳೆ ತಾವು ಸ್ಥಳದಲ್ಲಿ ಇರಲಿಲ್ಲ ಎಂದು ಶ್ರೀನಿವಾಸ್ ನಾಯಕ್ ಮೌಖೀಕವಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ಅವರಿಗೆ ವಿವರಣೆ ನೀಡುವಂತೆ ಸೂಚಿಸಲಾಗಿದೆ. ಅವರ ವಿವರಣೆ ಆಧರಿಸಿ ಕರ್ತವ್ಯಲೋಪದಡಿ ಕಾನೂನಾತ್ಮಕ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.