Advertisement

‘ಪೊಲೀಸರ ರಕ್ಷಣೆಯಲ್ಲೇ ಅಕ್ರಮ ಗೋ ಸಾಗಾಟ’

11:52 PM Jul 03, 2019 | mahesh |

ಕಡಬ: ಗೋ ವಂಶದ ಮೇಲಿನ ಕ್ರೌರ್ಯ, ಗೋ ಕಳ್ಳತನ, ಗೋವಧೆ, ಅಕ್ರಮ ಗೋ ಸಾಗಾಟ ಹಾಗೂ ಅಕ್ರಮ ಕಸಾಯಿಖಾನೆ ಗಳನ್ನು ಜಿಲ್ಲೆಯಲ್ಲಿ ಕೊನೆಗಾಣಿಸುವಂತೆ ಆಗ್ರಹಿಸಿ ಕಡಬ ತಾಲೂಕು ವಿಹಿಂಪ ಮತ್ತು ಹಿಂದೂ ಜಾಗರಣ ವೇದಿಕೆಯ ಆಶ್ರಯದಲ್ಲಿ ಬುಧವಾರ ಕಡಬ ತಹಶೀಲ್ದಾರ್‌ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಪ್ರತಿಭಟನಕಾರರನ್ನುದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಕಡಬ ಅವರು, ಜಿಲ್ಲೆಯಲ್ಲಿ ಗೋವುಗಳ ವಧೆ ನಿರಂತರ ವಾಗಿ ನಡೆಯುತ್ತಿದೆ. ಅಕ್ರಮ ಗೋಸಾಗಾಟ, ಕಸಾಯಿಖಾನೆಗಳು ಪೊಲೀಸರ ರಕ್ಷಣೆ ಯಲ್ಲೇ ನಡೆಯುತ್ತಿವೆ. ಗೋ ಕಳ್ಳರು ರಾಜಾ ರೋಷವಾಗಿ ತಿರುಗುತ್ತಿರುವುದು ಇದಕ್ಕೆ ಉದಾಹರಣೆ ಯಾಗಿದೆ. ಅಕ್ರಮ ಗೋಸಾಗಾಟ ಮಾಡುವಾಗ ಗೋವುಗಳನ್ನು ರಕ್ಷಣೆ ಮಾಡಲು ಹೊರಟ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ. ಆ ಮೂಲಕ ನಮ್ಮ ಹೋರಾಟವನ್ನು ಹತ್ತಿಕ್ಕುವ ವ್ಯವಸ್ಥಿತ ಷಡ್ಯಂತರ ನಡೆಯುತ್ತಿದೆ. ಈ ವಿಚಾರದಲ್ಲಿ ಅಶಾಂತಿ ಸಂಘರ್ಷಗಳು ಆದರೆ ಅದಕ್ಕೆ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ನೇರ ಹೊಣೆಯಾಗುತ್ತದೆ. ಪೊಲೀಸರು ಅಕ್ರಮ ದಂಧೆಕೋರರ ಪರವಾಗಿ ನಿಂತು ಗೋರಕ್ಷಕರ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾದೀತು. ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ಮಟ್ಟಕ್ಕೆ ಇಳಿಯಬೇಡಿ ಎಂದು ಎಚ್ಚರಿಕೆ ನೀಡಿದರು.

ಸಾಮಾಜಿಕ ಅಶಾಂತಿಗೆ ಕಾರಣ

ಆರೆಸ್ಸೆಸ್‌ ಮುಖಂಡ ವೆಂಕಟರಮಣ ರಾವ್‌ ಮಂಕುಡೆ ಅವರು ಮಾತನಾಡಿ, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡದೆ ಅಕ್ರಮ ಗೋ ದಂಧೆ ನಡೆಸುವವರಿಗೆ ಪರೋಕ್ಷ ಬೆಂಬಲ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕೋಮು ಸಂಘರ್ಷ ಹಾಗೂ ಸಾಮಾಜಿಕ ಅಶಾಂತಿಗೆ ಅಕ್ರಮ ಗೋ ಸಾಗಾಟ ಹಾಗೂ ಅಕ್ರಮ ಕಸಾಯಿಖಾನೆಗಳು ಕಾರಣವಾಗುತ್ತಿದೆ ಎಂದು ತಿಳಿದಿದ್ದರೂ ಪೊಲೀಸರು ಅದರ ವಿರುದ್ಧ ಸಮರ್ಪಕವಾಗಿ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸದ ಸಂಗತಿ ಎಂದರು.

ವ್ಯಾಪಕವಾಗಿ ಅಕ್ರಮ ಕಸಾಯಿಖಾನೆ

Advertisement

ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ ಅವರು ಮಾತನಾಡಿ, ರಾಜ್ಯ ಸರಕಾರ ಮತ ಬ್ಯಾಂಕ್‌ ಭದ್ರಪಡಿಸಿಕೊಳ್ಳುವ ಸಲುವಾಗಿ ಹಿಂದೂಗಳ ಭಾವನೆಗೆ ಬೆಲೆ ಕೊಡದೆ ಅಕ್ರಮ ಗೋ ದಂಧೆಕೋರರಿಗೆ ಪರೋಕ್ಷ ಬೆಂಬಲ ನೀಡುತ್ತಿದೆ. ಕಡಬದ ಹಲವು ಭಾಗಗಳಲ್ಲಿ ಅಕ್ರಮ ಕಸಾಯಿಖಾನೆಗಳು ಕಾರ್ಯಾಚರಿಸುತ್ತಿದ್ದರೂ, ಕಡಬ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ನಾವು ಕಾನೂನನ್ನು ಗೌರವಿಸುತ್ತೇವೆ. ಆದರೆ ಆದನ್ನೇ ನಮ್ಮ ದೌರ್ಬಲ್ಯ ಎಂದು ತಿಳಿಯಬಾರದು. ಕೂಡಲೇ ಜಿಲ್ಲೆಯಲ್ಲಿ ಗೋ ಹತ್ಯೆನ್ನು ನಿಲ್ಲಸಬೇಕು. ಜಿಲ್ಲಾಧಿಕಾರಿಯವರು ಅಧ್ಯಕ್ಷರಾಗಿರುವ ಪ್ರಾಣಿ ಕೌರ್ಯ ತಡೆ ಮಂಡಳಿಯಿಂದ ಕೂಡಾ ಯಾವುದೇ ಪ್ರಯೋಜನವಾಗುತ್ತಿಲ್ಲ, ಈ ಮಂಡಳಿಯನ್ನು ಸಕ್ರಿಯಗೊಳಿಸಿ ಇನ್ನೊಂದು ವಾರದೊಳಗೆ ಗೋವುಗಳ ಮೇಲಿನ ಕ್ರೌರ್ಯವನ್ನು ನಿಲ್ಲಿಸಬೇಕು ಎಂದವರು ಆಗ್ರಹಿಸಿದರು.

ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಮುಖಂಡ ರವಿರಾಜ್‌ ಶೆಟ್ಟಿ ಕಡಬ ಹಾಗೂ ಬಿಜೆಪಿ ಮುಖಂಡ ಲಕ್ಷ್ಮೀನಾರಾಯಣ ರಾವ್‌ ಆತೂರು ಮತ್ತಿತರರು ಮಾತನಾಡಿದರು. ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ತಾ.ಪಂ. ಮಾಜಿ ಸದಸ್ಯೆ ಸರೋಜಿನಿ ಜಯಪ್ರಕಾಶ್‌, ಹಿಂದೂ ಪರ ಸಂಘಟನೆಗಳ ಮುಖಂಡರಾದ ಮೋಹನ್‌ ಕೊೖಲ, ವೆಂಕಟರಮಣ ಕುತ್ಯಾಡಿ, ಪ್ರಮೋದ್‌ ರೈ ನಂದುಗುರಿ, ಸಂತೋಷ್‌ ಕುಮಾರ್‌ ಕೋಡಿಬೈಲು, ಪ್ರಕಾಶ್‌ ಎನ್‌.ಕೆ., ಕಿಶನ್‌ ಕುಮಾರ್‌ ರೈ, ಪ್ರೀತಾ ಗಣೇಶ್‌ ಕುಂಡಿಲು, ಮನಮೋಹನ್‌ ರೈ, ಉಮೇಶ್‌ ಶೆಟ್ಟಿ ಸಾಯಿರಾಂ, ರವಿಪ್ರಸಾದ್‌ ಶೆಟ್ಟಿ ನೆಲ್ಯಾಡಿ, ರಘುರಾಮ ನಾೖಕ್‌, ಅಶೋಕ್‌ ಕುಮಾರ್‌ ಪಿ., ಮೋಹನ ಕೋಡಿಂಬಾಳ, ಯತೀಶ್‌ ಹೊಸಮನೆ, ಮಲ್ಲೇಶ್‌ ಆಲಂಕಾರು, ಮನೋಹರ ಆಲಂಕಾರು ಮತ್ತಿತರರು ಭಾಗವಹಿಸಿದ್ದರು.

ಹಿಂಜಾವೇ ಮುಖಂಡ ನಿತ್ಯಾನಂದ ಮೇಲ್ಮನೆ ಮನವಿ ವಾಚಿಸಿದರು. ರವೀಂದ್ರದಾಸ್‌ ಪೂಂಜ ಕುಂತೂರು ಸ್ವಾಗತಿಸಿ, ವಿಹಿಂಪ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ವಂದಿಸಿದರು. ಅನಂತರ ಕಡಬ ಉಪ ತಹಶೀಲ್ದಾರ್‌ ನವ್ಯಾ ಅವರ ಮುಖಾಂತರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

ಮನೆಯ 11 ದನ ಕಳವು: ಪುತ್ತುಮೋನು

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೃಷಿಕ, ಹೈನುಗಾರ ಕಡಬದ ಪುತ್ತುಮೋನು ಬಾಜಿನಡಿ ಅವರು ಗೋವುಗಳ ಮೇಲಿನ ದೌರ್ಜನ್ಯ ನಿಲ್ಲಬೇಕು. ಪೊಲೀಸರು ಮತ್ತು ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇದುವರೆಗೆ ನಮ್ಮ ಮನೆಯ ಗಬ್ಬದ ದನಗಳೂ ಸೇರಿದಂತೆ ಒಟ್ಟು 11 ಗೋವುಗಳನ್ನು ಗೋಕಳ್ಳರು ಕದ್ದೊಯ್ದಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆ ನೋವಿನಿಂದ ನಾನು ಸ್ವಯಂ ಪ್ರೇರಣೆಯಿಂದ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next