Advertisement

Mahalingapura: ಅಕ್ರಮ ಭ್ರೂಣಹತ್ಯೆ ಪ್ರಕರಣ: ಮೂವರ ಬಂಧನ, ಏಳು ಜನರ ವಿರುದ್ಧ ಪ್ರಕರಣ ದಾಖಲು

11:02 PM May 29, 2024 | sudhir |

ಮಹಾಲಿಂಗಪುರ: ಮನೆಯಲ್ಲಿಯೇ ಅಕ್ರಮವಾಗಿ ಭ್ರೂಣಹತ್ಯೆ ಮಾಡುತ್ತಿದ್ದ ಮಹಾಲಿಂಗಪುರದ ಮಹಿಳೆ ಹಾಗೂ ಭ್ರೂಣಹತ್ಯೆ ಪ್ರಕರಣದಲ್ಲಿ ಭಾಗಿಯಾದ ಮಹಾರಾಷ್ಟ್ರದ ಇಬ್ಬರು ಸೇರಿದಂತೆ ಮೂವರನ್ನು ಬುಧವಾರ ಮಹಾಲಿಂಗಪುರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ಮಹಾಲಿಂಗಪುರ ಪಟ್ಟಣದ ಜಯಲಕ್ಷ್ಮೀ ನಗರದ ಕವಿತಾ ಬಾಡನವರ, ಮಹಾರಾಷ್ಟದ ಸಾಂಗಲಿ ಜಿಲ್ಲೆಯ ದೂದ್‌ಗಾಂವದ ವಿಜಯ ಸಂಜಯ ಗೌಳಿ ಕುಪ್ಪವಾಡದ ಡಾ.ಮಾರುತಿ ಬಾಬಸೋ ಖರಾತ ಬಂತ ಆರೋಪಿಗಳು.

ಘಟನೆ ವಿವಿರ:
ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಸಂಜಯ ಗೌಳಿ, ಸಂಗೀತಾ ಗೌಳಿ, ವಿಜಯ ಗೌಳಿ, ಡಾ.ಮಾರುತಿ ಖರಾತ, ಅಥಣಿಯ ರಾಮಾನಂದ ನಗರದ ಡಾ.ಕೊತ್ವಾಲೆ, ಮಹಾಲಿಂಗಪುರದ ಕವಿತಾ ಬಾಡನವರ, ಒಬ್ಬ ಸೋನೋಗ್ರಾಫರ್ ಸೇರಿದಂತೆ ಏಳು ಜನರ ವಿರುದ್ದ ಮಹಾರಾಷ್ಟ್ರದ ಸಾಂಗಲಿ ಹಾಗೂ ಮಹಾಲಿಂಗಪುರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಾದ ಏಳು ಜನರು ಸಹಕಾರದಿಂದ ಮಹಾಲಿಂಗಪುರದ ಕವಿತಾ ಬಾಡನವರ ಮನೆಯಲ್ಲಿ ಮೇ. 27 ರ ರಾತ್ರಿ 11ಕ್ಕೆ ಮಹಾರಾಷ್ಟ್ರ ಮೂಲದ ಮಹಿಳೆ ಸೋನಾಲಿ ಸಚಿನ ಕದಂ ಎಂಬ ಮಹಿಳೆಯ ಗರ್ಭಪಾತ ಮಾಡಿದ್ದಾರೆ. ಈ ಮಹಿಳೆಗೆ ಮೊದಲೆರಡು ಹೆಣ್ಣು ಮಕ್ಕಳಿದ್ದು, 3ನೇ ಮಗು ಹೆಣ್ಣು ಎಂದು ಸಾಂಗಲಿಯಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಗೋತ್ತಾಗಿ ಮಹಾಲಿಂಗಪುರದ ಕವಿತಾ ಬಾಡನವರ ಬಳಿ ಬಂದಿದ್ದಾರೆ.

ಗರ್ಭಪಾತ ಮಾಡಿದ ಒಂದು ಗಂಟೆಯಲ್ಲಿ ಮಹಿಳೆಯು ತೀವೃರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ. ಮರಳಿ ಸಾಂಗಲಿಗೆ ಹೋಗುವಾಗ ಗಡಿಚೆಕ್‌ಪೋಸ್ಟ್ನಲ್ಲಿ ಮಹಾರಾಷ್ಟ್ರ ದ ಸಾಂಗಲಿ ಪೊಲೀಸರಿಗೆ ಸಿಕ್ಕಿದ್ದರಿಂದ, ಸಾಂಗಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬಾಗಲಕೋಟೆಗೆ ವರ್ಗಾವಣೆ :
ಬುಧವಾರ ಸಾಂಗಲಿ ಪೊಲೀಸರು ಬಾಗಲಕೋಟೆಯ ಎಸ್‌ಪಿ ಆಫೀಸಗೆ ತೆರಳಿ ಭ್ರೂಣಹತ್ಯೆ ಪ್ರಕರಣ ಮಾಹಿತಿ ನೀಡಿದ್ದಾರೆ. ಎಸ್‌ಪಿ ಅವರು ನೀಡಿದ ಮಾಹಿತಿಯಂತೆ ಸ್ಥಳೀಯ ಠಾಣಾಧಿಕಾರಿ ಪ್ರವೀಣ ಬೀಳಗಿ ಹಾಗೂ ಪೊಲೀಸರು ಪಟ್ಟಣದ ಕವಿತಾ ಬಾಡನವರ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರು.

ಅಧಿಕಾರಿಗಳಿಂದ ಮನೆ ಮೇಲೆ ದಾಳಿ :
ಪ್ರಕರಣದ ವಿಷಯ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಕಾರಿ ಅರವಿಂದ ಪಟ್ಟಣಶೆಟ್ಟಿ, ಮುಧೋಳ ಟಿಎಚ್‌ಓ ವೆಂಕಟೇಶ ಮಲಘಾಣ, ರಬಕವಿ-ಬನಹಟ್ಟಿ ತಹಶೀಲ್ದಾರ ಗಿರೀಶ ಸ್ವಾದಿ, ಬನಹಟ್ಟಿ ಸಿಪಿಆಯ್ ಸಂಜೀವ ಬಳಗಾರ, ಪಿಎಸ್‌ಆಯ್ ಪ್ರವೀಣ ಬೀಳಗಿ ಅವರು ಕವಿತಾ ಬಾಡನವರ ಮನೆಯ ಮೇಲೆ ದಾಳಿ ನಡೆಸಿದಾಗ ಮನೆಯಲ್ಲಿಯೇ ಗರ್ಭಪಾತ ಮಾಡಲು ಬಳಸುತ್ತಿದ್ದ ವೈದ್ಯಕೀಯ ಪರಿಕರಗಳು, ಔಷಧಿ ಮಾತ್ರೆಗಳು ಸಿಕ್ಕಿವೆ.

ಹಿಂದೆಯೂ ಎರಡು ಬಾರಿ ದಾಳಿ :
ದಶಕಗಳ ಹಿಂದೆ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ ಆಗಿ ಕೆಲಸ ಮಾಡುತ್ತಿದ್ದ ಕವಿತಾ ಬಾಡನವರ ಅವರು ಕಳೆದ 7-8- ವರ್ಷಗಳಿಂದ ಅಕ್ರಮವಾಗಿ ಭ್ರೂಣಪತ್ಯೆ ಹಾಗೂ ಭ್ರೂಣಹತ್ಯೆ ಮಾಡುತ್ತಿದ್ದರು ಎನ್ನಲಾಗಿದೆ. ವಿಚಿತ್ರವೆಂದರೆ 30-03-2019 ಮತ್ತು 22-08-2022 ರಂದು ಎರಡು ಬಾರಿ ಮುಧೋಳ ಟಿಎಚ್‌ಓ ಅವರು ಬಾಡನವರ ಮನೆ ಮೇಲೆ ದಾಳಿ ನಡೆಸಿದ್ದರು.

2022 ರಲ್ಲಿ ದಾಳಿ ನಡೆಸಿದ್ದ ಟಿಎಚ್‌ಓ ಅವರು ಮನೆಯ ಮುಖ್ಯದ್ವಾರಕ್ಕೆ ಶೀಲ್ ಹಾಕಿದ್ದರು. ಸದರಿ ದಾಳಿಗೆ ಸಂಬಂಸಿದಂತೆ ಬನಹಟ್ಟಿಯ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದೆ. ಆದರೂ ಇಂದಿಗೂ ಮುಖ್ಯದ್ವಾರಕ್ಕೆ ಶೀಲ್ ಇದೆ. ಆದರೆ ಹಿತ್ತಲ ಬಾಗಿಲು ಮೂಲಕ ಅಕ್ರಮವಾಗಿ ಭ್ರೂಣಹತ್ಯೆ ಕೆಲಸವನ್ನು ಎಗ್ಗಿಲ್ಲದೆ ನಡೆಸಿದ್ದಾರೆ ಎಂಬುದು ಬುಧವಾರ ಅಕಾರಿಗಳ ದಾಳಿಯಿಂದ ತಿಳಿದುಬಂದಿದೆ.

ಇಲಾಖೆಗಳ ನಿರ್ಲಕ್ಷ್ಯ:
2022 ರಲ್ಲಿ ಮನೆಮೇಲೆ ದಾಳಿ ಮಾಡಿ, ಮುಖ್ಯದ್ವಾರಕ್ಕೆ ಶೀಲ್ ಮಾಡಿದ್ದರು ಸಹ, ಎರಡು ಮತ್ತು ಮೂರನೇ ಅಂತಸ್ಥಿನಲ್ಲಿ ವಾಸ ಹಾಗೂ ಕೆಳಮಹಡಿಯ ಹಿತ್ತಲ ಬಾಗಿಲು ಮೂಲಕ ಅಕ್ರಮ ಭ್ರೂಣಹತ್ಯೆ ಎಗ್ಗಿಲ್ಲದೆ ನಡೆದಿರುವದನ್ನು ನೋಡಿದರೆ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಮತ್ತು ಅಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ.

ಭ್ರೂಣಹತ್ಯೆಗೆ ಸಾವಿರಾರು ಹಣ ವಸೂಲಿ :
ಅಕ್ರಮ ಭ್ರೂಣ ಹತ್ಯೆಗಾಗಿ ಕವಿತಾ ಬಾಡನವರ ಅವರು ಕನಿಷ್ಠ 20 ಸಾವಿರದಿಂದ 80 ಸಾವಿರವರೆಗೆ ಹಣ ಪಡೆಯುತ್ತಿದ್ದರು ಎನ್ನಲಾಗಿದೆ. ಆರೋಪಿ ಕವಿತಾ ಅವರ ಪೋನ್ ಪೇ ನಂಬರಗೆ ಹಲವು ಗಣ್ಯ ವ್ಯಕ್ತಿ, ಅಧಿಕಾರಿಗಳಿಂದಲೂ ಸಾವಿರಾರು ರೂಪಾಯಿ ಜಮಾ ಆಗಿವೆ. ಪೋಲಿಸರು ಸೀಜ್ ಮಾಡಿರುವ ಕವಿತಾ ಬಾಡನವರ ಅವರ ಮೋಬೈಲ್‌ನಿಂದ ಮತ್ತಷ್ಟು ಜನರ ಹೆಸರು ಸದರಿ ಪ್ರಕರಣದಲ್ಲಿ ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.

ಅಕ್ರಮಕ್ಕೆ ಗಣ್ಯರ ಬೆಂಬಲದ ಶಂಕೆ? :
ಕವಿತಾ ಬಾಡನವರ ಅವರ ಮನೆಯಲ್ಲಿಯೇ ಅಕ್ರಮವಾಗಿ ನಡೆಸುತ್ತಿದ್ದ ಭ್ರೂಣಹತ್ಯೆ ಅಕ್ರಮ ದಂದೆಯಿಂದ ಕೋಟ್ಯಾಂತರ ಬೆಲೆ ಬಾಳುವ ಮನೆಯನ್ನು ನಿರ್ಮಿಸಿದ್ದಾರೆ. ಇವರ ಅಕ್ರಮ ದಂಧೆಗೆ ಹಲವು ಗಣ್ಯರು ಹಾಗೂ ಇಲಾಖೆಯ ಕೆಲ ಅಕಾರಿಗಳ ಬೆಂಬಲವಿದೆ ಎಂಬ ಅನುಮಾನ ಮೂಡುತ್ತಿದೆ. ಭ್ರೂಣಹತ್ಯೆ ಪ್ರಕರಣವು ಅಂತರರಾಜ್ಯಕ್ಕೆ ಹೋಗಿದ್ದರಿಂದ ವಿಚಾರಣೆಯ ನಂತರ ಪ್ರಕರಣವು ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ಇದನ್ನೂ ಓದಿ :Kadaba ನ್ಯಾಯಾಲಯದಲ್ಲಿ ಖಾಸಗಿ ದೂರು: ಕೊಂಬಾರಿನ ಐವರ ವಿರುದ್ಧ ಪ್ರಕರಣ ದಾಖಲು

Advertisement

Udayavani is now on Telegram. Click here to join our channel and stay updated with the latest news.

Next