Advertisement

ಗ್ರಾಪಂಗಳಲ್ಲಿ ಅಕ್ರಮ ಇ ಖಾತೆ: ತನಿಖೆಗೆ ಆಗ್ರಹ

03:08 PM Jul 04, 2022 | Team Udayavani |

ಬಂಗಾರಪೇಟೆ: ತಾಲೂಕಿನ ಗ್ರಾಪಂಗಳಲ್ಲಿ ಇ ಹಾಗೂ ಬಿ ಖಾತೆಗಳ ಅಕ್ರಮ, ನರೇಗಾ ಕಾಮಗಾರಿಗಳಲ್ಲಿ ನಡೆ ದಿರುವ ಭ್ರಷ್ಟಾಚಾರ ತನಿಖೆಗೆ ವಿಶೇಷ ತಂಡ ರಚನೆ, ಗ್ರಾಮೀಣ ಪ್ರದೇಶ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ರೈತ ಸಂಘವು ಪಟ್ಟಣದಲ್ಲಿನ ತಾಪಂ ಕಚೇರಿ ಮುಂದೆ ಪ್ರತಿಭಟಿಸಿತು.

Advertisement

ತಾಪಂ ಕಚೇರಿ ಮುಂದೆ ಪ್ರತಿಭಟಿಸಿ ತಹಶೀಲ್ದಾರ್‌ ಎಂ.ದಯಾನಂದ್‌ಗೆ ಮನವಿ ನೀಡಿ ಮಾತನಾಡಿದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್‌, ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋಟ್ಯಂತರ ರೂ. ಅನುದಾನ ಗ್ರಾಪಂಗಳಿಗೆ ಬಿಡುಗಡೆ ಮಾಡುತ್ತಿದ್ದರೂ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಜನಪ್ರತಿನಿಧಿಗಳಿಗೆ ಹಳ್ಳಿಗಳು ಜ್ಞಾಪಕಕ್ಕೆ ಬರುತ್ತವೆ ಎಂದು ವ್ಯಂಗ್ಯವಾಡಿದರು.

ನಿವೇಶನ ರಹಿತ ಬಡವರಿಗೆ ನೀಡಬೇಕಾದ ನಿವೇಶನಗಳು ಬಲಾಡ್ಯರ ಪಾಲಾಗುತ್ತಿವೆ. ಒಂದು ಸೈಟ್‌ಗಾಗಿ ಜನ ಕಚೇರಿಗಳಿಗೆ ಅಲೆದು ಸುಸ್ತಾದರೂ ಸಿಗುತ್ತಿಲ್ಲ ಎಂದು ಹೇಳಿದರು.

ಇ, ಬಿ-ಖಾತೆಯಲ್ಲಿ ಅಕ್ರಮ: ಕಡಿಮೆ ಬೆಲೆಯಲ್ಲಿ ನಿವೇಶನ ನೀಡುತ್ತೇವೆ ಎಂದು ಬಡವರನ್ನು ವಂಚಿಸಿ ಗ್ರಾಪಂ ವ್ಯಾಪ್ತಿಗಳಲ್ಲಿ ಗಲ್ಲಿಗೊಂದು ಅಕ್ರಮ ಲೇಔಟ್‌ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇಂತಹ ದೊಡ್ಡ ದಂಧೆಯೇ ನಡೆಯುತ್ತಿದೆ. ಅದಕ್ಕೆ ಬೆಂಗಾವಲಾಗಿ ಅಧಿಕಾರಿಗಳು ನಿಂತಿದ್ದಾರೆ. ಯಾವುದೇ ಖಾತೆ ಮಾಡಬೇಕಾದರೆ ಸಂಬಂಧಪಟ್ಟ ಪಿಡಿಒಗಳು ಸ್ಥಳ ಪರಿಶೀಲನೆ ಮಾಡಿ ದಾಖಲೆಗಳನ್ನು ನೀಡಬೇಕು. ಕಾನೂನು ಬದ್ಧವಾಗಿ ಮಾಡಬೇಕು. ಅದನ್ನು ಬಿಟ್ಟು ಕೆರೆ, ರಾಜಕಾಲುವೆ, ಗೋಮಾಳ, ಗುಂಡು ತೋಪು ಗಳಿಗೂ ಖಾತೆ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳ ವರ್ಗಾವಣೆ ಆಗಲಿ: ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಗ್ರಾಪಂಗಳಲ್ಲಿ ಹೆಜ್ಜೆ ಹೆಜ್ಜೆಗೂ ನಡೆಯುವ ಭ್ರಷ್ಟಾಚಾರ ಅಲ್ಲಿನ ಕೆಳಹಂತದ ಬಿಲ್‌ಕಲೆಕ್ಟರ್‌, ವಾಟರ್‌ವೆುನ್‌, ಕಂಪ್ಯೂಟರ್‌ ಆಪರೇಟರ್‌ಗಳ ಪಾತ್ರ ಬಹುದೊಡ್ಡದಾ ಗಿದೆ. ಭ್ರಷ್ಟಾಚಾರ ನಿಲ್ಲಬೇಕು, ಹಳ್ಳಿಗಳ ಅಭಿವೃದ್ಧಿ ಆಗಬೇಕಾದರೆ ವರ್ಷಕ್ಕೊಮ್ಮೆ ಕಡ್ಡಾಯವಾಗಿ ಅಧಿ ಕಾರಿಗಳ ವರ್ಗಾವಣೆ ಆಗಲೇಬೇಕು ಎಂದು ಒತ್ತಾಯಿಸಿದರು.

Advertisement

ಯೋಜನೆ ದುರ್ಬಳಕೆ: ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯ, ಜನಸಾಮಾನ್ಯರ ಸಮಸ್ಯೆ ಆಲಿಸಿ, ಪರಿಹಾರ ನೀಡುವ ಗ್ರಾಮಸಭೆಗಳು ಛಾಯಾಚಿತ್ರಕ್ಕೆ ಸೀಮಿತವಾಗಿವೆ. ಹಳ್ಳಿಗಳಿಗೆ ಚರಂಡಿ, ವಿದ್ಯುತ್‌ ದೀಪ, ರಸ್ತೆಗಳ ಅಭಿವೃದ್ಧಿಗೆ ಬಿಡುಗಡೆಯಾಗುವ 15ನೇ ಹಣಕಾಸಿನ ಯೋಜನೆ ದುರ್ಬಳಕೆ ಆಗಿದ್ದು, ತನಿಖೆ ಮಾಡಬೇಕು ಎಂದು ಹೇಳಿದರು.

ಗ್ರಾಪಂಗಳಲ್ಲಿ ನಡೆದಿರುವ ಇ, ಬಿ ಖಾತೆಗಳ ಅಕ್ರಮ ಹಾಗೂ ನರೇಗಾದ ಕಾಮಗಾರಿಗಳಲ್ಲಿ ನಡೆದಿ ರುವ ಭ್ರಷ್ಟಾಚಾರವನ್ನು ತನಿಖೆ ಮಾಡಲು ವಾರದೊ ಳಗೆ ವಿಶೇಷ ತಂಡ ರಚನೆ ಮಾಡಬೇಕು, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ನೀಡಿ ಆಗ್ರಹಿಸಿದರು.

ಹೋರಾಟದಲ್ಲಿ ತಾಲೂಕು ಅಧ್ಯಕ್ಷ ಮರಗಲ್‌ ಮುನಿಯಪ್ಪ, ಬೂದಿಕೋಟೆ ಅನಿಲ್‌, ತಾಲೂಕು ಅಧ್ಯಕ್ಷ ಚಲಪತಿ, ಐತಾಂಡಹಳ್ಳಿ ಮುನ್ನಾ, ರಾಮಸಾಗರ ಸಂದೀಪ್‌ಗೌಡ, ಸಂದೀಪ್‌ರೆಡ್ಡಿ, ಬೂದಿಕೋಟೆ ನಾಗಯ್ಯ, ಮುನಿರಾಜು, ಕಾಮಸಮುದ್ರ ಮುನಿಕೃಷ್ಣ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್‌, ಸುರೇಶ್‌ಬಾಬು, ವೇಣು, ಗಿರೀಶ್‌, ನಾಗೇಶ್‌, ತೇಜಸ್‌, ತೆರ್ನಹಳ್ಳಿ ಆಂಜಿನಪ್ಪ, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್‌, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next