Advertisement

ಹಿಂದುತ್ವದ ಅಕ್ರಮ ಸಾಗುವಳಿ

10:14 AM Jan 12, 2018 | |

ಕಲಬುರಗಿ: ರಾಜ್ಯದಲ್ಲಿ ಬಿಜೆಪಿ ಕೇವಲ ಜಾತಿಗಳ ಮಧ್ಯೆ ಜಗಳ ಹಚ್ಚುತ್ತಿಲ್ಲ, ಬದಲಿಗೆ ಹಿಂದುತ್ವವನ್ನು ಅಕ್ರಮವಾಗಿ ಸಾಗುವಳಿ ಮಾಡುತ್ತಿದೆ ಎಂದು ಕೆಪಿಸಿಸಿ (ಐ) ಅಧ್ಯಕ್ಷ ಡಾ| ಜಿ.ಪರಮೇಶ್ವರ ಹೇಳಿದರು. ಗುರುವಾರ ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸಿರಗಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ನಡೆ ವಿಜಯದ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಈ ಅಕ್ರಮ ಸಾಗುವಳಿ ನಡೆಯಲು ಕಾಂಗ್ರೆಸ್‌ ಬಿಡುವುದಿಲ್ಲ. ಕಾಂಗ್ರೆಸ್‌ ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಹಿಂದೂತ್ವವನ್ನು ಪಾಲಿಸುತ್ತದೆ. ಹಿಂದೂತ್ವದ ಹೆಸರಿನಲ್ಲಿ ಜನರ ಮನಸ್ಸು ಕೆಡಿಸಿ ಹೆಣಗಳನ್ನು ಉರುಳಿಸುವುದರಿಂದ ಅಭ್ಯುದಯ ಸಾಧಿಸಲು ಸಾಧ್ಯವಿಲ್ಲ ಎಂದರು.

ಕಳೆದ 103 ಮೂರು ವರ್ಷಗಳಿಂದ ಮುಸ್ಲಿಂ, ಕ್ರಿಶ್ಚಿಯನ್‌, ಸಿಖ್‌ ಸೇರಿದಂತೆ ದೇಶದ ಎಲ್ಲ ಸಮುದಾಯಗಳನ್ನು ನಾವು ಒಂದುಗೂಡಿಸಿಕೊಂಡು ಬರುತ್ತಿದ್ದೇವೆ. ಯಾವ ಹಿಂದೂತ್ವ ಬೇಕು ಎಂದು ಜನತೆ ನಿರ್ಧರಿಸಲಿದ್ದಾರೆ. ರಾಜ್ಯದಲ್ಲಿ ಅಮಿತ್‌ ಶಾ, ಮೋದಿ, ಯಡಿಯೂರಪ್ಪ ಹಾಗೂ ಅನಂತಕುಮಾರ ಒಟ್ಟಾಗಿ ಬಂದರೂ ರಾಜ್ಯದಲ್ಲಿ ಜಾತಿ ಬೀಜ ಬಿತ್ತಿ ಬೆಳೆ ಪಡೆಯುವುದು ಕಷ್ಟಸಾಧ್ಯ ಎಂದರು.

ಕಾಂಗ್ರೆಸ್‌ ಸರಕಾರ ಭ್ರಷ್ಟಾಚಾರ ಮಾಡಿದೆ ಎಂದು ಹೇಳುವ ಬಿಜೆಪಿ ನಾಯಕರಿಗೆ ಕನಿಷ್ಠ ಜ್ಞಾನವೂ ಇಲ್ಲ. ಹಾಗೊಂದು ವೇಳೆ ಭ್ರಷ್ಟಾಚಾರದ ದಾಖಲೆಗಳಿದ್ದರೆ ತೋರಿಸಿ. ಆಗ ಜನರು ಎಲ್ಲವನ್ನು ತೀರ್ಮಾನ ಮಾಡುತ್ತಾರೆ. ನಿಜಕ್ಕೂ ತಾಕತ್ತು ಇದ್ದರೆ ದಾಖಲೆಗಳಿಟ್ಟುಕೊಂಡು ಬಹಿರಂಗ ಚರ್ಚೆಗೆ ಬನ್ನಿ ಎಂದು ಆಹ್ವಾನ ನೀಡಿದರು.

ರಾಜ್ಯದಲ್ಲಿ ಗೋ ಹತ್ಯೆ ನಿಷೇಧಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂದು ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದರು. ಅವರು ಮೊದಲು ಗೋವಾದಲ್ಲಿರುವ ತಮ್ಮ ಪಕ್ಷದ ಮುಖ್ಯ ಮಂತ್ರಿಗಳಿಗೆ ಈ ಕಿವಿಮಾತು ಹೇಳಿದರೆ ಸರಿಯಾಗಿ ಇರುತ್ತದೆ ಎಂದು ತಿರುಗೇಟು ನೀಡಿದರು.

Advertisement

371 (ಜೆ)ನೇ ಕಲಂ ಜಾರಿಯಿಂದ ಹೈಕ ಭಾಗ ಅಭಿವೃದ್ಧಿಯತ್ತ ಸಾಗಿದೆ. ಕಳೆದ ನಾಲ್ಕು ವರ್ಷದ ಆಡಳಿತ ಅವಧಿಯಲ್ಲಿ ರಾಜ್ಯ ಕಾಂಗ್ರೆಸ್‌ ಸರಕಾರ 4.5 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ ಈ ಭಾಗದ ಸಾಗುತ್ತಿರುವದಕ್ಕೆ ಕಾಂಗ್ರೆಸ್‌ ಕಾರಣವಾಗಿದೆ. ಹೈದ್ರಾಬಾದ ಕರ್ನಾಟಕ ಕಾಂಗ್ರೆಸ್‌ ಪಕ್ಷದ ಭದ್ರಕೋಟೆಯಾಗಿದ್ದು, ಈ ಬಾರಿಯೂ ಕಾಂಗ್ರೆಸ್‌ ಪಕ್ಷಕ್ಕೆ ಸಂಪೂರ್ಣ ಬೆಂಬಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕೇಂದ್ರ ಸಚಿವರೊಬ್ಬರು ಸಂವಿಧಾನವನ್ನೇ ಬದಲಿಸುತ್ತೇನೆ.. ಅಂಬೇಡ್ಕರ್‌ ಸ್ಮೃತಿ ಬದಲಾಯಿಸುತ್ತೇವೆ ಎನ್ನುವ ದೈರ್ಯ ಮಾಡಿರುವುದು ನೋಡಿದರೆ ಅಂತಹ ಪಕ್ಷದಿಂದ ಜನರು ರಾಜ್ಯದಲ್ಲಿ ಏನನ್ನು ನಿರೀಕ್ಷೆ ಮಾಡಲು ಸಾಧ್ಯ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಒಬ್ಬ ತಿಳಿಗೇಡಿ ಮಂತ್ರಿ ತನ್ನ ಅಹಂಕಾರ ಪ್ರದರ್ಶಿಸಿದರೋ, ಪಕ್ಷದ ಒಳನೀತಿ ಹೇಳಿದರೋ ಅದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು ಎಂದರು. 

ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿದರು. ಈ ವೇಳೆ ಚಂದ್ರಶೇಖರ ಪಾಟೀಲರನ್ನು ಮುಂಬರುವ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಲಾಯಿತು. ಐಟಿಬಿಟಿ ಹಾಗೂ ಪ್ರವಾಸೊದ್ಯಮ ಸಚಿವ
ಪ್ರಿಯಾಂಕ್‌ ಖರ್ಗೆ, ಜೇವರ್ಗಿ ಶಾಸಕರಾದ ಡಾ| ಅಜಯಸಿಂಗ್‌, ಉಮೇಶ ಜಾಧವ್‌, ಶರಣಪ್ಪ ಮಟ್ಟೂರ, ವಸಂತಕುಮಾರ, ಅಲ್ಲಮಪ್ರಭು ಪಾಟೀಲ, ಎಸ್‌. ಆರ್‌. ಪಾಟೀಲ, ಸಿ.ಎ. ಪಾಟೀಲ, ಡಾ| ರಷೀದ್‌, ಶಾಸಕ ಜಿ. ರಾಮಕೃಷ್ಣ, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಕೆಪಿಸಿಸಿ ಕಲಬುರಗಿ ವಿಭಾಗಿಯ ಅಧ್ಯಕ್ಷ ಸಾಕೆ ಶೈಲೇಜನಾಥ, ಡಾ| ಚಂದ್ರಶೇಖರ ಪಾಟೀಲ, ಎ.ಎಂ. ಹಿಂಡಸಗೇರಿ, ಮಾರುತಿ ಮಹಾಲೆ, ಮಲ್ಲಿನಾಥ ಪಾಟೀಲ ಸೊಂತ, ಪಿ.ಎ. ಪಾಟೀಲ, ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ ಪಾಟೀಲ, ಚಂದ್ರಿಕಾ ಪರಮೇಶ್ವರ, ಸವಿತಾ ಸಜ್ಜನ, ಉಮಾದೇವಿ ದೊಡ್ಡಮನಿ, ಝರಣಪ್ಪ ಚಿಂಚೋಳಿ, ಬಾಬುರಾವ್‌ ಜಹಗೀರದಾರ ಹಾಗೂ ಜಿಲ್ಲಾ, ಗ್ರಾಮೀಣ ಮತಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷರು, ಪದಾಧಿ ಕಾರಿಗಳು ಹಾಜರಿದ್ದರು.

ಮೋದಿ-ಶಾ ಆಟ ಕರ್ನಾಟಕದಲ್ಲಿ ನಡೆಯೊಲ್ಲ: ಮೋದಿ ಮತ್ತು ಅಮಿತ್‌ ಶಾ ಆಟ ಕರ್ನಾಟಕದಲ್ಲಿ ನಡೆಯುವುದಿಲ್ಲ. ಇಲ್ಲಿನ ಜನರು ಸಾಮರಸ್ಯ ಹಾಗೂ ಜಾತ್ಯತೀತ ಮನೋಭಾವ ಹೊಂದಿದ್ದಾರೆ. ಇದಕ್ಕೆ ಮಂಗಳೂರು ಘಟನಾವಳಿಗಳಲ್ಲಿ ವ್ಯಕ್ತವಾದ ಭಾವನೆಯೇ ಸಾಕ್ಷಿಯಾಗಿದೆ. ಇದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು. ಅಭ್ಯುದಯ ಹಾಗೂ ಅಭಿವೃದ್ಧಿ ಎಂದರೆ, ಜನರಲ್ಲಿ ಭಯ ಹುಟ್ಟಿಸಿ ಜಾತಿಗಳ ಮಧ್ಯೆ ವಿರಸ ಬಿತ್ತಿ ನೆಮ್ಮದಿ ಕೆಡಿಸುವುದಲ್ಲ. ಯಾವ ರಾಜ್ಯದಲ್ಲಿ ನೆಮ್ಮದಿ ಇರುವುದಿಲ್ಲವೋ ಅಲ್ಲಿ ಅಭಿವೃದ್ಧಿ ಕಾಣುವುದು ಕಷ್ಟ .
 ಡಾ| ಮಲ್ಲಿಕಾರ್ಜುನ ಖರ್ಗೆ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next