ಶಹಾಪುರ: ತಾಲೂಕಿನ ವಡಗೇರಾ ಗ್ರಾಮದಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಹತ್ತಿ ವ್ಯಾಪಾರ ವಹಿವಾಟು ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೌಲಾಲಿ ಸೇರಿದಂತೆ ಇತರೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಹತ್ತಿ ತುಂಬಿದ್ದ ನಾಲ್ಕು ಲಾರಿಗಳನ್ನು ಎಪಿಎಂಸಿ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಗುರುವಾರ ನಡೆದಿದೆ.
ನಾಲ್ಕು ಲಾರಿಯಲ್ಲಿ ಅಂದಾಜು 250 ಕ್ವಿಂಟಲ್ ಹತ್ತಿ ಇರಬಹುದು. ಇದರ ಮೌಲ್ಯ ಅಂದಾಜು 12.50 ಲಕ್ಷ ರೂ. ಆಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ರಂಗನಾಥ ತಿಳಿಸಿದ್ದಾರೆ.
ಸುದ್ದಿಗಾರರಿಗೆ ಮಾತನಾಡಿದ ಸಹಾಯಕ ನಿರ್ದೇಶಕ ಭೀಮರಾಯ, ಇದುವರೆಗೆ 113 ಹತ್ತಿ ಲಾರಿಗಳನ್ನು ಜಪ್ತಿ ಮಾಡಿ 10 ಲಕ್ಷಕ್ಕಿಂತಲೂ ಹೆಚ್ಚಿನ ದಂಡ ವಸೂಲಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು.
ನಿಗದಿಪಡಿಸಿದ ಹತ್ತಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡುವಂತೆ ತಿಳಿಸಲಾಗುವುದು. ತಾಲೂಕಿನಲ್ಲಿ ರಸ್ತೆ ಬದಿ ಸಾಕಷ್ಟು ಸಂಖ್ಯೆಯಲ್ಲಿ ಅಕ್ರಮ ಹತ್ತಿ ಮಾರಾಟ ಕೇಂದ್ರಗಳು ಹುಟ್ಟಿಕೊಂಡಿವೆ. ರೈತರು ಎಚ್ಚರ ವಹಿಸಬೇಕಿದೆ.
ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹತ್ತಿ ಮಿಲ್‌ಗಳಿವೆ. ಪ್ರತಿಯೊಬ್ಬ ರೈತರು ನಿಯಮಾನುಸಾರವಾಗಿ ಪರವಾನಗಿ ಪಡೆದುಕೊಂಡ ಮಿಲ್‌ಗಳಿಗೆ ಹತ್ತಿ ಮಾರಾಟ ಮಾಡಬೇಕು. ಮಿಲ್‌ಗಳು ಪರವಾನಿಗೆ ಪಡೆದಿರುತ್ತವೆ. ಹಾಗಾಗಿ ಯಾವುದೇ ಮೋಸ ಮಾಡಲು ಸಾಧ್ಯವಿಲ್ಲ. ಅಕ್ರಮವಾಗಿ ಖರೀದಿಸುವರಿಗೆ ಹತ್ತಿ ಮಾರಾಟ ಮಾಡಿದ್ದಲ್ಲಿ ತೂಕದಲ್ಲಿ ಮೋಸ ಸೇರಿದಂತೆ ಬಾಕಿ ದುಡ್ಡು ನೀಡದೆ ಪರಾರಿಯಾದ ಸಾಕಷ್ಟು ಘಟನೆಗಳು ಕಣ್ಮುಂದೆ ಇವೆ. ಅಲ್ಲದೆ ಅವರು ಯಾವುದೇ ರಸೀದಿ ಕೊಡುವುದಿಲ್ಲ ಎಂದು ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸಿದ್ದರೂ ಇಂತಹ ಘಟನೆಗಳು ನಡೆಯುತ್ತಿವೆ. ಪರವಾನಗಿ ಪಡೆದ ಹತ್ತಿ ಖರೀದಿದಾರರಿಗೆ ಮಾರಾಟ ಮಾಡಬೇಕು ಎಂದು ಸರ್ಕಾರ ನಿರ್ದೇಶನ ಇದ್ದರೂ ಎಪಿಎಂಸಿ ಪರವಾನಗಿ ಇಲ್ಲದಿರುವ ವ್ಯಾಪಾರಸ್ಥರ ಬಳಿ ರೈತರು ಹತ್ತಿ ವ್ಯಾಪಾರ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಇದರಿಂದ ರೈತರ ಶ್ರಮಕ್ಕೆ ಸೂಕ್ತ ಫಲ ಸಿಗುವುದಿಲ್ಲ. ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದರು.