ಮಡಿಕೇರಿ: ಸೋಮವಾರಪೇಟೆಯ ಶನಿವಾರ ಸಂತೆಯಲ್ಲಿ ಟೆಂಪೋ ಟ್ರಾವೆಲರ್‌ವೊಂದರಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 8 ಗೋವುಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ರಕ್ಷಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಘಟನೆಯ ಬಳಿಕ ಉದ್ರಿಕ್ತ ಸಾರ್ವಜನಿಕರು ಟಿಟಿ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.
ಅಕ್ರಮ ಗೋಸಾಗಾಟದ ಖಚಿತ ಮಾಹಿತಿಯ ಕಾರ್ಯಾಚರಣೆಗಿಳಿದ ಇಬ್ಬರು ಪೊಲೀಸ್ ಪೇದೆಗಳು ಟಿಟಿಯನ್ನು ಚೇಸ್ ಮಾಡಿದ್ದಾರೆ. 10 ಕೀ.ಮೀಗೂ ದೂರ ವಾಹನ ಚೇಸ್ ಮಾಡಿದರೂ ವಾಹನ ನಿಲ್ಲಿಸದಾಗ ಹಾಸನದ ಗಡಿ ಭಾಗವಾದ ಕೊಡ್ಲಿಪೇಟೆ ಬಳಿ ಅಡ್ಡ ಬಂದಿದ್ದು ಈ ವೇಳೆ ಬೈಕ್‌ಗೆ ಟಿಟಿಯನ್ನು ಗುದ್ದಿದ್ದು ಬೈಕ್ ನಜ್ಜುಗುಜ್ಜಾಗಿದೆ. ಪವಾಡ ಸದೃಶವಾಗಿ ಪಾರಾದ ಇಬ್ಬರು ಪೊಲೀಸರು ಕಡೆಗೂ ಅಕ್ರಮ ಗೋಸಾಗಟ ನಡೆಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದು ಐವರು ಪರಾರಿಯಾಗಿದ್ದಾರೆ.
ಘಟನೆಯ ಬಳಿಕ ಉದ್ರಿಕ್ತ ಸಾರ್ವಜನಿಕರು ಗೋವುಗಳನ್ನು ರಕ್ಷಿಸಿ ಮೇವು ಮತ್ತು ನೀರು ನೀಡಿದ್ದು, ಟಿಟಿ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಬಂಧಿತ ಆರೋಪಿಗಳು ಮಂಗಳೂರು ಮೂಲದವರಾಗಿದ್ದು,ಅಕ್ರಮ ಕಸಾಯಿಖಾನೆಗೆ ಗೋವುಗಳನ್ನು ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿ ನಿತ್ಯವೂ ಈ ಭಾಗದಿಂದ ಗೋವುಗಳನ್ನು ಅಕ್ರಮವಾಗಿ ಕಾರು, ಟಿಟಿ ವಾಹನಗಳಲ್ಲಿ ಮಂಗಳೂರಿನತ್ತ ಹಿಂಸಾತ್ಮಕವಾಗಿ ಸಾಗಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.