Advertisement

ಅಕ್ರಮ ಕಟ್ಟಡ: ತಪ್ಪಿತಸ್ಥ ಅಧಿಕಾರಿಗಳಿಗೆ ದಂಡ

11:26 PM Nov 18, 2019 | Lakshmi GovindaRaj |

ಬೆಂಗಳೂರು: ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು “ಕರ್ನಾಟಕ ಪೌರ ನಿಗಮ ಕಾಯ್ದೆ-1976ರ ಸೆಕ್ಷನ್‌ 321 ಬಿ ಹಾಗೂ “ಕರ್ನಾಟಕ ಪೌರಸಭೆಗಳ ಕಾಯ್ದೆ-1964ರ ಸೆಕ್ಷನ್‌ 187 ಬಿ ಪ್ರಕಾರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ದಂಡ ಪ್ರಮಾಣ ನಿಗದಿಪಡಿಸಿರುವ ಕುರಿತ ನಿಯಮಗಳ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

Advertisement

ಈ ಸಂಬಂಧ ವಕೀಲ ಎಸ್‌. ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ಹಾಗೂ ನ್ಯಾ. ಪ್ರದೀಪ್‌ ಸಿಂಗ್‌ ಯೆರೂರ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಆಗ, ಸರ್ಕಾರದ ಪರ ವಕೀಲರಾದ ಪಿ.ಬಿ ಅಚ್ಚಪ್ಪ ಅವರು, ಪಾಲಿಕೆಗಳು ಹಾಗೂ ಪೌರಸಭೆಗಳಿಗೆ ಪ್ರತ್ಯೇಕವಾಗಿ ನ.16ರಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಎನ್‌.ಕೆ. ಲಕ್ಷ್ಮೀಸಾಗರ್‌ ಹೊರಡಿಸಿರುವ ಅಂತಿಮ ಅಧಿಸೂಚನೆ ಪ್ರತಿಯೊಂದಿಗೆ ರಾಜ್ಯ ಸರ್ಕಾರದ ಪರವಾಗಿ ನ್ಯಾಯಪೀಠಕ್ಕೆ ಮೆಮೋ ಅನ್ನು ನ.18ರಂದು ಸಲ್ಲಿಸಿದರು. ಕರಡು ಅಧಿನಿಯಮಗಳನ್ನು ಅ.4ರ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಇದೀಗ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಆಕ್ಷೇಪ: ಅರ್ಜಿದಾರರೂ ಆದ ವಕೀಲ ಎಸ್‌. ಉಮಾಪತಿ ವಾದ ಮಂಡಿಸಿ, ಕರಡು ನಿಯಮಗಳನ್ನು ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿಲ್ಲ. ನಿಯಮಗಳೇನು ಎಂಬುದು ಸಾರ್ವಜನಿಕರಿಗೆ ಮಾಹಿತಿ ಇಲ್ಲದಂತಾಗಿದೆ ಎಂದು ದೂರಿದರು. ಅದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ಕರಡು ನಿಯಮಗಳನ್ನು ಅ.4ರ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ ಎಂದರು. ಅದಕ್ಕೆ ಅರ್ಜಿದಾರರು, ಕರಡು ನಿಯಮಗಳನ್ನು ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿರುವ ಬಗ್ಗೆ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಯಾವುದೇ ಮಾಹಿತಿ ಇಲ್ಲ. ಪ್ರತಿ ಗುರುವಾರ ರಾಜ್ಯಪತ್ರ ಪ್ರಕಟಿಸಲಾಗುತ್ತಿದೆ.

ಕಳೆದೊಂದು ತಿಂಗಳಿಂದ ಕರಡು ನಿಯಮಗಳ ಅಧಿಸೂಚನೆ ಪ್ರಕಟಗೊಂಡಿಲ್ಲ. ಗೆಜೆಟ್‌ನ ಪ್ರತಿಯೊಂದನ್ನು ಕೋರ್ಟ್‌ಗೆ ಸಲ್ಲಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು. ಕರಡು ನಿಯಮಗಳನ್ನು ಪ್ರಶ್ನಿಸಲು ಮೂಲ ಅರ್ಜಿಯಲ್ಲಿ ಮಾರ್ಪಾಡು ಮಾಡುವಂತೆ ಅರ್ಜಿದಾರರಿಗೆ ಅನುಮತಿ ನೀಡಿದ ನ್ಯಾಯಪೀಠ, ಮೂರು ವಾರಗಳಲ್ಲಿ ಮಾರ್ಪಡಿತ ಅರ್ಜಿ ಸಲ್ಲಿಸಲು ನಿರ್ದೇಶನ ನೀಡಿ ವಿಚಾರಣೆಯನ್ನು ಡಿ.9ಕ್ಕೆ ಮುಂದೂಡಿತು.

Advertisement

ಅಧಿಸೂಚನೆಯಲ್ಲಿ ಏನಿದೆ?
ಪಾಲಿಕೆಗಳ ವ್ಯಾಪ್ತಿಯಲ್ಲಿ
* ಪೌರ ನಿಗಮ ಕಾಯ್ದೆ-1976ರ ಸೆಕ್ಷನ್‌ 321 ಬಿ ಪ್ರಕಾರ ಪಾಲಿಕೆಗಳ ಹಂತದಲ್ಲಿ ಸಂಬಂಧಪಟ್ಟ ಅಧಿಕಾರಿಯು ತನ್ನ ಅಧಿಕಾರವಧಿ ಮತ್ತು ಅಧಿಕಾರ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ತಡೆಯಲು ವಿಫ‌ಲವಾದ ಬಗ್ಗೆ ದೂರು ಬಂದರೆ ಅಥವಾ ಆಯುಕ್ತರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದ ಬಳಿಕ ದಂಡ ವಿಧಿಸಲು ಕ್ರಮ ಕೈಗೊಳ್ಳಬೇಕು.

* ಪಾಲಿಕೆಗಳ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ತಪ್ಪು ಎಸಗಿದರೆ 25 ಸಾವಿರಕ್ಕೆ ಕಡಿಮೆ ಇಲ್ಲದಂತೆ ಮತ್ತು 50 ಸಾವಿರ ರೂ.ಗೆ ಮೀರದಂತೆ ದಂಡ ವಿಧಿಸಬಹುದು. ಎರಡನೇ ತಪ್ಪಿಗೆ 50 ಸಾವಿರಕ್ಕೆ ಕಡಿಮೆ ಇಲ್ಲದಂತೆ ಮತ್ತು 1 ಲಕ್ಷ ರೂ.ಗೆ ಮೀರದಂತೆ ದಂಡ ವಿಧಿಸಬಹುದು. ಮೂರನೇ ಮತ್ತು ಅದರ ನಂತರದ ಪ್ರತಿ ತಪ್ಪಿಗೆ ಆಯುಕ್ತರು ಕಾಯ್ದೆಯ ಸೆಕ್ಷನ್‌ 90ರಡಿ ಕ್ರಮ ಜರುಗಿಸಬಹುದು.

* ದಂಡ ಪಾವತಿಸಿದ ಅಧಿಕಾರಿಯು ನೀಡಿದ್ದ ಕಟ್ಟಡ ಯೋಜನಾ ಮಂಜೂರಾತಿಗೆ ಅನುಮೋದನೆ ನೀಡುವಂತಿಲ್ಲ.

* ಸಂತ್ರಸ್ತ ಅಥವಾ ಬಾಧಿತ ಅಧಿಕಾರಿಯು ಸಂಬಂಧಪಟ್ಟ ಪ್ರಾದೇಶಿಕ ಆಯುಕ್ತರಿಗೆ 30 ದಿನಗಳಲ್ಲಿ ಮನವಿ ಸಲ್ಲಿಸಬೇಕು. ಆ ಅಧಿಕಾರಿಗೆ ಶೋಕಾಸ್‌ ನೋಟಿಸ್‌ ನೀಡಿ ಅವರ ವಾದ ಕೇಳಿ, ಮನವಿ ಸಲ್ಲಿಸಿದ 45 ದಿನಗಳಲ್ಲಿ ಮನವಿಯನ್ನು ಇತ್ಯರ್ಥಪಡಿಸಬೇಕು. ಪ್ರಾದೇಶಿಕ ಆಯುಕ್ತರ ತೀರ್ಮಾನವೇ ಅಂತಿಮ.

ಪೌರಸಭೆಗಳ ವ್ಯಾಪ್ತಿಯಲ್ಲಿ
* ಕರ್ನಾಟಕ ಪೌರಸಭೆಗಳ ಕಾಯ್ದೆ-1964ರ ಸೆಕ್ಷನ್‌ 187 ಬಿ ಪ್ರಕಾರ ಪೌರಸಭೆಗಳ ಹಂತದಲ್ಲಿ ಸಂಬಂಧಪಟ್ಟ ಅಧಿಕಾರಿಯು ತನ್ನ ಅಧಿಕಾರವಧಿ ಮತ್ತು ಅಧಿಕಾರ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ತಡೆಯಲು ವಿಫ‌ಲವಾದ ಬಗ್ಗೆ ದೂರು ಬಂದರೆ ಅಥವಾ ಜಿಲ್ಲಾಧಿಕಾರಿ ಇಲ್ಲವೇ ಮುಖ್ಯಾಧಿಕಾರಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದ ಬಳಿಕ ದಂಡ ವಿಧಿಸಲು ಕ್ರಮ ಕೈಗೊಳ್ಳಬೇಕು.

* ಪೌರಸಭೆಗಳ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ತಪ್ಪು ಎಸಗಿದರೆ 10 ಸಾವಿರಕ್ಕೆ ಕಡಿಮೆ ಇಲ್ಲದಂತೆ ಮತ್ತು 25 ಸಾವಿರ ರೂ.ಗೆ ಮೀರದಂತೆ ದಂಡ ವಿಧಿಸಬಹುದು. ಎರಡನೇ ತಪ್ಪಿಗೆ 25 ಸಾವಿರಕ್ಕೆ ಕಡಿಮೆ ಇಲ್ಲದಂತೆ ಮತ್ತು 50 ಸಾವಿರ ರೂ.ಗೆ ಮೀರದಂತೆ ದಂಡ ವಿಧಿಸಬಹುದು. ಮೂರನೇ ಮತ್ತು ಅದರ ನಂತರದ ಪ್ರತಿ ತಪ್ಪಿಗೆ ಆಯುಕ್ತರು ಕಾಯ್ದೆಯ ಸೆಕ್ಷನ್‌ 342ರಡಿ ಕ್ರಮ ಜರುಗಿಸಬಹುದು.

* ದಂಡ ಪಾವತಿಸಿದ ಅಧಿಕಾರಿಯು ನೀಡಿದ್ದ ಕಟ್ಟಡ ಯೋಜನಾ ಮಂಜೂರಾತಿಗೆ ಅನುಮೋದನೆ ನೀಡುವಂತಿಲ್ಲ.

* ಸಂತ್ರಸ್ತ ಅಥವಾ ಬಾಧಿತ ಅಧಿಕಾರಿಯು ಸಂಬಂಧಪಟ್ಟ ಜಿಲ್ಲಾಧಿಕಾರಿಗೆ 30 ದಿನಗಳಲ್ಲಿ ಮನವಿ ಸಲ್ಲಿಸಬೇಕು. ಆ ಅಧಿಕಾರಿಗೆ ಶೋಕಾಸ್‌ ನೋಟಿಸ್‌ ನೀಡಿ ಅವರ ವಾದ ಕೇಳಿ, ಮನವಿ ಸಲ್ಲಿಸಿದ 45 ದಿನಗಳಲ್ಲಿ ಮನವಿಯನ್ನು ಇತ್ಯರ್ಥಪಡಿಸಬೇಕು. ಜಿಲ್ಲಾಧಿಕಾರಿಯ ತೀರ್ಮಾನವೇ ಅಂತಿಮ.

Advertisement

Udayavani is now on Telegram. Click here to join our channel and stay updated with the latest news.

Next