ಜೋಧ್‌ಪುರ/ ಮುಂಬಯಿ: ಕೃಷ್ಣಮೃಗ ಬೇಟೆ ಸಂಬಂಧ ದಾಖಲಾಗಿದ್ದ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಿಂದ ನಟ ಸಲ್ಮಾನ್ ಖಾನ್ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ರಾಜಸ್ಥಾನದ ಜೋಧ್‌ಪುರದ ಮುಖ್ಯ ಜ್ಯುಡಿಷಿಯಲ್ ಮ್ಯಾಜಿ ಸ್ಟ್ರೇಟ್ ಕೋರ್ಟ್ ಬುಧವಾರ ಈ ಆದೇಶ ನೀಡಿದೆ. 18 ವರ್ಷಗಳ ಹಿಂದೆ “ಹಮ್ ಸಾಥ್ ಸಾಥ್ ಹೈ’ ಸಿನೆಮಾ ಚಿತ್ರೀಕರಣದ ವೇಳೆ ಎರಡು ಕೃಷ್ಣಮೃಗಗಳನ್ನು ಹತ್ಯೆ ಮಾಡಲು ಈ ಶಸ್ತ್ರಾÕಸ್ತ್ರ ಬಳಕೆ ಮಾಡ ಲಾಗಿತ್ತು ಎಂದು ಬಾಲಿವುಡ್ ನಟನ ಮೇಲೆ ಆರೋಪ ಹೊರಿಸಲಾಗಿತ್ತು.
“ಸಲ್ಮಾನ್ ವಿರುದ್ಧದ ಆರೋಪ ಸಾಬೀತು ಮಾಡಲು ಸರಕಾರಿ ಪರ ವಕೀಲರು ವಿಫಲ ರಾಗಿದ್ದಾರೆ’ ಎಂದು ಅಭಿಪ್ರಾಯ ಪಟ್ಟು ಅವರನ್ನು ನ್ಯಾಯಾಧೀಶ ದಲ್ಪಾತ್ ಸಿಂಗ್ ರಾಜ್‌ಪುರೋಹಿತ್ ದೋಷಮುಕ್ತಗೊಳಿಸಿ ಆದೇಶ ನೀಡಿದ್ದಾರೆ. ತೀರ್ಪು ನೀಡುವ ಸಂದರ್ಭ ಸಲ್ಮಾನ್ ತನ್ನ ಸಹೋದರಿ ಅರ್ಪಿತಾ ಜತೆಗೆ ಹಾಜರಿದ್ದರು.
ತೀರ್ಪಿನ ಬಗ್ಗೆ ಸಲ್ಮಾನ್ ಅತೀವ ಸಂತೃಪ್ತಿ ವ್ಯಕ್ತ ಪಡಿಸಿದ್ದಾರೆ. ಆದರೆ, ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ಬಿ.ಎಸ್. ಭಾಟಿ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಮಾಡುವುದಾಗಿ ಹೇಳಿದ್ದಾರೆ.
ಪರವಾನಿಗೆ ಅವಧಿ ಮೀರಿಲ್ಲ: ಒಟ್ಟು 102 ಪುಟಗಳ ತೀರ್ಪಿನಲ್ಲಿ ನ್ಯಾಯಾಧೀಶ ರಾಜ್ ಪುರೋಹಿತ್ ಅವರು ಸಲ್ಮಾನ್ ಖಾನ್ “ಅವಧಿ ಮೀರಿದ ಪರವಾನಿಗೆ ಇರುವ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ ಎಂಬ ಆರೋಪ ರುಜುವಾತಾಗಿಲ್ಲ. ಹೀಗಾಗಿ, ಅವರ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿ ವಿಚಾರಣೆ ನಡೆಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
“ಸಲ್ಮಾನ್ ವಿರುದ್ಧ ಕೇಸು ದಾಖಲಿಸಲು ಹಿಂದಿನ ನ್ಯಾಯಾಧೀಶರು ಪ್ರಕರಣದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸದೆ ಅನುಮತಿ ನೀಡಿದ್ದರು. ಇದರಿಂದಾಗಿ ಅವರು ವಿನಾಕಾರಣ ತೊಂದರೆ ಅನುಭವಿಸಬೇಕಾಯಿತು’ ಎಂದು ಹೇಳಿದ್ದಾರೆ.