ಚಿಕ್ಕಬಳ್ಳಾಪುರ: ಕೋವಿಡ್ 19 ವೈರಸ್ ಹರಡದಂತೆ ಹಾಗೂ ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಿಲ್ಲಾದ್ಯಂತ ಎಲ್ಲಾ ರೀತಿಯ ಅಬಕಾರಿ ಸನ್ನದುಗಳನ್ನು ಕಳೆದ ಮಾ.21 ರಿಂದಲೇ ಮುಚ್ಚಿದ್ದರೂ ಜಿಲ್ಲೆಯಲ್ಲಿ ಲಾಕ್‌ಡೌನ್ ನಡುವೆಯು ಅಕ್ರಮವಾಗಿ ಎಗ್ಗಿಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ನಡೆದಿರುವುದು ಬೆಳಕಿಗೆ ಬಂದಿದೆ.
ಹೌದು, ಚಿಕ್ಕಬಳ್ಳಾಪುರ ಜಿಲ್ಲಾ ಅಬಕಾರಿ ಇಲಾಖೆಯಿಂದ ಮಾರ್ಚ್ 21 ರಿಂದ ಏ.14 ರವರೆಗೆ ಜಿಲ್ಲೆಯ ಸಾರ್ವಜನಿಕರಿಂದ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರ ಬಗ್ಗೆ ಕೇಳಿ ಬಂದ ದೂರುಗಳ ಅನ್ವಯ ಬರೋಬ್ಬರಿ 428 ಕಡೆ ದಾಳಿ ನಡೆಸಿರುವುದು ಇದಕ್ಕೆ ಜಾಥಾ ನಿದರ್ಶನವಾಗಿದೆ.
ಸಾವಿರಾರು ಲೀ. ಮದ್ಯ ವಶ: ಅಬಕಾರಿ ಇಲಾಖೆ ಅಧಿಕಾರಿಗಳು ನಡೆಸಿರುವ ಒಟ್ಟು 428 ದಾಳಿಗಳ ಪೈಕಿ 10 ಘೋರ ಪ್ರಕರಣಗಳು ಕೂಡ ದಾಖಲಾಗಿವೆ. ಈ ದಾಳಿಯಲ್ಲಿ ಒಟ್ಟು 1518.780 ಲೀ. ಅಕ್ರಮ ಮದ್ಯ, 357.025 ಲೀ. ಅಕ್ರಮ ಬಿಯರ್, 47 ಲೀ. ಸೇಂದಿ, 1.500 ಲೀ. ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಳ್ಳಲಾಗಿದೆ.
ಜತೆಗೆ ಅಕ್ರಮ ಮದ್ಯ ಮಾರಾಟಕ್ಕೆ ಬಳಕೆ ಮಾಡಲಾಗುತ್ತಿದ್ದ 2 ವಿವಿಧ ನಮೂನೆಯ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಮದ್ಯ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ದಸ್ತಗಿರಿಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸೀಲ್ ತೆಗೆದಿದ್ದ ಬಾರ್ ಪರವಾನಿಗೆ ಅಮಾನತು : ಜಿಲ್ಲೆಯಲ್ಲಿ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲುವಿನ ಎನ್.ವಿನಯ್ ಹೆಸರಿಗೆ 2019-20ನೇ ಸಾಲಿಗೆ ನವೀಕರಿಸಿರುವ ನಾಮಗೊಂಡ್ಲು ಗ್ರಾಮದ ಸರ್ವೆ ನಂ;160/3 ರಲ್ಲಿನ ಕಟ್ಟಡದಲ್ಲಿರುವ ನಾಗಜ್ಯೋತಿ ವೈನ್ಸ್ ಸಿಎಲ್-2 ಸನ್ನದಿಗೆ ಇಲಾಖಾ ಮೊಹರು ಮಾಡಿರುವ ಸೀಲ್‌ನ್ನು ತೆಗೆದು ಅಕ್ರಮವಾಗಿ ಮದ್ಯ ಮಾರಾಟ ಮಾಡಿರುವುದರಿಂದ ಸದರಿ ಸನ್ನದನ್ನು ಜಿಲ್ಲಾಧಿಕಾರಿಗಳು, ಏಪ್ರಿಲ್ 02 ರಂದು ರದ್ದುಪಡಿಸಿ ಎಂದು ಆದೇಶಿಸಿದ್ದಾರೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಜಿ.ಪಿ ನರೇಂದ್ರಕುಮಾರ್ ತಿಳಿಸಿದ್ದಾರೆ.
-ಕಾಗತಿ ನಾಗರಾಜಪ್ಪ