ಉಡುಪಿ/ಕೋಟ: ಪರ, ವಿರೋಧಗಳ ನಡುವೆಯೇ ಡಾ.ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಆಶ್ರಯದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಕೊಡ ಮಾಡುವ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಲು ಮಂಗಳವಾರ ನಟ ಪ್ರಕಾಶ್ ರೈ ಆಗಮಿಸಿದ್ದು, ಇನ್ನು ಕೆಲವೇ ಗಂಟೆಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
ನಟ ಪ್ರಕಾಶ್ ರೈ ಅವರನ್ನು ಕಾರಂತ ಹುಟ್ಟೂರ ಪ್ರಶಸ್ತಿಗೆ ಆಯ್ಕೆ ಮಾಡಿರುವ ಕುರಿತು ಹಿಂದೂಪರ, ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರೆ, ಕರ್ನಾಟಕ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾಕ ಸಂಘಟನೆಗಳ ಒಕ್ಕೂಟ, ಪ್ರಗತಿಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಏನೇ ಆಗಲಿ ಪ್ರಶಸ್ತಿ ಸ್ವೀಕರಿಸುವೆ: ಪ್ರಕಾಶ್ ರೈ
ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿರುವುದರಿಂದ ರೈ ಅವರಿಗೆ ಪ್ರಶಸ್ತಿ ನೀಡಬಾರದು ಎಂದು ಬಿಜೆಪಿ ಮುಖಂಡರು, ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.
ಏತನ್ಮಧ್ಯೆ ಮಂಗಳವಾರ ಬೆಳಗ್ಗೆ ಮಂಗಳವಾರ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಟ ಪ್ರಕಾಶ್ ರೈ, ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಪ್ರೀತಿ ಮಾಡುವವರು ಪ್ರೀತಿ ಮಾಡ್ತಾರೆ, ವಿರೋಧ ಮಾಡುವವರು ವಿರೋಧ ಮಾಡ್ತಾರೆ. ಏನೇ ಆಗಲಿ ಪ್ರಶಸ್ತಿ ಸ್ವೀಕರಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.