Advertisement
ಭವಿಷ್ಯದ ಸಾರಿಗೆ ಎನಿಸಿರುವ “ಹೈಪರ್‌ಲೂಪ್’ ಮತ್ತೆ ಸುದ್ದಿಯಲ್ಲಿದೆ. ಕೆಲವು ಕಂಪೆನಿಗಳ ಜತೆಗೂಡಿ ಐಐಟಿ ಮದ್ರಾಸ್ 410 ಮೀ. ಉದ್ದದ ಹೈಪರ್‌ಲೂಪ್ ಮಾರ್ಗವನ್ನು ಸಿದ್ಧಪಡಿಸಿದ್ದರಿಂದ ಈ ಕುರಿತು ಕುತೂಹಲ ಇನ್ನೂ ಹೆಚ್ಚಾಗಿದೆ. ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಪರಿಕಲ್ಪನೆಯ ಈ ಸಾರಿಗೆಯು ಎಷ್ಟು ಪ್ರಯೋಜನ ಹೊಂದಿದೆಯೋ ಅಷ್ಟೇ ತೊಂದರೆ ಹಾಗೂ ಸವಾಲುಗಳನ್ನೂ ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಹೈಪರ್‌ಲೂಪ್ ಸಾರಿಗೆ ವ್ಯವಸ್ಥೆಯ ಮತ್ತು ಅದರ ಸಾಧಕ-ಬಾಧಕಗಳ ಮಾಹಿತಿ ಇಲ್ಲಿದೆ.
ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ 2013ರಲ್ಲಿ ಮೊದಲ ಬಾರಿಗೆ ಈ ಹೈಪರ್‌ಲೂಪ್ ರೈಲು ಸಾರಿಗೆಯ ಪರಿಕಲ್ಪನೆಯನ್ನು ಹಂಚಿಕೊಂಡರು. ಹೈಪರ್‌ಲೂಪ್ ಸಾರಿಗೆಯನ್ನು ವಿಮಾನ, ಕಾರು, ರೈಲು ಮತ್ತು ನೌಕೆ ಬಳಿಕದ 5ನೇ ಸಾರಿಗೆ ಎಂದು ಅವರು ಕರೆದಿದ್ದಾರೆ. ಎಲಾನ್ ಮಸ್ಕ್ ಅವರ ಒಡೆತನದ ಸ್ಪೇಸ್‌ಎಕ್ಸ್ ಕಂಪೆನಿಯ ಬಳಿಕ, ವರ್ಜಿನ್ ಗ್ರೂಪ್ ಈ ಹೊಸ ಮಾದರಿಯ ಅತ್ಯಾಧುನಿಕ ತಂತ್ರಜ್ಞಾನಾಧರಿತ ಸಾರಿಗೆ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿ, ಯಶಸ್ವಿ ಪರೀಕ್ಷೆಯನ್ನೂ ಕೈಗೊಂಡಿದೆ.
Related Articles
ಹೈಪರ್‌ಲೂಪ್ ಸಾರಿಗೆ ಕೊಳವೆಗಳು, ಪಾಡ್‌ಗಳು ಮತ್ತು ಟರ್ಮಿನಲ್‌ಗಳು… ಹೀಗೆ ಮೂರು ಪ್ರಮುಖ ಘಟಕಗಳನ್ನು ಹೊಂದಿವೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಕ್ಯಾಪುÕಲ್ ಅಥವಾ ಪಾಡ್‌ಗಳನ್ನು ಭಾಗಶಃ ನಿರ್ವಾತವಾಗಿರುವ ಕೊಳವೆಗಳಲ್ಲಿ ಅಳವಡಿಸಲಾಗಿರುತ್ತದೆ. ಈ ಪಾಡ್‌ಗಳು ಮುಂದೆ ಏರ್ ಕಂಪ್ರಸ್ಸರ್ ಮತ್ತು ಹಿಂದೆ ಬ್ಯಾಟರಿ ಸಾಧನ ಘಟಕಗಳಿರುತ್ತವೆ. ಕೊಳವೆಗುಂಟ ಅಳವಡಿಸಿರುವ ಇಂಡಕ್ಷನ್ ಮೋಟಾರ್‌ಗಳು ಪಾಡ್‌ಗಳ ವೇಗವನ್ನು ನಿಯಂತ್ರಿಸುತ್ತವೆ. ಎಲೆಕ್ಟ್ರಾನಿಕ್ ಬೆಂಬಲಿತ ವೇಗವರ್ಧನೆ ವ್ಯವಸ್ಥೆ ಮತ್ತು ಬ್ರೇಕಿಂಗ್ ಮೂಲಕ ವೇಗವನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.
Advertisement
ಭಾರತದಲ್ಲಿ ಇದಕ್ಕೆ ಎಷ್ಟು ವೆಚ್ಚ ತಗಲಬಹುದು?
ಅತ್ಯಾಧುನಿಕ ತಂತ್ರಜ್ಞಾನವುಳ್ಳ ಹೈಪರ್‌ಲೂಪ್ ರೈಲು ವ್ಯವಸ್ಥೆಯು ಅತ್ಯಂತ ದುಬಾರಿಯಾಗಿರಲಿದೆ. ಕೆಲವು ಅಂದಾಜುಗಳ ಪ್ರಕಾರ ಭಾರತ ದಲ್ಲಿ ಪ್ರತೀ ಕಿ.ಮೀ. ಹೈಪರ್‌ಲೂಪ್ ಮಾರ್ಗಕ್ಕೆ 150 ಕೋಟಿ ರೂ. ವೆಚ್ಚವಾ ಗಲಿದೆ. ಅಂದರೆ ಮುಂಬಯಿ ಮತ್ತು ಪುಣೆ ನಡುವೆ ಹೈಪರ್‌ಲೂಪ್ ನಿರ್ಮಾಣಕ್ಕೆ ಅಂದಾಜು 22,500 ಕೋಟಿ ರೂ. ವೆಚ್ಚವಾಗ ಬಹುದು. ಅದೇ ರೀತಿ ಬೆಂಗಳೂರು-ಚೆನ್ನೈ ನಡುವಿನ ಹೈಪರ್‌ಲೂಪ್‌ಗೆ ಅಂದಾಜು 52,000 ಕೋಟಿ ರೂ. ಬೇಕಾಗಬಹುದು! ಇದು ಕೇವಲ ಅಂದಾಜು ಲೆಕ್ಕವಷ್ಟೆ. ಭಾರತದಲ್ಲಿ ಎಲ್ಲೆಲ್ಲಿವೆ
ಹೈಪರ್‌ಲೂಪ್?
ಮುಂಬಯಿಯಿಂದ ಪುಣೆ ನಡುವೆ ಹೈಪರ್‌ಲೂಪ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೈಪರ್‌ಲೂಪ್ ಒನ್ 2018ರಲ್ಲಿ ಮಹಾರಾಷ್ಟ್ರ ಸರಕಾರ ಜತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಇದು ಸಾಧ್ಯವಾದರೆ 3.30 ಗಂಟೆ ಪ್ರಯಾಣವು 20 ನಿಮಿಷಕ್ಕೆ ಇಳಿಕೆಯಾಗಲಿದೆ! ಇದಲ್ಲದೆ, ಮುಂಬಯಿ ಮತ್ತು ದಿಲ್ಲಿ ನಡುವೆಯೂ ಹೈಪರ್‌ಲೂಪ್ ರೈಲು ಮಾರ್ಗ ನಿರ್ಮಾಣ ಬಗ್ಗೆಯೂ ಮಾತುಕತೆಗಳು ನಡೆದಿವೆ. ಬೆಂಗಳೂರು-ಚೆನ್ನೈ
ಹೈಪರ್‌ಲೂಪ್ ರೈಲು
ಬೆಂಗಳೂರು ಮತ್ತು ಚೆನ್ನೈ ನಡುವೆಯೂ ಹೈಪರ್‌ಲೂಪ್ ರೈಲು ಸಂಚಾರದ ಬಗ್ಗೆ ಸುದ್ದಿಗಳಿವೆ. ಒಂದೊಮ್ಮೆ ಇದು ಸಾಧ್ಯವಾದರೆ 350 ಕಿ.ಮೀ. ಪ್ರಯಾಣವನ್ನು ಕೇವಲ 30 ನಿಮಿಷದಲ್ಲಿ ಪೂರೈಸಬಹುದು. ಮುಂದಿನ 10 ವರ್ಷಗಳಲ್ಲಿ ಹೈಪರ್‌ಲೂಪ್ ರೈಲು ಸಂಚಾರ ಸಾಧ್ಯವಾಗಬಹುದು ಎನ್ನಲಾಗುತ್ತಿದೆ. ದರ ವಿಮಾನದಷ್ಟೇ ದುಬಾರಿ
ಈಗಾಗಲೇ ಹೇಳಿದಂತೆ ಹೈಪರ್‌ಲೂಪ್ ರೈಲು ವಿಮಾನ ಹಾಗೂ ಬುಲೆಟ್ ಟ್ರೈನ್‌ಗಿಂತಲೂ ವೇಗದಲ್ಲಿ ಚಲಿಸಲಿದೆ. ಹಾಗಾಗಿ ಹೈಪರ್‌ಲೂಪ್ ರೈಲಿನ ಸಂಚಾರ ಶುಲ್ಕವೂ ಅಷ್ಟೇ ದುಬಾರಿಯೂ ಆಗಲಿದೆ. ಭಾರತದ ಮಟ್ಟಿಗೆ ಹೇಳುವುದಾದರೆ ಮುಂಬಯಿ ಮತ್ತು ಪುಣೆ ನಡುವಿನ ಹೈಪರ್‌ಲೂಪ್ ರೈಲು ದರ ವಿಮಾನ ಪ್ರಯಾಣ ದರದಷ್ಟೇ ಇರಲಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ವ್ಯಕ್ತಿಯೊಬ್ಬರಿಗೆ 10 ಸಾವಿರ ರೂ. ಆಗಬಹುದು. ವಾಸ್ತವದಲ್ಲಿ ಹೈಪರ್‌ಲೂಪ್ ರೈಲು ಸಂಚಾರ ಆರಂಭಿಸುವ ಹೊತ್ತಿಗೆ ಈ ಟಿಕೆಟ್ ಶುಲ್ಕ ಇನ್ನೂ ಹೆಚ್ಚಾಗಬಹುದು! ಅನುಕೂಲಗಳೇನು?
1. ಹೈಪರ್‌ಲೂಪ್ ಸಾರಿಗೆಯು 2 ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಯಾಕೆಂದರೆ, ಹೈಪರ್‌ಲೂಪ್ ವಿಮಾನದ ವೇಗಕ್ಕಿಂತಲೂ ಹೆಚ್ಚು ವೇಗದಲ್ಲಿ ಚಲಿಸುತ್ತದೆ. ಚೆನ್ನೈ-ಬೆಂಗಳೂರು ನಡುವೆ ಹೈಪರ್‌ಲೂಪ್ ರೈಲು ಸಾಧ್ಯವಾದರೆ ಗರಿಷ್ಠ 30 ನಿಮಿಷದಲ್ಲಿ ತಲುಪಬಹುದು. 2. ಸಾಂಪ್ರದಾಯಿಕ ಸಾರಿಗೆಗಳಿಗೆ ಹೋಲಿಸಿದರೆ ಹೈಪರ್‌ಲೂಪ್ ಸಾರಿಗೆಯಲ್ಲಿ ಇಂಧನ ದಕ್ಷತೆಯೇ ಹೆಚ್ಚು. ಯಾಕೆಂದರೆ, ನಿರ್ವಾತ ಪ್ರದೇಶದಲ್ಲಿ ಚಲಿಸುವುದರಿಂದ ಪರಿಣಾಮಕಾರಿ ಇಂಧನ ಬಳಕೆ ಜತೆಗೆ, ಮರುಬಳಸಬಹುದಾದ ಇಂಧನಗಳನ್ನು ಬಳಸಿಕೊಳ್ಳಲಾಗುತ್ತದೆ. 3. ಸಾಂಪ್ರದಾಯಿಕ ಸಾರಿಗೆಗಳಾದ ಹೆದ್ದಾರಿ ಅಥವಾ ರೈಲು ಮಾರ್ಗಗಳಿಗೆ ಹೋಲಿಸಿದರೆ ಹೈಪರ್‌ಲೂಪ್ ನಿರ್ವಹಣೆಗೆ ಕಡಿಮೆ ಮೂಲಸೌಕರ್ಯಗಳು ಸಾಕು. ಇದರಿಂದ ಪರಿಸರದ ಮೇಲಾಗುವ ಪರಿಣಾಮವನ್ನು ತಪ್ಪಿಸಬಹುದಾಗಿದೆ. ಸವಾಲುಗಳೂ ಕಡಿಮೆ ಇಲ್ಲ
1. ವಿಶೇಷ ಎಂದರೆ ಹೈಪರ್‌ಲೂಪ್ ತಂತ್ರಜ್ಞಾನ ಕಾರ್ಯಸಾಧ್ಯತೆಯೇ ಭಾರೀ ಸವಾಲು. ಇದು ಇನ್ನೂ ಅಭಿವೃದ್ಧಿ ಹಂತದಲ್ಲಿರುವ ತಂತ್ರಜ್ಞಾನವು ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಬಹಳಷ್ಟು ಎಂಜಿನಿಯರಿಂಗ್ ಸವಾಲುಗಳು ಈ ಯೋಜನೆಯನ್ನು ಕಾಡುತ್ತಿವೆ. ವಿಶೇಷವಾಗಿ ಸುರಕ್ಷೆ ಮತ್ತು ವಿಶ್ವಾಸಾರ್ಹತೆಯ ವ್ಯವಸ್ಥೆ ನಿರ್ಮಾಣ ಇನ್ನೂ ಸಾಧ್ಯವಾಗುತ್ತಿಲ್ಲ. 2. ಸಾಂಪ್ರದಾಯಿಕ ರೈಲು ಅಥವಾ ಹೆದ್ದಾರಿಗಳ ಅಗತ್ಯ ಮೂಲಸೌಕರ್ಯ ನಿರ್ಮಾಣಕ್ಕೆ ಹೋಲಿಸಿದರೆ ಹೈಪರ್‌ಲೂಪ್ ಅತ್ಯಂತ ದುಬಾರಿಯಾಗಿದೆ. ಹಾಗಾಗಿ ಈ ವ್ಯವಸ್ಥೆಯನ್ನು ಸ್ಥಾಪಿಸಬೇಕಿದ್ದರೆ ಬೃಹತ್ ಪ್ರಮಾಣದಲ್ಲಿ ಬಂಡವಾಳ ಬೇಕಾಗುತ್ತದೆ. 3.ಹೈಪರ್‌ಲೂಪ್ ಸಾರಿಗೆಗೆ ಸಂಬಂಧಿಸಿದಂತೆ ಸರಕಾರ ಮತ್ತು ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದು ಸದ್ಯದಲ್ಲಿ ಸಾಕಷ್ಟು ಸವಾಲಿನ ಕೆಲಸವಾಗಿದೆ. ಭೂಮಿ ವಶ ಪಡಿಸಿಕೊಳ್ಳುವುದರಿಂದ ಹಿಡಿದು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಇನ್ನೂ ಬಹಳಷ್ಟು ಕ್ರಮಿಸಬೇಕಿದೆ. ಎಲ್ಲೆಲ್ಲಿ ಉದ್ದೇಶಿತ ಹೈಪರ್‌ಲೂಪ್?
ಅಮೆರಿಕ: ಶಿಕಾಗೋ-ಕೊಲಂಬಸ್-
ಪಿಟ್ಸ್‌ಬರ್ಗ್. ಡಲ್ಲಾಸ್-ಹ್ಯೂಸ್ಟನ್. ಮಿಯಾಮಿ-ಒರ್ಲಾಂಡೋ
ಕೆನಡಾ: ಟೊರೊಂಟೋ- ಒಟ್ಟಾವ-ಮಾಂಟ್ರಿಯಲ್
ಮೆಕ್ಸಿಕೋ: ಮೆಕ್ಸಿಕೋ ಸಿಟಿ-ಗ್ವಾಡ್‌ಲಜರ್
ಇಂಗ್ಲೆಂಡ್: ಎಡಿನ್‌ಬರ್ಗ್-ಲಂಡನ್. ಗ್ಲಾಸೊ-ಲಿವರ್‌ಪೂಲ್.
ಚೀನ: ಬೀಜಿಂಗ್-ವುಹಾನ್
ಯುಎಇ: ದುಬಾೖ- ಅಬುಧಾಬಿ -ಮಲ್ಲಿಕಾರ್ಜುನ ತಿಪ್ಪಾರ