ರಾಜಸ್ಥಾನ: ಸೋಮವಾರವಷ್ಟೇ ಜೆಇಇ ಫಲಿತಾಂಶ ಪ್ರಕಟಗೊಂಡಿದ್ದು ಇದರ ಬೆನ್ನಲ್ಲೇ ಇಲ್ಲಿನ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಮಾಹಿತಿ ಹೊರಬಿದ್ದಿದೆ.
ಜಾರ್ಖಂಡ್‌ನ ನಿವಾಸಿಯಾಗಿರುವ ಶುಭ್ ಚೌಧರಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.
ಶುಭ್ ಚೌಧರಿ ಪ್ರಧಾನ ಐಐಟಿ ಸೇರಿದಂತೆ ದೇಶದ ಉನ್ನತ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ಅಗತ್ಯವಿರುವ ಜೆಇಇ-ಮೇನ್ಸ್‌ಗೆ ತಯಾರಿ ನಡೆಸುತ್ತಿದ್ದರು ಎನ್ನಲಾಗಿದ್ದು ಇದಕ್ಕಾಗಿ ಕಳೆದ ಎರಡು ವರ್ಷಗಳಿಂದ ಕೋಟಾದಲ್ಲಿದ್ದು ತಯಾರಿ ನಡೆಸುತಿದ್ದರು ಹೇಳಲಾಗಿದೆ.
ನಿನ್ನೆ(ಸೋಮವಾರ) ಜೆಇಇ ಮೇನ್ಸ್ ಫಲಿತಾಂಶ ಪ್ರಕಟವಾಗಿದ್ದು, ಫಲಿತಾಂಶದಲ್ಲಿ ಶುಭ್ ಅವರು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಅಂಕಗಳನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ ಇದರಿಂದ ಮನನೊಂದ ವಿದ್ಯಾರ್ಥಿ ಹಾಸ್ಟೆಲ್ ಕೊಠಡಿಯೊಳಗೆ ಹೋದವ ಮತ್ತೆ ಹೊರಗೆ ಬರಲೇ ಇಲ್ಲ ಬೆಳಿಗ್ಗೆ ಇತರ ವಿದ್ಯಾರ್ಥಿಗಳು ಹಾಸ್ಟೆಲ್ ಬಾಗಿಲು ತೆರೆದಾಗ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಇದನ್ನು ಕಂಡ ಇತರ ವಿದ್ಯಾರ್ಥಿಗಳು ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದು ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಘಟನಾ ಸ್ಥಳಕ್ಕೆ ಬಂದ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು ಕೊಠಡಿಯಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ, ಘಟನೆ ಕುರಿತು ಯುವಕನ ಪೋಷಕರಿಗೆ ಮಾಹಿತಿ ನೀಡಲಾಗಿದ್ದು ಪೋಷಕರು ಬಂದ ಬಳಿಕವೇ ಮರಣೋತ್ತರ ಪರೀಕ್ಷೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ.
ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಈ ವರ್ಷ ನಾಲ್ಕನೇ ಪ್ರಕರಣವಾಗಿದೆ ಎನ್ನಲಾಗಿದೆ. ಕಳೆದ ವರ್ಷ, 2023 ರಲ್ಲಿ, 29 ವಿದ್ಯಾರ್ಥಿಗಳು ತಮ್ಮ ಜೀವನವನ್ನು ಕೊನೆಗೊಳಿಸಿದ್ದರು.
ಇದನ್ನೂ ಓದಿ: Sankeshwar: ಯುವ ನ್ಯಾಯವಾದಿ ಮೇಲೆ ಹಲ್ಲೆ ನಡೆಸಿ ಕೊಲೆ ಯತ್ನ… ಇಬ್ಬರು ವಶಕ್ಕೆ