Advertisement

ಸಂಶೋಧನೆಗೆ ಐಐಎಚ್‌ಆರ್‌ಗೆ ದೇಶಲ್ಲೇ ಮೊದಲ ಸ್ಥಾನ

01:24 PM Sep 30, 2022 | Team Udayavani |

ಬೆಂಗಳೂರು: ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ (ಐಐಎಚ್‌ ಆರ್‌)ವು ಸಂಶೋಧನಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಅತ್ಯುತ್ತಮ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಇಡೀ ದೇಶಕ್ಕೆ ಮೊದಲ ರ್‍ಯಾಂಕ್‌ ಗಳಿಸಿದೆ.

Advertisement

ಇದೇ ಮೊದಲ ಬಾರಿ ತನ್ನ ವ್ಯಾಪ್ತಿಯಲ್ಲಿ ಬರುವ ಸಂಶೋಧನಾ ಸಂಸ್ಥೆಗಳ ಸಾಧನೆಯ ಮೌಲ್ಯಮಾಪನ ಮಾಡಿರುವ ಭಾರತೀಯ ಅನುಸಂಧಾನ ಪರಿಷತ್ತು (ಐಸಿಎಆರ್‌) ಬುಧವಾರವಷ್ಟೇ ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ ಮಾಡಿದೆ. 2019-20 ಮತ್ತು 2020-21ನೇ ಸಾಲಿನಲ್ಲಿ ಹೆಸರಘಟ್ಟದ ಐಐಎಚ್‌ಆರ್‌ ಮೊದಲ ಸ್ಥಾನ ಗಳಿಸುವ ಮೂಲಕ ನಾಡಹಬ್ಬದ ಸಂಭ್ರಮದಲ್ಲಿರುವ ಸಿಲಿಕಾನ್‌ ಸಿಟಿಗೆ ಹೆಮ್ಮೆಯ ಗರಿ ಮೂಡಿಸಿದೆ. ಒಟ್ಟಾರೆ 93 ಸಂಸ್ಥೆಗಳು ಮೌಲ್ಯಮಾಪನಕ್ಕೊಳಪಟ್ಟಿವೆ.

1968ರಲ್ಲಿ ಅಸ್ತಿತ್ವಕ್ಕೆ ಬಂದ ಐಐಎಚ್‌ಆರ್‌ ಪ್ರಮುಖವಾಗಿ ಅಪರೂಪದ ಸೂಕ್ಷ್ಮಾಣು ಜೀವಕೋಶಗಳ ಸಂಗ್ರಹ, ವರ್ಗೀಕರಣ ಮತ್ತು ಅವುಗಳ ಸದುಪಯೋಗ, ಹೊಸ ತಳಿ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿ, ಆ ಮೂಲಕ ಕೃಷಿ ಉತ್ಪಾದಕತೆ ಹೆಚ್ಚಿಸುವ ಉದ್ದೇಶ ಹೊಂದಿದೆ. ಈ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯ  ನಿರ್ವಹಿಸುತ್ತಿರುವ ಸಂಸ್ಥೆಯು ತನ್ನ 6 ದಶಕಗಳ ಸುದೀರ್ಘ‌ ಪಯಣದಲ್ಲಿ ಹೂವು, ಹಣ್ಣು, ತರಕಾರಿ, ಔಷಧೀಯ ಸಸ್ಯಗಳಲ್ಲಿ, 54 ಪ್ರಮುಖ ತೋಟಗಾರಿಕೆ ಬೆಳೆಗಳನ್ನು ಸಂಶೋಧನೆ ಮಾಡಿದ್ದು, 330 ರೋಗ ನಿರೋಧಕ ಶಕ್ತಿವುಳ್ಳ ಸುಧಾರಿತ ತಳಿಗಳನ್ನು ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲ, 157 ತಂತ್ರಜ್ಞಾನಗಳನ್ನು
ಬಿಡುಗಡೆ ಮಾಡಿದ್ದು, ದೇಶಾದ್ಯಂತ ಪರಿಣಾಮಕಾರಿಯಾಗಿ ಇವುಗಳ ಉಪಯೋಗ ಆಗುತ್ತಿದೆ. ಈ ಸಂಸ್ಥೆಯು ಹೊರತಂದ ಸಂಶೋಧನೆಗಳ ಫ‌ಲವಾಗಿ ರಾಷ್ಟ್ರಮಟ್ಟದಲ್ಲಿ ತೋಟಗಾರಿಕಾ ಕ್ಷೇತ್ರದಲ್ಲಿ ವಾರ್ಷಿಕ 13 ಸಾವಿರ ಕೋಟಿ ಆದಾಯ ಏರಿಕೆಯಾಗಿದೆ.

“ಅರ್ಕಾವತಿ’ ದೇಶಕ್ಕೆ ಪರಿಚಯಿಸಿದ ಕೀರ್ತಿ: ಅರ್ಕಾವತಿ ನದಿಯ ದಂಡೆಯ ಮೇಲೆ ಐಐಎಚ್‌ ಆರ್‌ ಸ್ಥಾಪನೆಯಾಗಿದೆ. ಹಾಗಾಗಿ, ಜಿಯಾಗ್ರಾಫಿಕಲ್‌ ರಿಜಿಸ್ಟಾರ್‌ ಆಫ್ ಇಂಡಿಯಾದಲ್ಲಿ “ಅರ್ಕಾ’ ಎಂದು ನೋಂದಣಿ ಮಾಡಲಾಗಿದೆ. ಈ ಮೂಲಕ ಅರ್ಕಾವತಿಯನ್ನು ದೇಶಕ್ಕೆ ಪರಿಚಯಿಸಿದ ಕೀರ್ತಿ ಐಐಎಚ್‌ಆರ್‌ನದ್ದಾಗಿದೆ. ಇದಲ್ಲದೆ, ನೂರಕ್ಕೂ ಅಧಿಕ ತಾಂತ್ರಿಕತೆಗಳನ್ನು ವಾಣಿಜ್ಯೀಕರಣಗೊಳಿಸಿದೆ. ಇವುಗಳನ್ನು ಸಾವಿರಕ್ಕೂ ಅಧಿಕ ಜನ ಸಂಸ್ಥೆಯಿಂದ ಪರವಾನಗಿ ಪಡೆದು, ಈ ತಾಂತ್ರಿಕತೆಗಳನ್ನು ಖರೀದಿಸಿ ವಾಣಿಜ್ಯೀಕರಣಗೊಳಿಸುವ ಮೂಲಕ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಇದರಿಂದ ಪ್ರತಿವರ್ಷ ಸುಮಾರು 3 ಕೋಟಿ ರೂ. ಆದಾಯ ಬರುತ್ತಿದೆ. ಜತೆಗೆ ಬೀಜೋತ್ಪಾದನಾ ವಿಭಾಗದಿಂದ 50 ಟನ್‌ಗಳಷ್ಟು ಬೀಜಗಳ ಉತ್ಪಾದನೆ ಮಾಡಿ, ರೈತರಿಗೆ ವಿತರಿಸಲಾಗುತ್ತಿದೆ. ಇದಕ್ಕಾಗಿ 40ಕ್ಕೂ ಅಧಿಕ ಗ್ರಾಮಗಳನ್ನು ಗುರುತಿಸಿ, ಅಲ್ಲಿನ ರೈತರಿಗೆ ಐಐಎಚ್‌ಆರ್‌ ಬೀಜಗಳನ್ನು ನೀಡುತ್ತದೆ. ನಂತರ ಸಂಸ್ಥೆಯೇ ಖರೀದಿಸುವುದರಿಂದ ರೈತರಿಗೆ ಹೆಚ್ಚು ಲಾಭ ಗಳಿಸಲು ಸಾಧ್ಯವಾಗುತ್ತದೆ. ಪ್ರತಿ ವರ್ಷ ರಾಷ್ಟ್ರೀಯ ತೋಟಗಾರಿಕೆ ಮೇಳ ಆಯೋಜಿಸಲಾಗುತ್ತಿದೆ. 250ಕ್ಕೂ ಅಧಿಕ ತಾಂತ್ರಿಕತೆಗಳ ಪ್ರದರ್ಶನ ಮಾಡಲಾಗುತ್ತದೆ. 200ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗುತ್ತದೆ.

Advertisement

ರ್‍ಯಾಂಕ್‌ ಪಟ್ಟಿಯಲ್ಲಿ ಮೂರು ಸಂಸ್ಥೆಗಳು
ಹೆಬ್ಟಾಳದಲ್ಲಿರುವ ರಾಷ್ಟ್ರೀಯ ಕೃಷಿ ಪ್ರಾಮುಖ್ಯ ಕೀಟಗಳ ಸಂಪನ್ಮೂಲ (ಎನ್‌ಬಿಎಐಆರ್‌) ಕೇಂದ್ರಕ್ಕೆ 23ನೇ ರ್‍ಯಾಂಕ್‌, ರಾಷ್ಟ್ರೀಯ ಪಶುವೈದ್ಯಕೀಯ ಸೋಂಕುಶಾಸ್ತ್ರ ಮತ್ತು ರೋಗ ಮಾಹಿತಿಶಾಸ್ತ್ರ ಸಂಸ್ಥೆ (ಎನ್‌ಐವಿಇಡಿಐ) 50ನೇ ರ್‍ಯಾಂಕ್‌, ರಾಷ್ಟ್ರೀಯ ಪ್ರಾಣಿ ಗಳ ಪೋಷಣೆ ಮತ್ತು ಶರೀರಶಾಸ್ತ್ರ ಸಂಸ್ಥೆ (ಎನ್‌ಐಎಎನ್‌ಪಿ) 55 ರ್‍ಯಾಂಕ್‌ಗೆ ತೃಪ್ತಿಗೊಂಡಿವೆ.

ಸಂಶೋಧನೆಗಳು, ಅದರ ಪರಿಣಾಮಗಳು ಸೇರಿದಂತೆ 7 ಮಾನದಂಡಗಳನ್ನು ಆಧರಿಸಿ ಐಸಿಎಆರ್‌ ರ್‍ಯಾಂಕ್‌ ನೀಡಿದೆ. ತುಂಬಾ ಖುಷಿಯಾಗಿದೆ. ಈ ಸಾಧನೆಯ ಹೆಗ್ಗಳಿಕೆ ಇಡೀ ಸಂಸ್ಥೆಯ ಎಲ್ಲ ವಿಜ್ಞಾನಿಗಳು, ಹಿಂದಿನ ನಿರ್ದೇಶಕರಿಗೆ ಸಲ್ಲುತ್ತದೆ. ಇದರೊಂದಿಗೆ ಜವಾಬ್ದಾರಿ ಕೂಡ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಇದು ಉತ್ತೇಜಿಸಿದೆ.
● ಡಾ.ದೇಬಿ ಶರ್ಮಾ, ನಿರ್ದೇಶಕರು, ಐಐಎಚ್‌ಆರ್‌

●ವಿಜಯಕುಮಾರ ಚಂದರಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next