ಮಂಗಳೂರು: ಸರಕಾರಿ ಅನುದಾನದಲ್ಲಿ ಮಾಡುವ ಪಿಲಿಕುಳ ಕಂಬಳ ಆಯೋಜನೆಯಲ್ಲಿ ಸ್ಥಳೀಯ ಶಾಸಕರನ್ನು ದ.ಕ ಜಿಲ್ಲಾಧಿಕಾರಿಯವರು ಸಂಪೂರ್ಣವಾಗಿ ಪರಿಗಣನೆ ಮಾಡದೆ ಅವಮಾನ ಮಾಡಿದ್ದಾರೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು, ಶಾಸಕನಾಗಿ ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಬಗ್ಗೆ ನನಗೆ ಮಾಹಿತಿ ನೀಡಿಲ್ಲ ಜಿಲ್ಲಾ ಕಂಬಳ ಸಮಿತಿಯ ನಿರ್ಧಾರದ ಪ್ರಕಾರ ಪಿಲಿಕುಳದಲ್ಲಿಯೂ ಕಂಬಳ ಇದೆ ಎಂದು ಗೊತ್ತಾಯಿತು. ಕಂಬಳ ಸಮಿತಿಯ ಅಧ್ಯಕ್ಷ ಆಯಾ ಕ್ಷೇತ್ರದ ಶಾಸಕನೇ ಆಗಬೇಕು ಎಂದು ಪ್ರೊಟೋಕಾಲ್ ಇದೆ, ಕಳೆದ ನಾಲ್ಕನೇ ತಾರೀಕಿಗೆ ಮೀಟಿಂಗ್ ಆಯ್ತು, ಅದರ ಬಗ್ಗೆಯೂ ನನಗೆ ಮಾಹಿತಿ ನೀಡಲಿಲ್ಲ.
ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯಬೇಕಾದ ಸರಕಾರಿ ನೆಲೆಯ ಪಿಲಿಕುಳ ಕಂಬಳದ ಬಗ್ಗೆ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಯಾವುದೇ ಮಾಹಿತಿ ನೀಡದೆ ಹಾಗೂ ನನ್ನನ್ನು ನಿರ್ಲಕ್ಷಿಸಿ ಸಭೆ, ಪೂರ್ವತಯಾರಿ ನಡೆಸಿದ್ದಾರೆ. ಈ ಹಿಂದೆಯೂ ಎಂಆರ್ ಪಿಎಲ್ 4 ನೇ ಹಂತದ ವಿಸ್ತರಣೆ, ಅಂತಾರಾಷ್ಟ್ರೀಯ ಸರ್ಫಿಂಗ್ ಪಂದ್ಯಾವಳಿ, ವಿಮಾನ ನಿಲ್ದಾಣದಿಂದ ಮಳೆ ಅನಾಹುತ ಆದಾಗಲೂ ನನ್ನ ಗಮನಕ್ಕೆ ತಾರದೆ ಜಿಲ್ಲಾಧಿಕಾರಿಗಳು ಸಭೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಮೂಲಕ ಎಲ್ಲಾ ಹಂತಗಳಲ್ಲೂ ನನ್ನನ್ನು ನಿರ್ಲಕ್ಷಿಸಿ, ಅವಮಾನ ಮಾಡಿದ ಜಿಲ್ಲಾಧಿಕಾರಿಯವರ ವಿರುದ್ದ ಹಕ್ಕುಚ್ಯುತಿ ಮಂಡಿಸಲಾಗುವುದು. ಸ್ಪೀಕರ್, ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಿಗೆ ದೂರು ನೀಡಲಾಗಿದೆ. ಹಾಗೂ ಬಿಜೆಪಿ ಶಾಸಕರ ನೇತೃತ್ವದಲ್ಲಿ ಅಹೋರಾತ್ರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯವರಿಗೆ ರಾಜಕೀಯ ಆಸಕ್ತಿ ಇರುವುದಾದರೆ ಸಸಿಕಾಂತ್ ಸೆಂಥಿಲ್ ಅವರಂತೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಸೇರಲಿ ಎಂದು ಹೇಳಿದ ಕೋಟ್ಯಾನ್ ಅವರು, ನಾನು ಹಿಂದುಳಿದ ವರ್ಗದ ಎಂಎಲ್ ಎ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿಯವರು ನನಗೆ ಅವಮಾನ ಮಾಡುತ್ತಿದ್ದಾರಾ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ವೇಳೆ ಶಾಸಕರಾದ ವೇದವ್ಯಾಸ ಕಾಮತ್, ಡಾ। ವೈ.ಭರತ್ ಶೆಟ್ಟಿ ಉಪಸ್ಥಿತರಿದ್ದರು.
ಇದನ್ನೂ ಓದಿ: Dharwad;ವೀರಶೈವ ಮಹಾಸಭೆಗೆ ಸದ್ಯಕ್ಕಿಲ್ಲ ಆಡಳಿತಾತ್ಮಕ ಅಧಿಕಾರ; ಜಿಎಂಎಫ್ಸಿ ನ್ಯಾಯಾಲಯ ಆದೇಶ