ದಾವಣಗೆರೆ: ಪ್ರತಿ ದಿನ ವಿದ್ಯಾರ್ಥಿಗಳು ತಲೆ ತಗ್ಗಿಸಿ ಓದಿದರೆ ಮುಂದೆ ತಲೆ ಎತ್ತಿ ಓಡಾಡಬಹುದು ಎಂದು ಶಿವಮೊಗ್ಗದ ಚಿಂತಕ, ವಾಗ್ಮಿ ಜಿ.ಎಸ್. ನಟೇಶ್ ಹೇಳಿದ್ದಾರೆ.
ಬುಧವಾರ, ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಶಿರಮಗೊಂಡನಹಳ್ಳಿಯ ಅನ್‌ಮೋಲ್ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ 2018-19ರ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೀವನ ಮೌಲ್ಯಗಳು… ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಅಕೌಂಟ್
ಬುಕ್, ಪಾಸ್‌ಬುಕ್, ಫೇಸ್ ಬುಕ್ ಎಂಬ ಈ ಮೂರು ಪುಸ್ತಕಗಳ ಕಡೆಗೆ ಗಮನ ಕೊಡದೆ ಪಠ್ಯಪುಸ್ತಕಗಳ ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ವಿದ್ಯಾರ್ಥಿ, ಯುವ ಸಮೂಹ ಕನ್ನಡ ನಾಡು, ನುಡಿ, ನೆಲ, ಜಲ ಕಾಪಾಡಿಕೊಳ್ಳುವಂತಹ ಶಕ್ತಿಯಾಗಬೇಕು, ಉತ್ತಮ ನಾಗರಿಕರನ್ನು ಬೆಳೆಸುವಲ್ಲಿ ಅನ್‌ಮೋಲ್ ವಿದ್ಯಾಸಂಸ್ಥೆ ಉತ್ತಮ ಕಾರ್ಯನಿರ್ವಹಿಸುತ್ತಿದೆ. ದತ್ತಿ ದಾನಿಗಳು ಕನ್ನಡಕ್ಕೆ ನೀಡುತ್ತಿರುವ ಸೇವೆ ಸ್ಮರಣೀಯ ಎಂದು ತಿಳಿಸಿದರು.
ಬಿಐಇಟಿ ನಿರ್ದೇಶಕ ಪ್ರೊ| ವೈ. ವೃಷಭೇಂದ್ರಪ್ಪ ಉದ್ಘಾಟಿಸಿದರು. ಅನ್ ಮೋಲ್ ವಿದ್ಯಾಸಂಸ್ಥೆಯ ಡಿ.ವಿ. ರವೀಂದ್ರ, ಶಿವಲಿಂಗಪ್ಪ, ಯಶಾ ದಿನೇಶ್, ಶೈಕ್ಷಣಿಕ ಸಲಹಾ ಸಮಿತಿಯ ಸದಸ್ಯ ಎಸ್. ಚಿದಾನಂದ್, ಅಂಜಿನಪ್ಪ, ಗಿರೀಶ್, ಪುಟ್ಟಮ್ಮ ಮಹಾರುದ್ರಯ್ಯ, ಎಸ್.ಎಂ. ಮಲ್ಲಮ್ಮ, ಮುರುಗಯ್ಯ, ಪ್ರಾಂಶುಪಾಲ ಯು. ಕೊಟ್ರೇಶಿ, ಎಸ್.ಎಂ. ಉಮೇಶ್, ಪಿಯು ಕಾಲೇಜು ಪ್ರಾಚಾರ್ಯ ಎಚ್. ಎನ್. ಪ್ರದೀಪ್ ಇತರರು ಇದ್ದರು. ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಿಂಧು, ಟಿ. ಜ್ಞಾನಶ್ರೀ, ಐ.ಇ. ನಿತ್ಯಶ್ರೀ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.