ಬೆಳ್ತಂಗಡಿ: ಕಠಿನ ಪರಿಶ್ರಮದ ಜತೆ ನಂಬಿಕೆಯಿದ್ದರೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕ್ರೀಡೆಯಲ್ಲಿ ಪರಿಶ್ರಮ ವಹಿಸುವ ಮೂಲಕ ಪದಕ ಗೆಲ್ಲಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನುಡಿದರು.
ಅವರು ಶ್ರೀಕ್ಷೇತ್ರ ಧರ್ಮಸ್ಥಳದ ಬೀಡಿಗೆ ಆಗಮಿಸಿದ್ದ ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ, ಎಸ್.ಡಿ.ಎಂ.ನ ಹಳೆ ವಿದ್ಯಾರ್ಥಿ ಗುರುರಾಜ್ ಅವರನ್ನು ಅಭಿನಂದಿಸಿ ಮಾತನಾಡಿದರು. ಮುಂದಿನ ಬಾರಿ ಚಿನ್ನ ಗೆದ್ದು ಕೀರ್ತಿ ತರುವಂತೆ ಹಾರೈಸಿದರು.
ಈ ವೇಳೆ ಗುರುರಾಜ್ ಅವರ ಕೋಚ್ ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು. ಎಸ್.ಡಿ.ಎಂ. ಕಾಲೇಜಿಗೆ ಭೇಟಿ ನೀಡಿದ ಗುರುರಾಜ್ ಕ್ರೀಡಾಪಟುಗಳ ಜತೆ ತಮ್ಮ ಅನುಭವ ಹಂಚಿಕೊಂಡರು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹಷೇìಂದ್ರ ಕುಮಾರ್, ಹೇಮಾವತಿ ವಿ. ಹೆಗ್ಗಡೆ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಶ್ರೇಯಸ್, ಮಾನ್ಯ, ಎಸ್.ಡಿ. ಎಂಕಾಲೇಜು ಪ್ರಾಂಶುಪಾಲ ಪ್ರೊ| ಟಿ.ಎನ್. ಕೇಶವ್, ಎಸ್.ಡಿ.ಎಂ. ನ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ರಮೇಶ್ ಪಿ.ಡಿ., ಮಾಜಿ ಕಾರ್ಯದರ್ಶಿ ಬಾಲಭಾಸ್ಕರ್, ಗುರುರಾಜ್ ತಂದೆ ಮಹಾಬಲ ಪೂಜಾರಿ, ತಾಯಿ ಪದ್ದು, ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
“ಉಜಿರೆಗೆ ಆಗಮಿಸಿದಾಗ ಕ್ರೀಡಾ ಜೀವನದ ಆರಂಭದ ದಿನಗಳು ನೆನಪಾದವು. ವೇಟ್‌ಲಿಫ್ಟಿಂಗ್‌ಗೆ ಸೇರುವ ವೇಳೆ 43 ಕೆ.ಜಿ. ತೂಕವಿದ್ದು, ಕ್ರೀಡಾಂಗಣಕ್ಕೆ ತರಬೇತಿಗೆ ಸೇರುವಾಗ ಭರವಸೆ ಇರಲಿಲ್ಲ. ನಿರಂತರ ತರಬೇತಿ, ಕಠಿಣ ಪರಿಶ್ರಮ, ಎಸ್.ಡಿ.ಎಂ ನ್ಪೋರ್ಟ್ಸ್ ಕ್ಲಬ್ ಸಹಕಾರದಿಂದ ಸಾಧನೆ ಮಾಡಲು ಸಾಧ್ಯವಾಯಿತು’
– ಗುರುರಾಜ್