Advertisement
ಅದು “ಮಂಗಳ ಸೂತ್ರ’ ಚಿತ್ರದ ಚಿತ್ರೀಕರಣ. ವಿನಯಾ ಪ್ರಸಾದ್, ವಿಷ್ಣುವರ್ಧನ್ ಸೇರಿದಂತೆ ಒಂದಷ್ಟು ಕಲಾವಿದರು ಸೆಟ್‌ನಲ್ಲಿದ್ದರು. ಯಾವುದೋ ಒಂದು ದೃಶ್ಯವನ್ನು ಬೇರೆ ರೀತಿ ಮಾಡಿದರೆ ಚೆನ್ನಾಗಿರುತ್ತೋ ಏನೋ ಎಂದು ವಿನಯಾ ಪ್ರಸಾದ್ ಹೇಳುತ್ತಾರೆ. ವಿನಯಾ ಪ್ರಸಾದ್ ಅವರಲ್ಲಿದ್ದ ಕಲ್ಪನೆ, ಡೈರೆಕ್ಷನ್ ಸೆನ್ಸ್ ನೋಡಿ ಖುಷಿಯಾದ ವಿಷ್ಣುವರ್ಧನ್, “ನೀವ್ಯಾಕೆ ನಿರ್ದೇಶನ ಮಾಡಬಾರದು’ ಎಂದು ಕೇಳಿದ್ದರಂತೆ. ಅಂದು ವಿಷ್ಣುವರ್ಧನ್ ಅವರು ಹೇಳಿದಂತೆ ಈಗ ವಿನಯಾ ಪ್ರಸಾದ್ ನಿರ್ದೇಶಕಿಯಾಗಿದ್ದಾರೆ. “ಲಕ್ಷ್ಮೀ ನಾರಾಯಣರ ಪ್ರಪಂಚವೇ ಬೇರೆ’ ಎಂಬ ಸಿನಿಮಾ ಮಾಡಲು ಅಣಿಯಾಗಿದ್ದಾರೆ. ವಿನಯಾ ಪ್ರಸಾದ್ ಅವರಿಗೆ ಈ ಸಿನಿಮಾ ಮೂಲಕ ತಮ್ಮ ನಿರ್ದೇಶನದ ಕನಸು ಈಡೇರುತ್ತಿರುವ ಖುಷಿಯೂ ಇದೆ.
“ಲಕ್ಷ್ಮೀ ನಾರಾಯಣರ ಪ್ರಪಂಚನೇ ಬೇರೆ’ ಸಿನಿಮಾವನ್ನು ವಿನಯಾ ಪ್ರಸಾದ್ ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣ ಕೂಡಾ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಬಹುತೇಕ ನಿರ್ದೇಶಕರು ಅನುಸರಿಸುವ ಸಕ್ಸಸ್ ಫಾರ್ಮುಲಾ. “ನಮ್ಮ ಬಹುತೇಕ ನಿರ್ಮಾಪಕರು ಸಕ್ಸಸ್ ಫಾರ್ಮುಲಾವನ್ನು ಅನುಸರಿಸುತ್ತಾರೆ. ಯಾವುದಾದರೂ ಒಂದು ಸಿನಿಮಾ ಗೆದ್ದರೆ ಆ ಮಾದರಿಯ ಸಿನಿಮಾವನ್ನೇ ಮಾಡಿಕೊಡಲು ಹೇಳುತ್ತಾರೆ. ಯಾರು ಕೂಡಾ ಒಂದು ಯಶಸ್ವಿ ಚಿತ್ರಮಾಡಿಕೊಡಿ ಎಂದು ಹೇಳುವುದಿಲ್ಲ. ಬದಲಾಗಿ ಯಾವುದಾದರೂ ಯಶಸ್ವಿ ಚಿತ್ರವನ್ನು ಉದಾಹರಿಸಿಯೇ ಸಿನಿಮಾ ಮಾಡಿಕೊಡುವಂತೆ ಹೇಳುತ್ತಾರೆ. ಹೀಗಿರುವಾಗ ನಾವೇ ಒಂದು ಒಳ್ಳೆಯ ಕಥೆ ಮಾಡಿಕೊಂಡು, ನಿರ್ಮಾಣವನ್ನೂ ಯಾಕೆ ಮಾಡಬಾರದು ಎನಿಸಿತು’ ಎಂದು ತಾವು ನಿರ್ಮಾಣಕ್ಕಿಳಿದ ಬಗ್ಗೆ ಹೇಳುತ್ತಾರೆ ವಿನಯಾ ಪ್ರಸಾದ್. ಇನ್ನು, ವಿನಯಾ ಪ್ರಸಾದ್ ತಮ್ಮ ಹೋಂಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಿಸಲು ಪ್ರಮುಖ ಕಾರಣ ಅವರ ಪತಿ ಜ್ಯೋತಿಪ್ರಕಾಶ್ ಅತ್ರೆ. “ಕಥೆ ರೆಡಿಮಾಡಿಟ್ಟುಕೊಂಡು ಸಿನಿಮಾದ ನಿರ್ಮಾಣದ ಕುರಿತು ಆಲೋಚಿಸುತ್ತಿದ್ದಾಗ ಜ್ಯೋತಿಪ್ರಕಾಶ್ ಅತ್ರೆಯವರು “ನೀನು ನಿರ್ಮಾಣ ಮಾಡಲು ಇದು ಸಕಾಲ’ ಎಂದರು. ಅದು ನನಗೂ ಸರಿ ಎನಿಸಿತು. ನಮಗೆ ನಿರ್ಮಾಣದ ಬಗ್ಗೆ ಐಡಿಯಾ ಇದೆ. ಎಲ್ಲಿ ಅನಾವಶ್ಯಕ ಖರ್ಚಾಗುತ್ತದೆ, ಅದನ್ನು ಹೇಗೆ ತಡಗಟ್ಟಬಹುದೆಂಬ ಬಗ್ಗೆ ಇಷ್ಟು ವರ್ಷದ ಅನುಭವ ಕಲಿಸಿದೆ. ಆ ಎಲ್ಲಾ ಅನುಭವಗಳನ್ನು ಈ ಸಿನಿಮಾದಲ್ಲಿ ಭಟ್ಟಿ ಇಳಿಸುತ್ತಿದ್ದೇವೆ. ಇದು ಪಕ್ಕಾ ಎಡಿಟೆಡ್ ಸ್ಕ್ರಿಪ್ಟ್. ಒಂದು ದೃಶ್ಯ ಎಷ್ಟು ನಿಮಿಷ ಬರಬೇಕು ಎಂಬುದಕ್ಕೆ ತಕ್ಕಂತೆ ಸ್ಕ್ರಿಪ್ಟ್ ಅನ್ನು ಸಿದ್ಧಪಡಿಸಿರುವುದರಿಂದ ವೆಸ್ಟೇಜ್ ಕೂಡಾ ಕಡಿಮೆಯಾಗುತ್ತದೆ’ ಎಂದು ತಾವು ತಯಾರಾದ ಬಗ್ಗೆ ಹೇಳುತ್ತಾರೆ ವಿನಯಾ ಪ್ರಸಾದ್.
Related Articles
ವಿನಯಾ ಪ್ರಸಾದ್ ಅವರಿಗೆ ಸಿನಿಮಾ ನಿರ್ದೇಶನ, ನಿರ್ಮಾಣ ಮಾಡಲು ಸ್ಫೂರ್ತಿಯಾದ ಮತ್ತೂಂದು ಅಂಶವೆಂದರೆ ಪ್ರೇಕ್ಷಕ ಹೊಸ ಬಗೆಯ ಸಿನಿಮಾಗಳನ್ನು ಸ್ವೀಕರಿಸುತ್ತಿರುವುದು. ಯಾವುದೇ ಸ್ಟಾರ್‌ಗಳಿಲ್ಲದ, ಕಥೆಯೇ ಪ್ರಮುಖವಾದ ಸಿನಿಮಾಗಳು ದೊಡ್ಡ ಹಿಟ್ ಆಗಿರುವುದನ್ನು ನೋಡಿದ ವಿನಯಾ ಅವರಿಗೆ ನನ್ನ ಸಿನಿಮಾವೂ ಅದೇ ರೀತಿ ಯಾಕಾಗಬಾರದು ಎಂಬ ವಿಶ್ವಾಸ ಬಂದಿದೆ. “ಇತ್ತೀಚೆಗೆ ಬಂದ ಒಂದಷ್ಟು ಕನ್ನಡ ಚಿತ್ರಗಳು ಗೆದ್ದಿದ್ದೇ ನನಗೆ ಸ್ಫೂರ್ತಿ. ಅದೇ ಧೈರ್ಯದೊಂದಿಗೆ ನಾನು ಕೂಡಾ ಸಿನಿಮಾ ಮಾಡುತ್ತಿದ್ದೇನೆ. ನಮ್ಮ ಸಿನಿಮಾದಲ್ಲೂ ಒಂದು ಒಳ್ಳೆಯ ಕಥೆ ಇದೆ. ಕೆಲವರು ಸಿನಿಮಾನೇ ಬೇರೆ ಜೀವನವೇ ಬೇರೆ ಎನ್ನುತ್ತಾರೆ. ಆದರೆ ನಾನು ಸಿನಿಮಾ ಹಾಗೂ ಜೀವನವನ್ನು ಜೊತೆ ಜೊತೆಯಾಗಿ ನೋಡುತ್ತೇನೆ. ನಮ್ಮ ಜೀವನದಲ್ಲಿ ಏನು ನಡೆಯುತ್ತದೋ ಆ ವಿಷಯಗಳನ್ನು ಭಿನ್ನವಾಗಿ ಕಟ್ಟಿಕೊಡಬೇಕು. ಈಗ ಪ್ರೇಕ್ಷಕ ಕೂಡಾ ನೈಜತೆಗೆ ಹೆಚ್ಚು ಒತ್ತುಕೊಡುತ್ತಿದ್ದಾನೆ. “ಲಕ್ಷ್ಮೀ ನಾರಾಯಣರ ಪ್ರಪಂಚವೇ ಬೇರೆ’ ಚಿತ್ರದಲ್ಲಿ ಅಂತಹ ಒಂದು ಪ್ರಯತ್ನ ಮಾಡಿದ್ದೇನೆ. ಇಲ್ಲಿ ತಿಳಿಯಾದ ಕಾಮಿಡಿ ಇದೆ. ನಮ್ಮ, ನಿಮ್ಮ ಜೀವನದಲ್ಲಿ ಏನು ನಡೆಯುತ್ತದೋ ಆ ಅಂಶಗಳನ್ನಿಟ್ಟುಕೊಂಡೇ ಕಥೆ ಮಾಡಲಾಗಿದೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ ವಿನಯಾ.
Advertisement
ಫ್ಯಾಮಿಲಿ ಬೆಂಬಲವಿನಯಾ ಪ್ರಸಾದ್ ತುಂಬಾ ಖುಷಿಯಾಗಿರಲು ಕಾರಣ ಮತ್ತೂಂದು ಕಾರಣ ಅವರ ಕುಟುಂಬದ ಬೆಂಬಲ. ಈ ಸಿನಿಮಾಕ್ಕೆ ಅವರ ಪತಿ ಜ್ಯೋತಿ ಪ್ರಕಾಶ್ ಅತ್ರೆ ಕಥೆ, ಚಿತ್ರಕಥೆ ಒದಗಿಸಿದರೆ ವಿನಯಾ ಪ್ರಸಾದ್ ಮಗಳು ಪ್ರಥಮಾ ಪ್ರಸಾದ್ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಜೊತೆಗೆ ವಿನಯಾ ಅವರ ಸಹೋದರನ ಬೆಂಬಲ ಕೂಡಾ ಈ ಸಿನಿಮಾಕ್ಕಿದೆ. ಈ ಎಲ್ಲಾ ಕಾರಣದಿಂದಾಗಿ ವಿನಯಾ ಪ್ರಸಾದ್ ಖುಷಿಯಾಗಿದ್ದಾರೆ. “ನನಗೆ ಫ್ಯಾಮಿಲಿ ಅಟೇಚ್‌ಮೆಂಟ್ ಜಾಸ್ತಿ. ಕುಟುಂಬದಲ್ಲಿ ಏನೇ ಆದರೂ ಮೊದಲು ಓಡಿ ಹೋಗುವವಳು ನಾನು. ಈಗ ಈ ಸಿನಿಮಾ ನಿರ್ಮಾಣದ ವೇಳೆ ನನ್ನ ಕುಟುಂಬವೆಲ್ಲಾ ಬೆಂಬಲಕ್ಕೆ ನಿಂತಿದೆ. ಪತಿ, ಮಗಳು, ತಮ್ಮ ಸೇರಿದಂತೆ ಎಲ್ಲರ ಬೆಂಬಲ ಈ ಸಿನಿಮಾಕ್ಕಿದೆ. ನನ್ನ ನಿರ್ದೇಶನದ ಮೊದಲ ಸಿನಿಮಾದಲ್ಲಿ ನನ್ನ ಮಗಳು ಸಿನಿಮಾಕ್ಕೆ ಎಂಟ್ರಿಕೊಡುತ್ತಿದ್ದಾಳೆಂಬ ಖುಷಿ ಕೂಡಾ ಇದೆ. ಇಲ್ಲಿ ಆಕೆಗೆ ಪ್ರಮುಖ ಪಾತ್ರವಿದೆ. ಚಿತ್ರದ ಒಂದು ಹಾಡಿಗೆ ಜ್ಯೋತಿಪ್ರಕಾಶ್ ಅವರೇ ಸಂಗೀತ ನೀಡುತ್ತಿದ್ದಾರೆ. ಅವರಿಗೆ ಮರಾಠಿ, ಹಿಂದಿಯಲ್ಲಿ ಆಲ್ಬಂ ಮಾಡಿ ಅಭ್ಯಾಸವಿದೆ’ ಎಂದು ತಮ್ಮ ಕುಟುಂಬದ ಬೆಂಬಲದ ಬಗ್ಗೆ ಹೇಳುತ್ತಾರೆ ವಿನಯಾ. ಬರಹ: ರವಿಪ್ರಕಾಶ್ ರೈ; ಚಿತ್ರಗಳು: ಮನು ಮತ್ತು ಸಂಗ್ರಹ