ಮಂಗಳೂರು: ಸರಕಾರ ಪರಿಹಾರ ನೀಡುವುದಾಗಿ ಹೇಳಿದೆ. ನಮ್ಮಲ್ಲಿ ಇದ್ದ ಹಣ ಖರ್ಚಾಯಿತು. ಪರಿಹಾರ ನೀಡದಿದ್ದರೆ ದೇವರೇ ಗತಿ.
– ಇದು ನ. 19ರಂದು ನಗರದ ನಾಗುರಿಯಲ್ಲಿ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದು ಶನಿವಾರ ಆಸ್ಪತ್ರೆ ಯಿಂದ ಬಿಡುಗಡೆಗೊಂಡಿರುವ ಆಟೋ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ನೋವಿನ ನುಡಿಗಳು.
ಪುರುಷೋತ್ತಮ ಅವರ ಮನೆ ದುರಸ್ತಿಯಾಗುತ್ತಿದ್ದು ಪ್ರಸ್ತುತ ಬಾಡಿಗೆ ಮನೆ ಯಲ್ಲಿದ್ದಾರೆ. ಸೋಮವಾರ ಬಾಡಿಗೆ ಮನೆಗೆ ಮಾಧ್ಯಮದವರು ತೆರಳಿ ಮಾತನಾಡಿಸಿದಾಗ ಅವರು ನೋವು ತೋಡಿಕೊಂಡರು.
ಅಂದು ನಾನು ರಿಕ್ಷಾ ಓಡಿಸುತ್ತಿರು ವಾಗ ಒಬ್ಬ ಕೈ ಅಡ್ಡ ಹಿಡಿದು ನಿಲ್ಲಿಸಿ ಪಂಪ್‌ವೆಲ್‌ಗೆ ಹೋಗಬೇಕು ಎಂದ. ಸ್ವಲ್ಪ ಹೊತ್ತಲ್ಲೇ ಭಾರೀ ಶಬ್ದವಾಯಿತು. ದಟ್ಟ ಹೊಗೆ ಆವರಿಸಿ ಏನೂ ಕಾಣಿಸ ಲಿಲ್ಲ. ನಾನು ಹೇಗೋ ರಿಕ್ಷಾ ಪಕ್ಕಕ್ಕೆ ನಿಲ್ಲಿಸಿದೆ. ಪ್ರಯಾಣಿಕನಿಗೆ ಬೆಂಕಿ ತಗಲಿತ್ತು. ಅವನು ರಿಕ್ಷಾದಿಂದ ಹೊರಗೆ ಇಳಿದ. ನನ್ನ ಮುಖ ಮತ್ತು ಕೈಗೆ ಬೆಂಕಿಯಿಂದ ಗಾಯವಾಗಿತ್ತು. ಬಳಿಕ ನಮ್ಮನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬೇರೇನೂ ನನಗೆ ಗೊತ್ತಾಗಿಲ್ಲ ಎಂದರು ಪುರುಷೋತ್ತಮ.
Related Articles
ಇನ್ನೂ ಒಂದು ವರ್ಷ
ದುಡಿಮೆ ಅಸಾಧ್ಯ
ನಾನು ಇನ್ನೂ ಒಂದು ತಿಂಗಳು ಮನೆಯಿಂದ ಹೊರಗೆ ಹೋಗಬಾರದು ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ ಒಂದು ವರ್ಷ ನನಗೆ ದುಡಿಯಲು ಸಾಧ್ಯವಿಲ್ಲ. 10 ದಿನಕ್ಕೊಮ್ಮೆ ಚಿಕಿತ್ಸೆಗೆ ಬರುವಂತೆ ವೈದ್ಯರು ಹೇಳಿದ್ದಾರೆ. ಇಎಸ್‌ಐನಿಂದ ಇಷ್ಟರ ವರೆಗೆ ಚಿಕಿತ್ಸೆಯ ಖರ್ಚು ಆಯಿತು. ಓಡಾಟ ಮತ್ತಿತರ ಖರ್ಚಿಗೆ ನಮ್ಮಲ್ಲಿದ್ದ ಹಣ ಬಳಕೆ ಮಾಡಿದೆವು. ಸರಕಾರದವರು ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಹೊಸ ರಿಕ್ಷಾ ಕೂಡ ಕೊಡುವುದಾಗಿ ಬಿಜೆಪಿಯವರು ಹೇಳಿದ್ದಾರೆ. ಅವರು ಕೊಟ್ಟರೆ ಆಯಿತು. ಇಲ್ಲವಾದರೆ ದೇವರೇ ಗತಿ ಎಂದು ನೋವು ತೋಡಿಕೊಂಡರು.
ಮೇಯಲ್ಲಿ ಮಗಳ ಮದುವೆ
ಮುಂದಿನ ಮೇ ತಿಂಗಳಿಗೆ ಮಗಳ ಮದುವೆ ನಿಗದಿಯಾಗಿದೆ. ಅದಕ್ಕಾಗಿ ಮನೆ ದುರಸ್ತಿ ನಡೆಯುತ್ತಿದೆ. ಕೆಲವರು ಸಹಾಯ ಮಾಡುತ್ತಿದ್ದಾರೆ. ಬಾಡಿಗೆ ಮನೆ ನೀಡಿದವರು ನನ್ನ ಸ್ನೇಹಿತರು. ಎಷ್ಟು ಬಾಡಿಗೆ ಎಂದು ಹೇಳಿಲ್ಲ ಎಂದರು ಪುರುಷೋತ್ತಮ ಅವರು.
ಆಸ್ಪತ್ರೆಗೆ ಸಂಸದ ನಳಿನ್ ಕುಮಾರ್ ಕಟೀಲು, ಸಚಿವ ಸುನಿಲ್ ಕುಮಾರ್, ಶಾಸಕ ವೇದವ್ಯಾಸ ಕಾಮತ್, ಮಾಜಿ ಶಾಸಕರಾದ ಜೆ.ಆರ್. ಲೋಬೋ, ಐವನ್ ಡಿ’ಸೋಜಾ ಮೊದಲಾದವರು ಭೇಟಿ ನೀಡಿದ್ದಾರೆ. ಸರಕಾರ ಭರವಸೆ ಈಡೇರಿಸುವ ವಿಶ್ವಾಸವಿದೆ ಎಂದು ಪುರುಷೋತ್ತಮ ಅವರ ಮನೆಯವರು ತಿಳಿಸಿದರು.
ಬಲಗೊಳ್ಳದ ಕೈಗಳು
ಪುರುಷೋತ್ತಮ ಪೂಜಾರಿ ಅವರಿಗೆ 61 ವರ್ಷ ವಯಸ್ಸು. ಆಟೋರಿಕ್ಷಾದಲ್ಲಿಯೇ ಬದುಕು ಕಟ್ಟಿಕೊಂಡವರು. ಚಿಕಿತ್ಸೆ ಪಡೆದು ಮನೆಗೆ ಬಂದಿದ್ದರೂ ಅವರ ಆರೋಗ್ಯ ಇನ್ನೂ ಪೂರ್ಣ ಚೇತರಿಕೆ ಕಂಡಿಲ್ಲ. ಅವರ ಕೈಗಳ ಗಾಯ ಇನ್ನೂ ಕೂಡ ಪೂರ್ಣ ಗುಣಮುಖವಾಗದೇ ಇರುವುದರಿಂದ ಅವರ ಮನೆಯವರು ಊಟ ಮಾಡಿಸುತ್ತಿದ್ದಾರೆ.