Advertisement

ನಾನು ಬರದಿದ್ದರೂ ನೀವೇ ಗೆಲ್ಲಿಸಿ: ಸಿದ್ದರಾಮಯ್ಯ

01:19 PM Apr 03, 2018 | Team Udayavani |

ಮೈಸೂರು: ಮತ ಕೇಳಲು ನಾನು ಇನ್ನೊಮ್ಮೆ ಕ್ಷೇತ್ರಕ್ಕೆ ಬರಲಾಗದಿದ್ದರೂ ಗ್ರಾಮಗಳಲ್ಲಿ ನೀವೇ ಸಿದ್ದರಾಮಯ್ಯ ಎಂದು ತಿಳಿದುಕೊಂಡು ತನ್ನ ಪರ ಮತ ಹಾಕಿಸಿ ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು. ಚಾಮುಂಡೇಶ್ವರಿ ಕ್ಷೇತ್ರದ ಜಯಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಸೋಮವಾರ ರೋಡ್‌ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದ ಅವರು, ಗ್ರಾಮಗಳಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು.

Advertisement

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಇನ್ನೊಂದು ಸುತ್ತಿನ ರಾಜ್ಯ ಪ್ರವಾಸ ಮಾಡಬೇಕಿದೆ. ಹೀಗಾಗಿ ಮತ್ತೂಮ್ಮೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮತಯಾಚನೆಗೆ ಬರುವುದು ಕಷ್ಟವಾಗಬಹುದು. ತನ್ನ ಪರವಾಗಿ ನೀವೇ ನಿಂತು ಕೆಲಸ ಮಾಡಿ ಗೆಲ್ಲಿಸಬೇಕು ಎಂದರು.

ಪ್ರಜಾಪ್ರಭುತ್ವದಲ್ಲಿ ಐದು ವವರ್ಷಕ್ಕೊಮ್ಮೆ ಜನಾದೇಶ ಪಡೆಯಬೇಕು. ಮೇ 28ಕ್ಕೆ ಹೊಸ ವಿಧಾನಸಭೆ ರಚನೆಯಾಗಬೇಕು. ಆದ್ದರಿಂದ ಮೇ 12ರಂದು ನಡೆಯುವ ಚುನಾವಣೆಯಲ್ಲಿ ಮುಂದಿನ ಐದು ವರ್ಷಕ್ಕೆ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿರಬೇಕು ಎಂಬುದನ್ನು ಯೋಚನೆ ಮಾಡಿ ಮತ ಚಲಾಯಿಸಿ ಎಂದು ಮನವಿ ಮಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಐದು ವರ್ಷಕ್ಕೊಮ್ಮೆ ಜನರ ಬಳಿ ಬರಲೇಬೇಕು. ಸರ್ಕಾರಿ ಕೆಲಸಕ್ಕೆ ಸೇರಿದಮೇಲೆ ನಿವೃತ್ತಿಯಾಗೋವರೆಗೆ ಇರಬಹುದು. ಆದರೆ, ರಾಜಕೀಯದಲ್ಲಿ ಐದು ವರ್ಷಕ್ಕೊಮ್ಮೆ ಜನರ ಆಶೀರ್ವಾದ ನವೀಕರಣ ಆಗಲೇಬೇಕು. ಅದಕ್ಕಾಗಿ ಈಗ ಮತ್ತೆ ವಿಧಾನಸಭೆಗೆ ಚುನಾವಣೆ ನಡೀತಿದೆ ಎಂದು ಹೇಳಿದರು.

1983ರಲ್ಲಿ ಮೊದಲ ಬಾರಿಗೆ ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದೆ, ಆಗ ಮಾವಿನಹಳ್ಳಿ ಲಾಯರ್‌ ಸಿದ್ದೇಗೌಡ ನನ್ನ ಪರ ಓಡಾಡ್ತಿದ್ದರು. ಪಕ್ಷೇತರನಾಗಿ ಸ್ಪರ್ಧಿಸಿದ್ದರೂ ಗೆಲ್ಲಿಸಿದ್ದೀರಿ, ಐದು ಬಾರಿ ಗೆಲ್ಲಿಸಿದ್ದೀರಿ, 2006ರಲ್ಲಿ ಭಾರೀ ಜಿದ್ದಾಜಿದ್ದಿನ ಉಪ ಚುನಾವಣೆ ನಡೀತು, ನಾವು ಆಗ ಅಧಿಕಾರದಲ್ಲಿರಲಿಲ್ಲ. ಆದರೂ ಚಾಮುಂಡೇಶ್ವರಿ ಕ್ಷೇತ್ರದ ಜನ ಪುನರ್‌ ಜನ್ಮ ನೀಡಿದರು, ಆಗ ನೀವು ಕೊಟ್ಟ ರಾಜಕೀಯ ಶಕ್ತಿಯಿಂದ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು ಎಂದು ತಿಳಿಸಿದರು. 

Advertisement

ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸವನ್ನು ನಾನು ಮಾಡಿದೆ ಎಂದು ಕೆಲವರು ಭೂಮಿಪೂಜೆ ಮಾಡಲು ಹೋಗುತ್ತಾರೆ. ಮುಖ್ಯಮಂತ್ರಿಯಾಗಿ ಕ್ಷೇತ್ರದ ಕೆಲಸಕ್ಕೆ ಅನುದಾನ ಕೊಟ್ಟಿದ್ದು ನಾನು, ಒಂದೇ ಒಂದು ಬಾರಿಯೂ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಇಂಥಾ ಕೆಲಸ ಆಗಬೇಕು ಎಂದು ಯಾವತ್ತೂ ನನ್ನ ಬಳಿ ಬಂದಿಲ್ಲ ಇಲ್ಲಿನ ಶಾಸಕ ಎಂದು ಜಿ.ಟಿ.ದೇವೇಗೌಡ ವಿರುದ್ಧ ಟೀಕೆ ಮಾಡಿದರು. ಭೂಮಿಪೂಜೆ ಮಾಡೋದೆ ಇವರ ಕೆಲಸ, ಅಸೆಂಬ್ಲಿನಲ್ಲಿ ಒಂದು ದಿನ ಪ್ರಶ್ನೆ ಕೇಳಿಲ್ಲ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿಲ್ಲ. ನನಗೊಂದು ಮನವಿ ಕೊಟ್ಟಿಲ್ಲ ಎಂದು ಹೇಳಿದರು.

 ಮತ್ತೆ ವರುಣಾದಲ್ಲೇ ಸ್ಪರ್ಧಿಸಲು ಒತ್ತಾಯವಿದೆ. ಆದರೆ, ಯಾವ ಕ್ಷೇತ್ರದಲ್ಲಿ ರಾಜಕೀಯ ಪ್ರಾರಂಭ ಮಾಡಿದೆ, ಅಲ್ಲಿಂದಲೇ ಕೊನೆ ಚುನಾವಣೆ ನಿಲ್ಲಬೇಕು ಎಂಬ ಆಸೆ ತನಗೆ, ಹೀಗಾಗಿ ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಕೆಲವರು ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ. ನರಸಿಂಹರಾಜ ಕ್ಷೇತ್ರ, ವರುಣಾ, ಕೊಪ್ಪಳ ಕ್ಷೇತ್ರಕ್ಕೆ ಹೋಗುತ್ತಾರೆ ಅಂಥೆಲ್ಲಾ ಅಪಪ್ರಚಾರ ಮಾಡ್ತಿದ್ದಾರೆ. ಅಲ್ಲಿನ ಜನರು ಕರೆಯುತ್ತಿರುವುದು ನಿಜ. ಆದರೆ, ಇಲ್ಲೇ ಸ್ಪರ್ಧಿಸುತ್ತೇನೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next