ನೀನಿಲ್ಲದ ಆ ಗಳಿಗೆ ಹೃದಯದಲ್ಲಿ ಒಂಥರಾ ವಿರಹ ವೇದನೆ. ಈ ಸಮಯದಲ್ಲಿಯೇ ತುಂತುರು ಮಳೆ ಸುರಿದು ನಿನ್ನ ನೆನಪು ಮತ್ತಷ್ಟು ಒತ್ತರಿಸಿ ಬರುವಂತೆ ಮಾಡುತ್ತಿತ್ತು. ನಾನು, ನೀನು ಮೊದಲು ಭೇಟಿಯಾದ ಉದ್ಯಾನವನದಲ್ಲೂ ಯಾಕೋ ಮಂಕು ಕವಿದ ಭಾವ.
ದಿನವೂ ಮಲ್ಲಿಗೆ ನೀಡುತ್ತಿದ್ದ ಮುದುಕಿಗೂ ಈ ಒಂಟಿ ಜೀವ ನೋಡಿ ಬೇಸರವಾಗಿದೆ. ಒಬ್ಬಳೇ ಮಲ್ಲಿಗೆ ಖರೀದಿಸಲು ಹೋದಾಗ ಆಕೆ, “ಜೋಡಿ ಜೀವಗಳ ಒಂಟಿತನ ನಾ ನೋಡಲಾರೆ. ಬೇಗ ನಿನ್ನ ಗಂಡನನ್ನು ಕರಕೊಂಡು ಬಂದು ಹೂ ತಗೋ. ಇಲ್ಲದಿದ್ದರೆ ನಾ ನಿಂಗೆ ಹೂ ಮಾರಲ್ಲ’ ಅಂದಳು. ಅರ್ಥವಾಯ್ತಾ? ನಾವು ದೂರವಾಗಿದ್ದು ಆ ಮುದುಕಿಗೂ ಇಷ್ಟವಿಲ್ಲ.
ನಾಬ್ಬರೂ ಮುನಿಸಿಕೊಂಡು ಮಾತನಾಡದಿರಲು ಕಾರಣವಾದರೂ ಏನು? ಒಂದು ಸಣ್ಣ ತಮಾಷೆಯ ಹುಸಿಮುನಿಸು. ಬೆಳಗ್ಗಿನ ತಿಂಡಿ ಸರಿಯಾದ ಸಮಯಕ್ಕೆ ಆಗಿಲ್ಲ, ಬಟ್ಟೆ ಇಸ್ತ್ರಿ ಆಗಿಲ್ಲ ಅಂತ ನಿನ್ನ ಕೂಗಾಟ, ಎಲ್ಲವನ್ನೂ ನಾನೊಬ್ಬಳೆ ಮಾಡಬೇಕೆ? ಎಂಬ ನನ್ನ ರಂಪಾಟವೇ ನಮ್ಮಿಬ್ಬರ ನಡುವೆ ಅಂತರ ಹೆಚ್ಚಾಗಲು ಕಾರಣವಾಗಿದ್ದು. ನೀ ಹೇಳಿದಂತೆ, ಅಂದೇ ನಾನು ನನ್ನ ಕೋಪಕ್ಕೆ ವಿರಾಮ ನೀಡಿದ್ದರೆ ಇಂದು ಪಶ್ಚಾತ್ತಾಪ ಪಡುವ ಅಗತ್ಯವಿರಲಿಲ್ಲ. ಆದರೆ ಏನು ಮಾಡಲಿ ಗೆಳೆಯ, ಅಂದು ನಿನ್ನ ಬಳಿ ಕ್ಷಮೆ ಕೇಳಲು ಅಹಂ ಅಡ್ಡ ಬಂದಿತ್ತು. ನೀ ಇನ್ನೊಬ್ಬರಿಗೆ ನನ್ನ ಹೋಲಿಕೆ ಮಾಡುವುದು ನನ್ನ ಇಗೋಗೆ ಪೆಟ್ಟು ನೀಡಿತ್ತು. ನಿನ್ನ ಕಣ್ಣೀರಿಗೂ ಉತ್ತರಿಸದೇ ಸುಮ್ಮನಿರುವಷ್ಟರ ಮಟ್ಟಿಗೆ ಮನ ಘಾಸಿಯಾಗಿತ್ತು.
ಇಡೀ ದಿನ ಇಬ್ಬರೂ ಒಂದೇ ಮನೆಯಲ್ಲಿ ಉಸಿರಾಡುತ್ತಿದ್ದರೂ, ಮನಗಳು ಸಾವಿರಾರು ಕೀ.ಮೀ.ನಷ್ಟು ದೂರದ ಅಂತರದಲ್ಲಿದ್ದವು. ಊಟಕ್ಕೆ ಬಾರೇ ಎಂದು ನೀನು ಕರೆದರೂ, ನಾನು ಸಿಟ್ಟಿನಿಂದಲೇ “ಬೇಡ’ ಅಂದಿದ್ದೆ. ಆದರೆ, ಆ ಹೊತ್ತಿಗಾಗಲೇ ನಿನ್ನ ತಪ್ಪಿನ ಅರಿವು ನಿನಗಾಗಿತ್ತು. ಆದ್ದರಿಂದಲೇ ಅಲ್ಲವೇ ನೀನು ಪರಿತಪಿಸಿದ್ದು. ಆದರೆ, ನನ್ನೊಳಗೆ ಇನ್ನೂ ಕೋಪದ ಅಗ್ನಿ ಉಳಿದೇ ಇತ್ತು. ಆ ಕಾರಣದಿಂದಲೇ ನೀನು ಮಕ್ಕಳಂತೆ ನನ್ನ ರಮಿಸಿದರೂ ನಾನು ನಿನ್ನ ದೂರವಿಟ್ಟೆ.
ಈಗ ಈ ಮನ ನಿನ್ನ ಬಯಸುತ್ತಿದೆ, ತಪ್ಪಿನ ಅರಿವಾಗಿದೆ. ಆದರೆ, ನೀನು ಮೀಟಿಂಗ್ ನೆಪದಲ್ಲಿ ದೂರದ ಚೆನ್ನೆçನಲ್ಲಿ ಇದ್ದೀಯ. ನಾನು ಇಲ್ಲಿ ಪ್ರೇಮಿಗಳ ಊರಿನಲ್ಲಿ, ತುಂತುರು ಮಳೆಯಲ್ಲಿ, ಕಣ್ಣೀರ ಕರಗಿಸುತ್ತ ಜೀವಿಸುತ್ತಿರುವೆ. ಆದಷ್ಟು ಬೇಗ ಅಲ್ಲಿಂದ ಹೊರಟು ಬಾ
ನಿನಗಾಗಿ ಕಾದಿರುವ..
ಗೋಪಿಕಾ