ಬೆಂಗಳೂರು: ಡಾ.ಜಿ.ಪರಮೇಶ್ವರ್ ಅವರನ್ನು ಕೇಳಿದರೆ ಯಾವ ಪಕ್ಷದಲ್ಲಿ ಒಳ ಜಗಳ ಎಂಬುದು ಗೊತ್ತಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.
ಬಿಜೆಪಿಯಲ್ಲಿ ಒಳಜಗಳ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಹಳ ದಿನ ಖಾಯಿಲೆ ಮುಚ್ಚಿ ಕೊಳ್ಳಲು ಸಾಧ್ಯವಿಲ್ಲ. ಜಗಳ ಇರುವುದು ಕಾಂಗ್ರೆಸ್‌ನಲ್ಲಿ. ಪರಮೇಶ್ವರ ಜೊತೆಗೆ ಅಂತರಂಗದಲ್ಲಿ ಮಾತನಾಡಿದರೆ ಅವರ ಸೋಲಿಗೆ ಯಾರು ಕಾರಣ ಎಂಬುದನ್ನು ತಿಳಿಸುತ್ತಾರೆ ಎಂದು ಹೇಳಿದರು. ಸಿದ್ದರಾಮಯ್ಯ ಟೀಮ್ ದುಡ್ಡು ಕೊಟ್ಟು ನನ್ನನ್ನು ಸೋಲಿಸಿದೆ ಎಂದು ವಿಶ್ವನಾಥ್ ಹೇಳಿಕೆ ನೀಡಿಲ್ಲವೇ? ಅಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ ಇದೆ ಎಂದು ತಿಳಿಸಿದರು.
ನೋ ಕಮೆಂಟ್: ಜನಾರ್ದನ ರೆಡ್ಡಿ ಅವರನ್ನು ವಾಪಸ್ ಕರೆತರುವ ವಿಚಾರಕ್ಕೆ ಸಂಬಂಧಪಟ್ಟಂತೆ ನಾನು ಏನನ್ನೂ ಹೇಳುವುದಿಲ್ಲ. ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಪರಿಶೀಲಿಸಿ ನಂತರ ಪಕ್ಷ ನಿರ್ಧಾರ ಮಾಡುತ್ತದೆ. ಬೆಳಗಾವಿ ನಾಯಕರ ಭಿನ್ನಮತದ ಬಗ್ಗೆ ನಾನು ಹೇಳುವುದಿಷ್ಟೆ. ಒಗ್ಗಟ್ಟಾಗಿ ಹೋದರೆ ಅಧಿಕಾರ. ರಾಜಕೀಯವಾಗಿ ಯಾರೂ ದಡ್ಡರಲ್ಲ. ಒಟ್ಟಾಗಿ ಹೋದರೆ ರಾಜ್ಯ ಮತ್ತು ಪಕ್ಷಕ್ಕೆ ಒಳ್ಳೆಯದು. ಇಲ್ಲದಿದ್ದರೆ ಪಕ್ಷಕ್ಕೆ ದೊಡ್ಡ ಹಾನಿಯಾಗುತ್ತದೆ. ಒಗ್ಗಟ್ಟಾಗಿ ಹೋಗಲೇಬೆಕಾಗುತ್ತದೆ ಎಂದರು.
ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ರಾಜೇಗೌಡ ಶಾರದಾಂಬೆಯ ಕ್ಷೇತ್ರ ಪ್ರತಿನಿಧಿಸುವವರು. ಅವರಿಂದ ಈ ಮಾತು ನಿರೀಕ್ಷಿಸಿರಲಿಲ್ಲ. ಅವರು ಕೂಡಲೇ ಕ್ಷಮೆಯಾಚಿಸಬೇಕು. ಇದರಿಂದ ಅವರ ಮನೆತನದ ಗೌರವ ಉಳಿಯುತ್ತದೆ. ಅವರ ಸಹೋದರ ಸೋಮೇಶ್ 1990 ರಲ್ಲಿ ಕರಸೇವೆಯಲ್ಲಿ ಭಾಗವಹಿಸಿದ್ದರು. ದತ್ತಪೀಠದ ಬಗ್ಗೆ ಮಾತಾಡಿದವರು ಯಾವ ರೀತಿ ರಾಜಕೀಯವಾಗಿ ನಿರ್ನಾಮ ಆಗಿ¨ªಾರೆ ಎಂಬುದನ್ನು ರಾಜೇಗೌಡ ತಿಳಿದುಕೊಳ್ಳಲಿ ಎಂದು ಎಚ್ಚರಿಕೆ ನೀಡಿದರು.