Advertisement

ಒಂದೂರಿಗೆ ಟಿಕೆಟ್‌ ಕೇಳಿದರೆ ಕಂಡಕ್ಟರ್‌ ಕೊಡುವುದು ಮತ್ತೊಂದೂರಿಗೆ!

11:47 PM Jul 23, 2023 | Team Udayavani |

ಬೆಂಗಳೂರು: ನೀವು ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಟಿಕೆಟ್‌ ಕೇಳಿದರೆ ಕಂಡಕ್ಟರ್‌ ಮೈಸೂರಿಗೆ ಕೊಡುತ್ತಾರೆ. ಬೆಂಗಳೂರಿನಿಂದ ಹಾವೇರಿಗೆ ಹೊರಟರೆ, ಹುಬ್ಬಳಿಗೆ ಟಿಕೆಟ್‌ ನೀಡುತ್ತಾರೆ. ಇವು ಕೆಲವು ಉದಾಹರಣೆ ಮಾತ್ರ. ಇಂಥ ಉದಾರತೆ ಒಂದು ತಿಂಗಳಿಂದ ಕಂಡುಬರುತ್ತಿದೆ!

Advertisement

ಇದು “ಶಕ್ತಿ’ ಯೋಜನೆಯ ಚಮತ್ಕಾರ. ಲೆಕ್ಕಾಚಾರದ ಪ್ರಕಾರ ಇದು ನಿಗಮಕ್ಕೆ ಹೆಚ್ಚಿನ ಆದಾಯ (ಸರಕಾರದಿಂದ ಬರುವ ಅನುದಾನ) ಬರುವುದರ ಜತೆಗೆ ನಿರೀಕ್ಷೆ ಮೀರಿ ಕಲೆಕ್ಷನ್‌ ತರುವ ನಿರ್ವಾಹಕನಿಗೆ ಶಹಬ್ಟಾಸ್‌ಗಿರಿಯೂ ಸಿಗುತ್ತದೆ. ಆದರೆ ಮತ್ತೊಂದೆಡೆ ಗೊತ್ತಿಲ್ಲದೆ ಸರಕಾರದ ಬೊಕ್ಕಸ ಸೋರಿಕೆಗೆ ಕಾರಣವಾಗುತ್ತಿದೆ.

ನಾನು ಬೆಂಗಳೂರಿನಿಂದ ರಾಣೆಬೆನ್ನೂರಿಗೆ ಟಿಕೆಟ್‌ ಕೇಳಿದೆ. ಆದರೆ ಮುಂದಿನ 35 ಕಿ.ಮೀ. ದೂರದ ಹಾವೇರಿಗೆ ಟಿಕೆಟ್‌ ಕೊಟ್ಟರು. ಇದನ್ನು ಆಕ್ಷೇಪಿಸಿದರೂ ಕಂಡಕ್ಟರ್‌ ಕಿವಿಗೊಡಲಿಲ್ಲ ಎಂದು ರಾಣೆಬೆನ್ನೂರಿನ ಪ್ರಯಾಣಿಕರಾದ ಮಂಜುಳಾ ತಿಳಿಸಿದ್ದಾರೆ.

ಈ ರೀತಿ 30ರಿಂದ 35 ಕಿ.ಮೀ. ದೂರದ ಊರಿಗೆ ಕಡಿಮೆ ಅಂದರೂ 50ರಿಂದ 70 ರೂ.ಗಳಷ್ಟು ಟಿಕೆಟ್‌ ದರ ಇರುತ್ತದೆ. ಹೀಗೆ ದಿನಕ್ಕೆ 10 ಮಹಿಳೆಯರಿಗೆ ಮುಂದಿನ ಊರಿನ ಟಿಕೆಟ್‌ ನೀಡಿದರೂ, ನಿಗಮಕ್ಕೆ ಒಂದು ಬಸ್‌ ನಿಂದ ದಿನಕ್ಕೆ 800 ರೂ.ಗಳಿಂದ 1,000 ರೂ. ಹೆಚ್ಚುವರಿ ಲಾಭವಾಗುತ್ತದೆ. ಬಸ್‌ ಜನಜಂಗುಳಿಯಿಂದ ಕೂಡಿದಾಗ, ಪ್ರಯಾ ಣಿಕರು ಹೆಚ್ಚಾಗಿ ಟಿಕೆಟ್‌ ಅನ್ನು ಗಮನಿಸು ವುದಿಲ್ಲ. ಅಂತಹ ಸಂದರ್ಭಗಳಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ.

ಬಿಎಂಟಿಸಿಯಲ್ಲೂ ಇದೇ ಸ್ಥಿತಿ
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಾತ್ರವಲ್ಲ; ಬೆಂಗಳೂರಿನ ಬಿಎಂಟಿಸಿ ಬಸ್‌ಗಳಲ್ಲೂ ಇಂಥದ್ದೆಲ್ಲ ನಡೆಯುತ್ತಿದೆ. ನಾನು ತುಮಕೂರಿನಿಂದ ಮೆಜೆಸ್ಟಿಕ್‌ಗೆ ಬಂದಿಳಿದೆ. ಬಿಎಂಟಿಸಿ ಬಸ್‌ನಲ್ಲಿ ಆಧಾರ್‌ಕಾರ್ಡ್‌ ತೋರಿಸಿ ಮೆಜೆಸ್ಟಿಕ್‌ನಿಂದ ದೊಮ್ಮಲೂರಿಗೆ ಟಿಕೆಟ್‌ ಕೇಳಿದೆ. ಆದರೆ ಕಂಡಕ್ಟರ್‌ ದೊಮ್ಮಲೂರಿನಿಂದ ಮುಂದಿನ ಎರಡನೇ ನಿಲ್ದಾಣವಾದ ಮಣಿಪಾಲ್‌ ಆಸ್ಪತ್ರೆಗೆ ಟಿಕೆಟ್‌ ಕೊಟ್ಟರು ಎಂದು ನಿಸರ್ಗ ಎಂಬವರು ತಿಳಿಸಿದರು. ಇಂಥ ಆರೋಪವನ್ನು ಹಲವರು ಮಾಡುತ್ತಿದ್ದಾರೆ.

Advertisement

ಬಿಎಂಟಿಸಿ ಬಸ್‌ನಲ್ಲಿ ಒಂದು ಬಸ್‌ ನಿಲ್ದಾಣದಿಂದ ಮುಂದಿನ ಬಸ್‌ ನಿಲ್ದಾಣಕ್ಕೆ ಟಿಕೆಟ್‌ ದರದಲ್ಲಿ ಕೇವಲ ಐದು ರೂ. ವ್ಯತ್ಯಾಸ ಇರಬಹುದು. ಆದರೆ ಇದೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಐದು ಹತ್ತಾಗಬಹುದು, ಹತ್ತು ಇಪ್ಪತ್ತಾಗಬಹುದು. ಇದರಿಂದ ನಿಗಮಕ್ಕೆ ಲಾಭವಾಗಬಹುದು. ಆದರೆ ಪರೋಕ್ಷವಾಗಿ ಸರಕಾರಕ್ಕೆ ಹೊರೆ ಉಂಟಾಗಲಿದೆ ಎಂದು ಸ್ವತಃ ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಾರೆ.

– ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next