ಗೌರಿಬಿದನೂರು: ಜನಸಾಮಾನ್ಯರಿಗೆ ಕಾನೂನು ಬದ್ಧವಾಗಿ ಕೆಲಸ ಮಾಡಿಕೊಡಲು ಸರ್ಕಾರಿ ಅಧಿಕಾರಿಗಳು ಅಥವಾ ನೌಕರರು ಲಂಚ ಕೇಳುವುದು ಹಾಗೂ ಕೆಲಸ ಮಾಡಿಕೊಡಲು ವಿಳಂಬ ಮಾಡುತ್ತಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಎಸಿಬಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ನಿರೀಕ್ಷಕಿ ಲಕ್ಷ್ಮೀದೇವಮ್ಮ ತಿಳಿಸಿದರು.
ನಗರದ ತಾಪಂನ ಸಾಮರ್ಥಯ ಸೌಧದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಕಚೇರಿ, ಸಬ್ ರಿಜಿಸ್ಟರ್ ಕಚೇರಿ, ನಗರಸಭೆ, ತಾಪಂ, ಗ್ರಾಪಂ, ಪೋಲೀಸ್ ಇಲಾಖೆ, ಶಾಲಾ ಕಾಲೇಜು ಸೇರಿದಂತೆ ಹಲವು ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಸಕಾಲ ಅಡಿಯಲ್ಲಿನ ಅರ್ಜಿ ಸಲ್ಲಿಸಿರುತ್ತಾರೆ.
ವಿಳಂಬ ಮಾಡಿದರೆ ಅರ್ಜಿ ಸಲ್ಲಿಸಿದ ವ್ಯಕ್ತಿ ಎಸಿಬಿಗೆ ದೂರು ನೀಡಿದಾಗ ಕಲಂ 7 ಸಿ ಸೆಕ್ಷನ್ ಅಡಿಯಲ್ಲಿ ದಾಳಿ ಮಾಡಿದಾಗ ಅರ್ಜಿ ಅಧಿಕಾರಿಯ ಬಳಿ ಸಿಕ್ಕಿದರೆ ಅದನ್ನೇ ಸಾಕ್ಷ್ಯವನ್ನಾಗಿ ಪರಿಗಣಿಸಿ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು. ಅಧಿಕಾರಿಗಳು, ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಿ ಕಾನೂನು ಬದ್ಧªವಾಗಿದ್ದರೆ ಕೆಲಸ ಮಾಡಿಕೊಡಿ, ಕಾನೂನು ಬದ್ಧವಾಗಿಲ್ಲದಿದ್ದಲ್ಲಿ ಹಿಂಬರಹವನ್ನು ನೀಡಿ ಎಂದು ಸೂಚಿಸಿದರು.
ವಿವರ ಪಡೆಯಲಾಗುವುದು: ಗದಗೆಟ್ಟ ರಸ್ತೆ , ಕಳಪೆಕಾಮಗಾರಿ ಮುಂತಾದವುಗಳ ಬಗ್ಗೆ ಪತ್ರಿಕೆಗಳಲ್ಲಿ ಬಂದ ಸುದ್ದಿಯ ಆಧಾರದ ಮೇಲೆ ಕ್ರಮಕೈಗೊಳ್ಳುವಿರಾ ಎಂಬ ಪತ್ರಕರ್ತರ ಪ್ರಶ್ನೆಗೆ, ಎಸಿಬಿ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಲು ಸಾಧ್ಯವಿಲ್ಲ. ಯಾರು ಬೇಕಾದರೂ ರಸ್ತೆ ದುರಸ್ತಿ ಬಗ್ಗೆ ಪತ್ರಿಕೆಗಳಲ್ಲಿ ಬಂದ ಸುದ್ದಿ ಹಾಗೂ ಅದರ ಬಗ್ಗೆ ದೂರು ಅರ್ಜಿ ನೀಡಿದಲ್ಲಿ ಸಂಬಂಧ ಪಟ್ಟ ಇಲಾಖೆಯಿಂದ ಸೂಕ್ತ ವಿವರ ಪಡೆಯಲಾಗುವುದು ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗವುದು ಎಂದು ತಿಳಿಸಿದರು.
ಮೋರಿ ದುರಸ್ತಿ: ನಗರ ವ್ಯಾಪ್ತಿಯ ಹಿರೇಬಿದನೂರಿನಿಂದ ಕುರುಬರಹಳ್ಳಿ, ಚೀಗಟಗೆರೆ ಗ್ರಾಮಗಳಿಗೆ ತೆರಳಲು ರಸ್ತೆಗೆ ಡಾಂಬರೀಕರಣ ಮಾಡಿ ಕೇವಲ 2 ತಿಂಗಳಲ್ಲಿಯೇ ರಸ್ತೆ ಹದಗೆಟ್ಟಿದೆ. ಈ ಬಗ್ಗೆ ಪತ್ರಿಕೆಗಳಲ್ಲಿ ರಸ್ತೆಯ ದುಸ್ಥಿತಿಯ ಬಗ್ಗೆ ವರದಿ ಪ್ರಕಟವಾದರೂ ಯಾವುದೇ ಅಧಿಕಾರಿಗಳು, ಗುತ್ತಿಗೆದಾರರಾಗಲೀ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಮತ್ತು ಪತ್ರಕರ್ತರು ದೂರಿದರು. ಈ ವೇಳೆ ಜಿಪಂ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಸ್ಪಷ್ಟೀಕರಣ ನೀಡಿ, ಕೇವಲ 10 ಲಕ್ಷ ರೂ.ಗಳಲ್ಲಿ ಡಾಂಬರೀಕರಣ ಮಾತ್ರ ಮಾಡಲಾಗಿದೆ. ಅಲ್ಲಿ ಮೋರಿಯೊಂದನ್ನು ರಿಪೇರಿ ಮಾಡಬೇಕಾಗಿದ್ದು, ದುರಸ್ತಿ ನಂತರ ರಸ್ತೆ ರಿಪೇರಿ ಮಾಡಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು 2 ಹಾಗೂ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಅರ್ಜಿ1 ಬಂದಿತ್ತು. ಸಭೆಯ ಅಧ್ಯಕ್ಷತೆಯನ್ನು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್ ವಹಿಸಿದ್ದರು. ಕೃಷಿ ಇಲಾಖೆಯ ಸಹಾಯಕ ನಿದೇರ್ಶಕ ಎನ್.ಎನ್.ಮಂಜುನಾಥ್, ತೋಟಗಾರಿಕೆ ಇಲಾಖೆ ರವಿಕುಮಾರ್, ಪಶು ಸಂಗೋಪನಾ ಇಲಾಖೆ ಮಾರುತಿ ರೆಡ್ಡಿ, ಆಹಾರ ಇಲಾಖೆಯ ದಿನೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಜೈಲು ಪಾಲು, ಎಚ್ಚರಿಕೆ: ಜನರ ಅನುಕೂಲಕ್ಕಾಗಿ ಇಲಾಖಾವಾರು ಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಅರ್ಜಿದಾರರು ಸರ್ಕಾರಿ ಅಧಿಕಾರಿಗಳು ಹಲವಾರು ಕೆಲಸಗಳಲ್ಲಿ ಒತ್ತಡದಲ್ಲಿರುತ್ತಾರೆ. ಅಂತಹ ಸಂದರ್ಭದಲ್ಲಿ ಅಧಿಕಾರಿಗಳ ಕಚೇರಿ ಸಿಬ್ಬಂದಿ ಅರ್ಜಿಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಬೇಕು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 2018 ಪ್ರಬಲವಾಗಿದ್ದು, ಮೈಮರೆತರೆ ಜೈಲು ಪಾಲಾಗಬೇಕಾಗುತ್ತದೆ ಎಂದು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ನಿರೀಕ್ಷಕಿ ಲಕ್ಷ್ಮೀದೇವಮ್ಮ ಎಚ್ಚರಿಸಿದರು