ಬೆಂಗಳೂರು: “ನನ್ನ ಹಣೆ ಬರಹದಲ್ಲಿ ಬರೆದಿದ್ದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಹುಡುಕಿಕೊಂಡು ಬರುತ್ತದೆ. ಅದರ ಮೇಲೆ ನನಗೆ ನಂಬಿಕೆ ಇದೆ. ಲಕ್ಷಣ ಸವದಿ ಅವರು ಗೆಲ್ಲದಿದ್ದರೂ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿದ್ದಾರೆ. ಅದು ಅವರ ಹಣೆಯಲ್ಲಿ ಬರೆದಿತ್ತು. ಹಾಗೇ ನನ್ನ ಹಣೆಯಲ್ಲಿ ಬರೆದಿದ್ದರೆ ನಾನೂ ಉನ್ನತ ಹುದ್ದೆ ಅಲಂಕರಿಸುತ್ತೇನೆ’ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬುಧವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. “ಬೇರೆಯವರು ನೀಡಿದ ಹೇಳಿಕೆಗಳಿಗೆ ನಾನು ಉತ್ತರ ಕೊಡಲು ಆಗುವುದಿಲ್ಲ. ನನ್ನ ಪಕ್ಷ ಹಾಗೂ ಗಾಂಧಿ ಕುಟುಂಬದ ಮೇಲೆ ನನಗೆ ನಂಬಿಕೆ ಇದೆ. ಅವರ ನಾಯಕತ್ವದ ಮೇಲೆ ನಂಬಿಕೆ ಇದೆ. ಅವರು ಏನೇ ಕೊಟ್ಟರೂ ಅದನ್ನು ಪ್ರಸಾದ ಎಂದು ಸ್ವೀಕರಿಸುತ್ತೇನೆ. ನಾನು ಯಾವ ಸ್ಥಾನಕ್ಕೂ ಆಕಾಂಕ್ಷಿ ಅಲ್ಲ. ನಾನು ಎಲ್ಲಿಗೂ ಲಾಬಿ ಮಾಡಲು ಹೋಗಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ
ನಾನೇನು ಎಂದು ಜನಕ್ಕೆ ಪರಿಚಯ ಇದೆ. ನನಗೆ ಲಾಬಿ ಮಾಡುವ, ಬಯೋಡೆಟಾ ಕೊಡುವ ಅಗತ್ಯವಿಲ್ಲ’ ಎಂದು ದಿನೇಶ್ ಗುಂಡೂರಾವ್ ಅವರ ಮಾತಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು. “ಈಗಾಗಲೇ ನಮ್ಮ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಇದ್ದಾರೆ. ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಹೈಕಮಾಂಡ್ ನಾಯಕರು ಬರುತ್ತಾರೆ. ಅವರು ಏನು ತೀರ್ಮಾನ ಮಾಡಬೇಕೋ ಅದನ್ನು ಮಾಡುತ್ತಾರೆ. ನಾನಂತೂ ಯಾವುದೇ ಆತುರದಲ್ಲಿ ಇಲ್ಲ. ನನಗೆ ಅದರ ಅಗತ್ಯವೂ ಇಲ್ಲ. ನಾವು ಕಾರ್ಯಕರ್ತರು. ಹೀಗಾಗಿ, ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರಿಗೆ ಏನು ಮರ್ಯಾದೆ ಕೊಡಬೇಕೋ ಕೊಡುತ್ತೇವೆ’ ಎಂದು ಹೇಳಿದರು.
ಬಾಂಬೆ ಸ್ನೇಹಿತರು ಮಂತ್ರಿ ಆಗುವುದಕ್ಕೆ ಕಾಯ್ತಿದ್ದೀನಿ: ನಮ್ಮ ಬಾಂಬೆ ಸ್ನೇಹಿತರು ಯಾವಾಗ ಮಂತ್ರಿ ಆಗುತ್ತಾರೆ ಎಂದು ಕಾಯುತ್ತಿದ್ದೇನೆ. 17 ಖಾತೆಗಳು ಅವರಿಗಾಗಿ ಕಾಯ್ದುಕೊಂಡಿವೆ. ಹೀಗಾಗಿ, ಅವರು ಮಂತ್ರಿಯಾಗುವುದನ್ನು ಟಿವಿಯಲ್ಲಿ ನೋಡಲು ಕಾಯುತ್ತಿದ್ದೇನೆ. ಅವರು ಯಾಕೆ ಕಣ್ಣೀರಿಡಬೇಕು?ಹೋರಾಟ ಮಾಡಿ ಯಡಿಯೂರಪ್ಪನವರಿಗೆ ಕಂಕಣ ಕಟ್ಟಿ ಮುಖ್ಯಮಂತ್ರಿ ಮಾಡಿದ್ದಾರೆ. ಹೀಗಾಗಿ, ಅದರ ಫಲ ಅನುಭವಿಸುತ್ತಿದ್ದಾರೆ. ಮೊದಲು ಒಂದು ಕಾಲ ಇತ್ತು. ಆಗ ತಂದೆ-ತಾಯಿ ಮಾಡಿದ ಫಲವನ್ನು ಮಕ್ಕಳು, ಮೊಮ್ಮಕ್ಕಳು ಅನುಭವಿಸುತ್ತಿದ್ದರು. ಆದರೆ, ಈಗ ಹಾಗಿಲ್ಲ. ನಾವು ಮಾಡಿದ್ದನ್ನು ನಾವೇ ಅನುಭವಿಸಬೇಕು. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ನಮ್ಮ ಕಾರ್ಯಕ್ರಮ ನಿಲ್ಲಿಸಲು ಬಿಡುವುದಿಲ್ಲ: ಹಿಂದಿನ ಸರ್ಕಾರ ಜಾರಿಗೊಳಿಸಿರುವ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ಬಿಡುವುದಿಲ್ಲ. ಕುಮಾರಸ್ವಾಮಿ ಸರ್ಕಾರ ಇರಲಿ ಅಥವಾ ಸಿದ್ದರಾಮಯ್ಯ ಅವರ ಸರ್ಕಾರ ಇರಲಿ. ನಮ್ಮ ಕಾರ್ಯಕ್ರಮಗಳನ್ನು ರದ್ದು ಮಾಡಲು ಹೋದರೆ, ಕೇವಲ ಕಾಂಗ್ರೆಸ್ ಮಾತ್ರವಲ್ಲ ಜೆಡಿಎಸ್ ಶಾಸಕರೂ ಸೇರಿ ಹೋರಾಟ ಮಾಡುತ್ತೇವೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಳ್ಳಲು 5 ಲಕ್ಷ ಹಾಗೂ ಬಾಡಿಗೆಗೆ 5 ಸಾವಿರ ರೂ ಪರಿಹಾರ ನೀಡಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ. ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದಿದ್ದರೆ ನಾವು ನಮ್ಮ ಹೋರಾಟ ಮಾಡುತ್ತೇವೆ.
-ಡಿ.ಕೆ.ಶಿವಕುಮಾರ್, ಮಾಜಿ ಸಚಿವ