Advertisement

“ಕೈ’ಟಿಕೆಟ್‌ ತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಗೆಲ್ಲಿಸ್ತೇವೆ

07:26 AM Mar 15, 2019 | Team Udayavani |

ತುಮಕೂರು: ಜಿಲ್ಲೆಯಲ್ಲಿ ಕಾಂಗ್ರೆಸ್‌ ಸಂಸದರಾಗಿ ಜನಪರ ಕಾರ್ಯ ಮಾಡಿ, ಸಂಸತ್ತಿನಲ್ಲಿ ಕ್ರಿಯಾಶೀಲ ಸಂಸದರಾಗಿದ್ದ ಎಸ್‌.ಪಿ.ಮುದ್ದಹನುಮೇಗೌಡರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ತಪ್ಪಿದರೆ ಚುನಾವಣೆಯಲ್ಲಿ ಮುದ್ದಹನುಮೇಗೌಡರನ್ನು ಪಕ್ಷೇತರ ಅಭ್ಯರ್ಥಿಯಾಗಿ ಎಲ್ಲಾ ಕಾರ್ಯರ್ತರು ಒಗ್ಗಟ್ಟಾಗಿ ನಿಲ್ಲಿಸಿ, ಗೆಲ್ಲಿಸುತ್ತೇವೆ ಎಂದು ಕಾಂಗ್ರೆಸ್‌ ಮುಖಂಡ ಸಾಸಲು ಸತೀಶ್‌ ಸವಾಲು ಹಾಕಿದರು.

Advertisement

ಕಾಯುತ್ತೇವೆ: ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಸಂಸದರಾಗಿರುವ ಎಸ್‌.ಪಿ.ಮುದ್ದಹನುಮೇಗೌಡರು ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಿ ಜನರ ಮಧ್ಯದಲ್ಲಿ ಇದ್ದವರು. ಅವರಿಗೆ ಟಿಕೆಟ್‌ ತಪ್ಪಿರುವುದು ದುರಂತ. ಆದರೂ ನಾವು ಮಾ.16ರ ವರೆಗೆ ಕಾಯುತ್ತೇವೆ. ಕಾಂಗ್ರೆಸ್‌ ಪಕ್ಷದ ವರಿಷ್ಠರು ಪುನರ್‌ ಪರಿಶೀಲನೆ ಮಾಡಿ, ಮುದ್ದಹನುಮೇಗೌಡರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದರು.

ಗಂಭೀರವಾಗಿ ಪರಿಗಣಿಸಿ: ಸಂಸದರಿಗೆ ಟಿಕೆಟ್‌ ತಪ್ಪಿರುವ ಹಿಂದೆ ಕುತಂತ್ರನೋ, ಮಸಲತ್ತೋ ಗೊತ್ತಿಲ್ಲ. ಡಿಸಿಎಂ ಜಿ.ಪರಮೇಶ್ವರ್‌ ಅವರು ಇದನ್ನು  ಗಂಭೀರವಾಗಿ ಪರಿಗಣಿಸಬೇಕು. ಶನಿವಾರ ದೆಹಲಿಯಲ್ಲಿ ನಡೆಯುವ ಕಾಂಗ್ರೆಸ್‌ ಸಭೆಯಲ್ಲಿ ಪುನರ್‌ ಪರಿಶೀಲನೆ ನಡೆಸಬೇಕು. ಸಿಇಸಿ ಸಭೆಯಲ್ಲಿ ಪರಿಶೀಲಿಸಿ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ರಾಯಸಂದ್ರ ರವಿಕುಮಾರ್‌, ತಿಪಟೂರಿನ ಸಿ.ಬಿ.ಶಶಿಧರ್‌, ಇಂದಿರಾ ದೇವನಾಯಕ, ಅಶೋಕ್‌, ಹುಳಿಯಾರು ಪ್ರಸನ್ನ ಕುಮಾರ್‌ ಸೇರಿದಂತೆ ಹಲವಾರು ಮುಖಂಡರು ಇದ್ದರು.
 
ಸಂಸದರ ಬೆಂಬಲಿಗರಿಂದ ಪ್ರತಿಭಟನೆ: ತುಮಕೂರಿನಲ್ಲಿ ಜೆಡಿಎಸ್‌ ಸ್ಪರ್ಧೆ ಮಾಡಿದರೆ ಕಾಂಗ್ರೆಸ್‌ ಬೆಂಬಲ ನೀಡುತ್ತಾ, ಇಲ್ವಾ ಎನ್ನುವ ಮಾತುಗಳು ಕೇಳಿ ಬರುತ್ತಿರುವಾಗ ಶುಕ್ರವಾರ ನಗರದಲ್ಲಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಬೆಂಬಲಿತ ಕಾಂಗ್ರೆಸ್‌ ಮುಖಂಡರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ. 

ಕಾಂಗ್ರೆಸ್‌ಗೆ ಟಿಕೆಟ್‌ ವಂಚಿಸಿ, ಜೆಡಿಎಸ್‌ಗೆ ಟಿಕೆಟ್‌ ನೀಡುತ್ತಿರುವ ಬಗ್ಗೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ಕೆ.ಎನ್‌.ರಾಜಣ್ಣ  ಜೆಡಿಎಸ್‌ ವಿರುದ್ಧ ನೇರವಾಗಿಯೇ ವಾಗ್ಧಾಳಿ ಮಾಡಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್‌ ಸ್ಪರ್ಧಿಸಿದರೆ ನಾನು ಪಕ್ಷೇತರ ಅಥವಾ ಟಿಕೆಟ್‌ ತಂದು ನಿಲ್ಲುತ್ತೇನೆ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

Advertisement

ಸದ್ಯ ಇರುವ ಕ್ಷೇತ್ರ ತ್ಯಾಗ ಮಾಡಬಾರದು ಎಂದು ಹೈಕಮಾಂಡ್‌ಗೆ ಹೇಳಿದ್ದೇವೆ. ಹಾಗೇನಾದರೂ ಆದರೆ ಜೆಡಿಎಸ್‌ಗೆ ಕಾಂಗ್ರೆಸ್‌ ಬೆಂಬಲ ಇರುವುದಿಲ್ಲ. ಇದಕ್ಕೆ ನಾನೇ ಬಹಿರಂಗವಾಗಿ ಸಭೆ ಮಾಡಿ ಜೆಡಿಎಸ್‌ ಸೋಲಿಸಲು ರಣತಂತ್ರ ಮಾಡುತ್ತೇನೆ ಹಾಗೂ ಜೆಡಿಎಸ್‌ ಮೂರಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದರೇ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next