ಬೆಂಗಳೂರು: ಕಾನೂನು ಬಾಹಿರ ಜಾಹಿರಾತು ಫಲಕಗಳ ತೆರವು ವಿಚಾರದಲ್ಲಿ ನಿತ್ಯ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಹೈಕೋರ್ಟ್, ಬುಧವಾರ ರಸ್ತೆ ಗುಂಡಿಗಳ ವಿಷಯದಲ್ಲಿ ಪಾಲಿಕೆ ವಿರುದ್ಧ ಕೆಂಡ ಕಾರಿತು. ನಾಳೆಯೊಳಗೆ (ಗುರುವಾರ) ಬೆಂಗಳೂರಿನ ರಸ್ತೆಗಳಲ್ಲಿರುವ ಎಲ್ಲ ಗುಂಡಿಗಳನ್ನು ಮುಚ್ಚಿ, ಇಲ್ಲವಾದಲ್ಲಿ ನಾವು (ಹೈಕೋರ್ಟ್) ಬಿಬಿಎಂಪಿಯನ್ನೇ ಮುಚ್ಚಬೇಕಾದೀತು ಎಂದು ಕಟುವಾಗಿ ಎಚ್ಚರಿಕೆ ಸಹ ನೀಡಿತು.
ರಸ್ತೆ ಗುಂಡಿಗಳಿಂದ ಸಾಕಷ್ಟು ಸಾವು-ನೋವುಗಳು ಸಂಭವಿಸುತ್ತಿವೆ ಎಂದು ಹೇಳಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಎಸ್.ಜಿ. ಪಂಡಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಪಾಲಿಕೆಯ ಬೇಜವಾಬ್ದಾರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಬುಧವಾರದ ವಿಚಾರಣೆ ವೇಳೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಅಧಿಕಾರಿಗಳ ಕಾರ್ಯವೈಖರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ಅಧಿಕಾರಿಗಳು ಇದೇ ರೀತಿ ಕೆಲಸ ಮಾಡುವುದಾದರೆ ಬಿಬಿಎಂಪಿಯನ್ನು ಮುಚ್ಚಿಸಬೇಕಾದೀತು ಎಂದು ಎಚ್ಚರಿಕೆ ನೀಡಿತು. ಬೆಳಗಿನ ಕಲಾಪದ ವೇಳೆ, ರಸ್ತೆ ಕಾಮಗಾರಿಗೆ ಸಂಬಂಧಿಸಿದ “ಮೇಷರ್‌ವೆುಂಟ್ ಬುಕ್’ ಸಲ್ಲಿಸುವಂತೆ ಬಿಬಿಎಂಪಿ ಪರ ವಕೀಲರಿಗೆ ನ್ಯಾಯಪೀಠ ಸೂಚಿಸಿತು. ಆಗ, ಕಾಮಗಾರಿ ಪೂರ್ಣಗೊಂಡ ಬಳಿಕ ಅಳತೆ ಪುಸ್ತಕ ಸಿದ್ಧಪಡಿಸುವುದಾಗಿ ಬಿಬಿಎಂಪಿ ಪರ ವಕೀಲರು ಉತ್ತರಿಸಿದರು.
ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ, “ಮೇಷರ್‌ವೆುಂಟ್ ಇಲ್ಲದೇ ಕಾಮಗಾರಿ ಹೇಗೆ ನಡೆಸುತ್ತೀರಿ, ಅಳತೆ ಇಲ್ಲದೇ ಕಾಮಗಾರಿ ಕೈಗೊಳ್ಳಲು ಲೆಕ್ಕ ಹೇಗೆ ಸಿಗುತ್ತದೆ. ನಿಮ್ಮದು ಯಾವ ಲೆಕ್ಕ. ಕೋರ್ಟ್ ಮುಂದೆ ಇಂತಹ ಹೇಳಿಕೆಗಳನ್ನು ನೀಡುತ್ತೀರಲ್ಲಾ, ನಾವೇನು ಇಲ್ಲಿ ತಮಾಷೆ ಮಾಡಲು ಕೂತಿದ್ದೀವಾ. ನಿಮ್ಮ ಅಧಿಕಾರಿಗಳು ಮಾಡುವ ಕೆಲಸ ಇದೇನಾ.
ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರ ತಾಳಕ್ಕೆ ಕೋರ್ಟ್ ಹೆಜ್ಜೆ ಹಾಕುತ್ತೇ ಅಂದುಕೊಂಡಿದ್ದೀರಾ? ನಿಮ್ಮಿಂದ ಕೆಲಸ ಮಾಡಲು ಆಗುವುದಿಲ್ಲ ಎಂದಾದರೆ, ಬಿಬಿಎಂಪಿ ಮುಚ್ಚಿಸಿಬಿಡುತ್ತೇವೆ. ತಕ್ಷಣ ಪಾಲಿಕೆಯನ್ನು ವಶಕ್ಕೆ ಪಡೆದುಕೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶಿಸುತ್ತೇನೆ ಎಂದು ಕಿಡಿಕಾರಿದರು. ಮಧ್ಯಾಹ್ನ 2.25ರೊಳಗೆ “ಅಳತೆ ಪುಸ್ತಕ’ ಸಲ್ಲಿಸುವಂತೆ ತಾಕೀತು ಮಾಡಿದರು.
ಉಡಾಫೆತನ ಬಂದಿದೆ! ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆ ಬಿಬಿಎಂಪಿ ಪರ ವಕೀಲರು, “ಅಳತೆ ಪುಸ್ತಕದ’ ಕಡತಗಳು ಇನ್ನೂ ನಮಗೆ ಲಭ್ಯವಾಗಿಲ್ಲ. ಸಂವಹನದ ಕೊರತೆಯಿಂದ ತಕ್ಷಣವೇ ಕಡತ ತಂದುಕೊಡಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದಕ್ಕೆ ಮತ್ತಷ್ಟು ಕೆರಳಿದ ಮುಖ್ಯ ನ್ಯಾಯಮೂರ್ತಿಗಳು, ಅದೆಲ್ಲಾ ನನಗೆ ಗೊತ್ತಿಲ್ಲ, ತಾವು ಏನು ಮಾಡಿದರೂ ನಡೆಯುತ್ತದೆ ಎಂದು ಅಧಿಕಾರಿಗಳು ಅಂದುಕೊಂಡಿದ್ದಾರಾ? ನಮ್ಮನ್ನು ಕೇಳ್ಳೋರು ಯಾರು ಅನ್ನುವ ಉಡಾಫೆ ತನ ಅವರಿಗೆ ಬಂದು ಬಿಟ್ಟಂತಿದೆ. ಅಧಿಕಾರಿಗಳ ಈ ಬೇಜವಾಬ್ದಾರಿತನವನ್ನು ಕ್ಷಮಿಸಲು ಸಾಧ್ಯವಿಲ್ಲ.
ಇಂತಹವರಿಗೆ ಏನು ಮಾಡಬೇಕು ಎಂಬುದು ನ್ಯಾಯಾಲಯಕ್ಕೆ ಚೆನ್ನಾಗಿ ಗೊತ್ತಿದೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೇ ಏನು ಮಾಡುತ್ತೀರಾ, ಹೇಗೆ ಮಾಡುತ್ತೀರಾ ಅದು ಗೊತ್ತಿಲ್ಲ. ಆದರೆ, ಗುರುವಾರದೊಳಗೆ ಬಿಬಿಎಂಪಿಯ ಎಲ್ಲ 198 ವಾರ್ಡಗಳ ರಸ್ತೆಗಳಲ್ಲಿನ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಬೇಕು. ಇದಕ್ಕಾಗಿ ಅಹೋರಾತ್ರಿ ಕೆಲಸ ಮಾಡಿ ಎಂದು ತಾಕೀತು ಮಾಡಿದ ನ್ಯಾಯಪೀಠ, ವಿಚಾರಣೆಯನ್ನು ಗುರುವಾರಕ್ಕೆ (ಸೆ.20) ಮುಂದೂಡಿತು.