ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಕೇಂದ್ರದ 200 ಮೀಟರ್ ನಿಷೇಧಿತ ಪ್ರದೇಶದೊಳಗೆ ಅನಧಿಕೃತವಾಗಿ ಯಾರೇ ಪ್ರವೇಶಿಸಲು ಯತ್ನಿಸಿದರೂ ಅವರನ್ನು ಪೊಲೀಸರಿಗೆ ಒಪ್ಪಿಸಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಹೊಸ ನಿರ್ದೇಶನ ನೀಡಿದೆ.
ರಾಜ್ಯದ 1,016 ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ. ಜತೆಗೆ ಕೇಂದ್ರದ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಪರೀಕ್ಷೆಗೆ ನಿಯೋಜಿಸಿರುವ ಅಧಿಕಾರಿಗಳು, ಸಿಬ್ಬಂದಿ ಅಥವಾ ಯಾರೇ ಅಧಿಕಾರಿ ಮೊಬೈಲ್‌ನೊಂದಿಗೆ ಕೇಂದ್ರಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ಗುರುತಿನ ಚೀಟಿ ಹೊಂದಿರುವ ಅರ್ಹ ಅಧಿಕಾರಿ, ಸಿಬ್ಬಂದಿಗೆ ಮಾತ್ರ ಮೊಬೈಲ್ ರಹಿತ ಪ್ರವೇಶ ಇರುತ್ತದೆ. ಉಳಿದಂತೆ ವಿದ್ಯಾರ್ಥಿಗಳ ಪಾಲಕರು, ಪೋಷಕರು, ಪರೀಕ್ಷಾ ಕರ್ತವ್ಯದಲ್ಲಿ ಇಲ್ಲದೇ ಇರುವ ಅಧಿಕಾರಿಗಳು ಪ್ರವೇಶಿಸುವಂತಿಲ್ಲ. ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸಲು ಪ್ರಯತ್ನಿಸಿದರೆ ನಿರ್ದಾಕ್ಷಿಣ್ಯವಾಗಿ ಪೊಲೀಸರ ವಶಕ್ಕೆ ಒಪ್ಪಿಸಿ, ಕಾನೂನು ಕ್ರಮ ಜರುಗಿಸಲು ಪಿಯು ಇಲಾಖೆ ನಿರ್ದೇಶಕಿ ಕನಗವಳ್ಳಿ ಅವರು ಆದೇಶ ಹೊರಡಿಸಿದ್ದಾರೆ.
ವಿದ್ಯಾರ್ಥಿಗಳೇ ಇಲ್ಲ: ಶುಕ್ರವಾರ ನಡೆದ ಸಂಗೀತ ಪರೀಕ್ಷೆಗಳಲ್ಲಿ ಹಿಂದುಸ್ತಾನಿ ಸಂಗೀತಕ್ಕೆ 190 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 14 ವಿದ್ಯಾರ್ಥಿಗಳು ಗೈರಾಗಿದ್ದಾರೆ. 176 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕರ್ನಾಟಕ ಸಂಗೀತಕ್ಕೆ ಯಾವ ವಿದ್ಯಾರ್ಥಿಗಳೂ ನೋಂದಣಿ ಮಾಡಿಕೊಂಡಿಲ್ಲ.
ಇಂದಿನ ಪರೀಕ್ಷೆಗಳು: ಮಾ.7ರಂದು ಬಿಜಿನೆಸ್ ಸ್ಟಡೀಸ್, ಸಮಾಜಶಾಸ್ತ್ರ ಹಾಗೂ ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.