Advertisement

ದೇಶದಲ್ಲಿಯೇ ಸೀಟ್‌ ಸಿಕ್ಕಿದ್ದರೆ ನಮ್ಮ ಮಗ ಬದುಕುತ್ತಿದ್ದ

10:57 PM Mar 02, 2022 | Team Udayavani |

ರಾಣಿಬೆನ್ನೂರು: ಉಕ್ರೇನ್‌ ದೇಶದಲ್ಲಿ ರಷ್ಯಾ ದಾಳಿಗೆ ಅಸುನೀಗಿರುವ ವೈದ್ಯ ವಿದ್ಯಾರ್ಥಿ ನವೀನ್‌ ಗ್ಯಾನಗೌಡ ಅವರ ಹುಟ್ಟೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

Advertisement

ನವೀನ್‌ ಅವರ ತಂದೆ ಶೇಖರಪ್ಪ ಸುದ್ದಿಗಾರರ ಜತೆ ಮಾತನಾಡಿ, ಯುದ್ಧ ಆರಂಭಗೊಳ್ಳುವ ಮುನ್ನವೇ ದೇಶಕ್ಕೆ ವಾಪಸ್‌ ಬರಲು ಹೇಳಿದ್ದೆ. ಆದರೆ, ಅಲ್ಲಿನ ವಿಶ್ವವಿದ್ಯಾಲಯದವರು ಯುದ್ಧ ನಡೆಯಲ್ಲ. ಹಾಗಾಗಿ, ತರಗತಿಗಳನ್ನು ಬಂದ್‌ ಮಾಡಲ್ಲ ಅಂತ ಹೇಳಿದ್ದರಿಂದ ಬರಲು ಸಾಧ್ಯವಾಗಲಿಲ್ಲ. ಎಲ್ಲ ವಿದ್ಯಾರ್ಥಿಗಳು ರಜೆ ನೀಡಿ ಅಥವಾ ಆನ್‌ಲೈನ್‌ ಕ್ಲಾಸ್‌ ನಡೆಸಿ ಎಂದು ಮನವಿ ಮಾಡಿದರೂ ವಿಶ್ವವಿದ್ಯಾಲಯ ಬಂದ್‌ ಮಾಡಲಿಲ್ಲ. ನೀವು ಭಯ ಪಡಬೇಡಿ. ಯುದ್ಧ ನಡೆಯಲ್ಲ ಅಂತ ಹೇಳಿದ್ದರಿಂದ ಅಲ್ಲಿಯೇ ಉಳಿದುಕೊಂಡರು. ಮಂಗಳವಾರ ಸ್ನೇಹಿತರೊಂದಿಗೆ ಖಾರ್ಕಿವ್‌ ಬಿಡುತ್ತೇವೆ ಅಂತ ಹೇಳಿದ್ದ. ಅಷ್ಟರಲ್ಲಿ ಈ ಘಟನೆ ನಡೆದಿದೆ.

ನವೀನ್‌ ಸಮಾಜ ಸೇವೆ ಮಾಡಬೇಕೆಂಬ ಆಸೆ ಹೊಂದಿದ್ದ. ಅಲ್ಲಿಂದ ಬಂದ ಅನಂತರ ಗ್ರಾಮೀಣ ಪ್ರದೇಶದಲ್ಲಿಯೇ ಸೇವೆ ಸಲ್ಲಿಸಲು ತೀರ್ಮಾನಿಸಿದ್ದ. ಆದರೆ, ವಿಧಿ ಯಾಟವೇ ಬೇರೆಯಾಗಿದೆ ಎಂದು ನೋಂದು ನುಡಿದರು.
ನವೀನ್‌ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಎಸೆಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದಿದ್ದ. ನಮಗೆ ಇಲ್ಲಿಯೇ ಎಂಬಿಬಿಎಸ್‌ ಸೀಟ್‌ ಸಿಗುವ ಆಸೆ ಇತ್ತು. ಆದರೆ, ಇಲ್ಲಿನ ಶಿಕ್ಷಣ ವ್ಯವಸ್ಥೆ, ಮೀಸಲಾತಿ ಕಾರಣದಿಂದ ಸೀಟ್‌ ಸಿಗಲಿಲ್ಲ. ಅವನಿಗೆ ಎಂಬಿಬಿಎಸ್‌ ಓದುವುದೇ ಗುರಿಯಾಗಿತ್ತು. ಹೀಗಾಗಿ, ಅವನನ್ನು ಅನಿವಾರ್ಯವಾಗಿ ನಮ್ಮ ಸಂಬಂ ಧಿಕರು, ಸ್ನೇಹಿತರ ಸಹಕಾರ ಪಡೆದು ಕಡಿಮೆ ವೆಚ್ಚದಲ್ಲಿ ಎಂಬಿಬಿಎಸ್‌ ಮುಗಿಸಬಹುದು ಎಂಬ ಕಾರಣಕ್ಕೆ ಕಳುಹಿಸಿಕೊಡಲಾಗಿತ್ತು. ದೇಶದಲ್ಲಿಯೇ ಸೀಟ್‌ ಸಿಕ್ಕಿದ್ದರೆ ನಮ್ಮ ಮಗ ಬದುಕುತ್ತಿದ್ದ ಎಂದು ಕಣ್ಣೀರಿಟ್ಟರು.

ಮಗನ ಮೃತದೇಹದ ನಿರೀಕ್ಷೆ
ಮಗನ ಮೃತದೇಹ ನೋಡುವ ನಿರೀಕ್ಷೆಯಲ್ಲಿದ್ದೇವೆ. ಮೃತದೇಹವನ್ನು ದೇಶಕ್ಕೆ ತರುವುದು ನಮ್ಮ ಕೈಯಲ್ಲಿಲ್ಲ. ಅದು ಸರಕಾರದ ಕೈಯಲ್ಲಿದೆ. ಸರಕಾರ ಅದನ್ನು ಯಾವ ರೀತಿ ನಿರ್ವಹಿಸುತ್ತದೆ ನೋಡಬೇಕು. ಅಲ್ಲಿ ಯುದ್ಧ ತೀವ್ರವಾಗಿ ನಡೆಯುತ್ತಿದ್ದು, ನವೀನ ಮೃತದೇಹ ತರಲು 2-3 ದಿನಗಳ ಕಾಲ ಬೇಕಾಗಬಹುದು ಎಂದು ತಿಳಿಸಿದ್ದಾರೆ ಎಂದರು.

ಮೆಡಿಕಲ್‌ ಸೀಟಿಗೆ ಒಂದೂವರೆ ಕೋಟಿ ರೂ. ಕೇಳಿದರು
ಸರಕಾರದ ವ್ಯವಸ್ಥೆ ಇದಕ್ಕೆ ಹೊಣೆಯಾಗಿದ್ದು, ಖಾಸಗಿ ಕಾಲೇಜುಗಳಲ್ಲಿ ಎಂಬಿಬಿಎಸ್‌ ಸೀಟ್‌ ಪಡೆಯಲು ಒಂದೂವರೆ ಕೋಟಿ ಕೇಳಿದ್ರು. ನಾವು ಮಧ್ಯಮ ವರ್ಗದವರು. ನಮ್ಮ ಸ್ವಂತ ದುಡಿಮೆಯಲ್ಲಿ ಜೀವನ ನಡೆಸುವವರು. ಅಷ್ಟು ಹಣ ವ್ಯವಸ್ಥೆ ಮಾಡಲು ಆಗಲಿಲ್ಲ. ಉಕ್ರೇನ್‌ ದೇಶದಲ್ಲಿ ಸುಮಾರು 30-35 ಲಕ್ಷ ವೆಚ್ಚದಲ್ಲಿ ಎಂಬಿಬಿಎಸ್‌ ಅಧ್ಯಯನ ಮಾಡಬಹುದು ಎಂದಿದ್ದರಿಂದ ಸ್ನೇಹಿತರು ಹಾಗೂ ಸಂಬಂ ಧಿಗಳ ಹತ್ತಿರ ಸಾಲ ಮಾಡಿ ಕಳುಹಿಸಿಕೊಡಲಾಗಿತ್ತು. ಆದರೆ, ಅದೇ ಶಿಕ್ಷಣವನ್ನು ದೇಶದಲ್ಲಿ ನೀಡಲು ಕೋಟಿ ಕೋಟಿ ಹಣ ಯಾಕೆ ಕೇಳುತ್ತಾರೆ ಎನ್ನುವುದೇ ಪ್ರಶ್ನೆಯಾಗಿದೆ ಎಂದರು.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next