ವಾಡಿ: ಗ್ಯಾಸ್, ಪೆಟ್ರೋಲ್, ಹಾಲು, ತರಕಾರಿ ಸೇರಿದಂತೆ ಮಕ್ಕಳ ಪೆನ್ಸಿಲ್‌ಗೂ ಶೇ.12ರಷ್ಟು ಜಿಎಸ್‌ಟಿ ವಿಧಿಸಿರುವ ಬಿಜೆಪಿ ಸರ್ಕಾರ, ಅಡುಗೆ ಮನೆಯಲ್ಲಿ ಬಡವರ ಕಣ್ಣೀರು ಹರಿಸಿದೆ. ಜನತೆ ಹೀಗೆ ಸುಮ್ಮನಿದ್ದರೆ ಉಸಿರಾಡುವ ಗಾಳಿಗೂ ಟ್ಯಾಕ್ಸ್ ಹಾಕ್ತಾರೆ ಹುಷಾರ್ ಎಂದು ಚಿತ್ತಾಪುರ ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಎಚ್ಚರಿಸಿದರು.
ಕೊಲ್ಲೂರು ಗ್ರಾಮದಲ್ಲಿ ಒಟ್ಟು 2 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲಾದ ಪಶು ಆಸ್ಪತ್ರೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಹಾಗೂ ಪ್ರೌಢ ಶಾಲೆಯ ಎರಡು ಹೆಚ್ಚುವರಿ ಕೋಣೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗ ಕಡಿತಗೊಳಿಸಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಿಜೆಪಿ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆದಿದೆ. ಜನಸಾಮಾನ್ಯರಿಂದ ವಸೂಲಿ ಮಾಡಿಕೊಂಡ ಜಿಎಸ್‌ಟಿ ದುಡ್ಡು ಮರಳಿ ಜನರಿಗೆ ಕೊಡುವ ಬದಲು ಅಂಬಾನಿ, ಅದಾನಿಗಳ ಉಡಿ ತುಂಬುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ರಾಜ್ಯದಾದ್ಯಂತ 701 ಕೋಟಿ ರೂ. ವಾಹನಗಳ ದಂಡ ಜಮೆಯಾಗಿದೆ. ಈ ದುಡ್ಡು ಯಾರ ಜೇಬು ಸೇರುತ್ತಿದೆ ಎಂಬುದಕ್ಕೆ ಲೆಕ್ಕವೇ ಇಲ್ಲ. ಒಟ್ಟಿನಲ್ಲಿ ಬಿಜೆಪಿ ಸರ್ಕಾರ ತೊಲಗುವವರೆಗೂ ಜನತೆಗೆ ನೆಮ್ಮದಿ ಸಿಗುವುದಿಲ್ಲ ಎಂದರು.
ಜಿಪಂ ಮಾಜಿ ಅಧ್ಯಕ್ಷ ರಮೇಶ ಮರಗೋಳ, ಯುವ ಕಾಂಗ್ರೆಸ್ ಅಧ್ಯಕ್ಷ ಶರಣು ವಾರದ್, ಗ್ರಾಪಂ ಅಧ್ಯಕ್ಷೆ ಸಾಬಮ್ಮ ಶಿವುಕುಮಾರ ಕನಗನಹಳ್ಳಿ, ಕಾಂಗ್ರೆಸ್ ಹಿರಿಯ ಮುಖಂಡರಾದ ಭೀಮಣ್ಣ ಸಾಲಿ, ವೀರಣ್ಣಗೌಡ ಪರಸರೆಡ್ಡಿ, ಅಬ್ದುಲ್ ಅಜೀಜ್‌ಸೇಠ ರಾವೂರ, ಶ್ರೀನಿವಾಸ ಸಗರ, ಶರಣುಸಾಹು ಬಿರಾಳ, ಕೃಷ್ಣರೆಡ್ಡಿ, ಟೋಪಣ್ಣ ಕೋಮಟೆ, ಗುಂಡುಗೌಡ ಪಾಟಿಲ, ಶ್ರೀಶೈಲ್ ನಾಟೀಕಾರ, ಹಣಮಂತ ಚವ್ಹಾಣ, ರಮೇಶ ಹಡಪದ, ಶಿವಯೋಗಿ ಕಾಗಿ, ಸಾಬಣ್ಣ ಹೊಸಮನಿ ಬನ್ನೇಟಿ, ಎಂ.ಡಿ.ಕರೀಮ್, ಸಂತೋಷಕುಮಾರ ಮಳಬಾ, ಬಾಬು ಕಡಲೇಕ್ ಮತ್ತಿರರು ಪಾಲ್ಗೊಂಡಿದ್ದರು. ತಾಪಂ ಮಾಜಿ ಸದಸ್ಯ ಭಾಗಪ್ಪ ಯಾದಗಿರಿ ನಿರೂಪಿಸಿ, ವಂದಿಸಿದರು.