Advertisement

ಕೊಂಡ ವಸ್ತುವಿನಲ್ಲಿ ಲೋಪವಿದ್ದರೆ ದೂರು ನೀಡಿ; ಎಂ.ಜಿ. ಹಿರೇಮಠ

05:32 PM Mar 30, 2022 | Team Udayavani |

ಬೆಳಗಾವಿ: ಗ್ರಾಹಕರು ವಸ್ತುಗಳನ್ನು ಪಡೆದುಕೊಂಡು ಅವುಗಳಲ್ಲಿ ಏನಾದರೂ ಲೋಪದೋಷಗಳು ಕಂಡುಬಂದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಿ ನ್ಯಾಯ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

Advertisement

ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರ ಹಕ್ಕುಗಳು ಮತ್ತು ಅಗತ್ಯತೆಗಳ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು, ಮಾರುಕಟ್ಟೆಯಲ್ಲಿನ ದುರುಪಯೋಗದ ಬಗ್ಗೆ ಅರಿವು ಮೂಡಿಸಲು ವಿಶ್ವ ಗ್ರಾಹಕರ ದಿನ ಆಚರಿಸಲಾಗುತ್ತಿದೆ ಎಂದರು. ದೇಶದಲ್ಲಿ ಡಿಜಿಟಲ್‌ ಯುಗ ಪ್ರಾರಂಭವಾಗಿದ್ದು, ಪ್ರತಿನಿತ್ಯ ಸುಮಾರು 14 ಕೋಟಿಯಷ್ಟು ವ್ಯವಹಾರ ಡಿಜಿಟಲ್‌ ಹಣಕಾಸು ಮೂಲಕ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚಾಗಲಿದೆ ಎಂದ ಅವರು, ಪ್ರಸ್ತುತ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ವಿವಿಧ ಡಿಜಿಟಲ್‌ ವ್ಯವಹಾರಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ರಾಚಪ್ಪ ತಾಳಿಕೋಟಿ ಅವರು ಗ್ರಾಹಕರಿಗೆ ಉತ್ತಮ ಅವಕಾಶವಾಗಿರುವ ಗ್ರಾಹಕ ಸಂರಕ್ಷಣಾ ಕಾಯ್ದೆ ಬಗ್ಗೆ ತಿಳಿದುಕೊಂಡು ಕಡಿಮೆ ವೆಚ್ಚದಲ್ಲಿ ಪರಿಹಾರ ಕಂಡುಕೊಳ್ಳಬಹುದು. ಈ ಕಾಯ್ದೆಯಲ್ಲಿ ಸೆಕ್ಷನ್‌ 72ರ ಪ್ರಕಾರ ಆದೇಶ ಪಾಲಿಸದಿದ್ದಲ್ಲಿ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಗ್ರಾಹಕರ ಸಂರಕ್ಷಣ ಕಾಯ್ದೆ ಕುರಿತು ಉಪನ್ಯಾಸ ನೀಡಿದ ಬೆಳಗಾವಿ ಜಿಲ್ಲಾ ಗ್ರಾಹಕರ ಸಂಘದ ಅಧ್ಯಕ್ಷ ಎನ್‌.ಆರ್‌. ಲಾತೂರ ಪರಿಷ್ಕೃತ 2019ನೇ ಸಾಲಿನ ನೂತನ ಗ್ರಾಹಕ ಸಂರಕ್ಷಣೆ ಹಾಗೂ ಅದರಲ್ಲಿರುವ ಬದಲಾವಣೆಗಳ ಬಗ್ಗೆ ವಿವರಿಸಿದರು.

Advertisement

ಹಣ ನೀಡಿ ಸೇವೆಗಳನ್ನು ಪಡೆದುಕೊಂಡ ಗ್ರಾಹಕರು ಯಾವುದಾದರೂ ಕುಂದುಕೊರತೆಗಳು ಕಂಡುಬಂದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರನ್ನು ಸಲ್ಲಿಸಬಹುದು. ಕಡಿಮೆ ಖರ್ಚಿನಲ್ಲಿ ನ್ಯಾಯವಾದಿಗಳ ಸಹಾಯವಿಲ್ಲದೆ ಕಡಿಮೆ ಅವಧಿಯಲ್ಲಿ ಗ್ರಾಹಕರೇ ನ್ಯಾಯವನ್ನು ಪಡೆಯಬಹುದಾಗಿದೆ ಎಂದರು. ಐಒಸಿಎಲ್‌ಪಿಜಿ ಮುಖ್ಯ ವ್ಯವಸ್ಥಾಪಕ ಎಂ.ಎಸ್‌. ಜೋಶಿ ಅವರು ಎಲ್‌ಪಿಜಿ ಸುರಕ್ಷತೆ ಕುರಿತು ಉಪನ್ಯಾಸ ನೀಡಿ, ಎಲ್‌ಪಿಜಿ ಗ್ಯಾಸ್‌ ಬಳಕೆ, ಅವುಗಳ ತೂಕ, ಆನ್‌ಲೈನ್‌ ಬುಕಿಂಗ್‌ ಮತ್ತು ಡಿಜಿಟಲ್‌ ವ್ಯವಹಾರದ ಬಗ್ಗೆ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸಂಜೀವ ಕುಲಕರ್ಣಿ ಮಾತನಾಡಿ, ಗ್ರಾಹಕರು ಸರಕು ಖರೀದಿ, ಸೇವೆಗಳ ಗುಣಮಟ್ಟದ ನ್ಯೂನ್ಯತೆಗಳು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ, ರಾಜ್ಯಮಟ್ಟದ ಗ್ರಾಹಕರ ವ್ಯಾಜ್ಯಗಳ ಆಯೋಗ ಮತ್ತು ರಾಷ್ಟ್ರ ಮಟ್ಟದ ಗ್ರಾಹಕರ ವ್ಯಾಜ್ಯಗಳ ಆಯೋಗಗಳಲ್ಲಿ ದೂರುಗಳ ದಾಖಲಿಸುವ ಬಗ್ಗೆ ವಿವರಿಸಿ, ಗ್ರಾಹಕರು ದೂರು ದಾಖಲಿಸಿದ 90 ದಿವಸದೊಳಗಾಗಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ವಿ ಕೊಡ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಸುನಂದಾ ಕಾದೊಳ್ಳಿಮಠ, ಬಿ.ಯು. ಗೀತಾ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಸ್‌. ಎಸ್‌. ಉಪ್ಪಾರ ಇದ್ದರು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು
ನಿಗಮದ ಜಿಲ್ಲಾ ವ್ಯವಸ್ಥಾಪಕ ಅಶೋಕ ಗುರಾಣಿ ವಂದಿಸಿದರು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಹಾಯಕ ನಿರ್ದೇಶಕ ಜೆ.ಸಿ. ಅಷ್ಟಗಿಮಠ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next