ಶಿರ್ವ: ಗ್ರಾಮೀಣ ಪ್ರದೇಶದ ಮಕ್ಕಳು ಬಡತನದಲ್ಲಿಯೇ ಇರುವುದರಿಂದ ಶಿಕ್ಷಣಕ್ಕೆ ಪೂರಕವಾಗಿರುವ ಸೌಲಭ್ಯಗಳು ಸುಲಭವಾಗಿ ಸಿಗುವಂತಾಗಬೇಕು. ಉತ್ತಮ ವೈದ್ಯಕೀಯ ಸೌಲಭ್ಯ,ತಾಂತ್ರಿಕ ಶಿಕ್ಷಣದ ವ್ಯವಸ್ಥೆ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಸಕಾಲದಲ್ಲಿ ಸಿಕ್ಕಿದಾಗ ಗ್ರಾಮೀಣ ಮಕ್ಕಳು ಮುಖ್ಯವಾಹಿನಿಗೆ ಬರುತ್ತಾರೆ. ಗ್ರಾಮೀಣ ಪ್ರದೇಶ ಉದ್ಧಾರವಾದರೆ ಮಾತ್ರ ಸಮೃದ್ಧ ಭಾರತದ ನಿರ್ಮಾಣ ಸಾಧ್ಯ ಎಂದು ಕುಂಜಾರುಗಿರಿ ಪಾಜಕ ಶ್ರೀ ಆನಂದತೀರ್ಥ ವಿದ್ಯಾಲಯದ ಆಡಳಿತಾಧಿಕಾರಿ ಗುರುದತ್ತ್ ಸೋಮಯಾಜಿ ಹೇಳಿದರು.
ಅವರು ಶುಕ್ರವಾರ ಆನಂದ ತೀರ್ಥ ವಿದ್ಯಾಲಯದ ಸಭಾಂಗಣದಲ್ಲಿ ಕಸಾಪ ಉಡುಪಿ ಜಿಲ್ಲೆ ಮತ್ತು ಕಾಪು ತಾ| ಘಟಕದ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ, ಶಿಕ್ಷಕಿಯರಿಗೆ ಏರ್ಪಡಿಸಿದ ಗ್ರಾಮೀಣ ಬದುಕು ಮತ್ತು ಶಿಕ್ಷಣ ನೀತಿ ಕುರಿತ ರತ್ನಾವತಿ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಸಾಹಿತ್ಯ,ಶಿಕ್ಷಣ ಹಾಗೂ ವಿವಿಧ ಚಟುವಟಿಕೆಗಳಿಗೆ ಪೂರಕವಾಗಿ ಕನ್ನಡ ಸಾಹಿತ್ಯ ಪರಿಷತ್ತು 1,700 ದತ್ತಿಗಳನ್ನು ಹೊಂದಿದೆ. ಪರಿಷತ್‌ನ ಮೂಲಕ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು ರತ್ನಾವತಿ ದತ್ತಿನಿಧಿಯಿಂದ ಶಿಕ್ಷಕರಿಗೆ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಆಲ್ವಿನ್ ದಾಂತಿ ಮಾತನಾಡಿ ಶಿಕ್ಷಣ ಸೇವೆಯಾಗಿದ್ದು, ವ್ಯಾಪಾರೀಕರಣಗೊಳ್ಳುತ್ತಿರುವುದು ದುರಂತ. ಮಕ್ಕಳ ಸುಪ್ತ ಪ್ರತಿಭೆಗಳ ವಿಕಸನದ ಜತೆಗೆ ಮೌಲ್ಯಾಧಾರಿತ ಪಾಠಗಳ ಮೂಲಕ ಸಂವಹನಾತ್ಮಕ ಕೌಶಲ ಬೆಳೆಸಿಕೊಂಡು ಮಕ್ಕಳಿಗೆ ಬದುಕುವ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಕುರ್ಕಾಲು ದಿನಕರ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ವಿದ್ಯಾಲಯದ ಪ್ರಾಂಶುಪಾಲೆ ಗೀತಾ ಎಸ್. ಕೊಟ್ಯಾನ್, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಶುಭ ಹಾರೈಸಿದರು. ಕಾಪು ತಾ| ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಲಪೂರಣ ರಾಜ್ಯ ಸಂಪನ್ಮೂಲ ವ್ಯಕ್ತಿ ಜೋಸೆಫ್ ಜಿ.ಎಂ. ರೆಬೆಲ್ಲೊ, ಆನಂದತೀರ್ಥ ವಿದ್ಯಾಲಯದ ಶಿಕ್ಷಕ ವೃಂದ, ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು. ತಾಲೂಕು ಸಮಿತಿ ಸದಸ್ಯ ಹರೀಶ್ ಕಟಾ³ಡಿ ಸ್ವಾಗತಿಸಿದರು. ಎಸ್.ಎಸ್. ಪ್ರಸಾದ್ ನಿರೂಪಿಸಿ, ಭಾಗ್ಯಶ್ರೀ ವಂದಿಸಿದರು.