Advertisement

ಮೀಸಲು ಘೋಷಿಸದಿದ್ದರೆ ಶಾಪ ತಟ್ಟುತ್ತೆ: ಕಾಶಪ್ಪನವರ

04:37 PM Jul 31, 2022 | Team Udayavani |

ಹುಬ್ಬಳ್ಳಿ: ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾವು ನಾಚಿಕೆ, ಮಾನ, ಮರ್ಯಾದೆ ಬಿಟ್ಟು ನಿಂತಿದ್ದೇವೆ. ಬಹುಸಂಖ್ಯಾತರಿದ್ದರೂ ಅಲ್ಪಸಂಖ್ಯಾತರಂತಾಗಿದ್ದೇವೆ. ಮೀಸಲಾತಿಗೆ ಹಕ್ಕೊತ್ತಾಯ ಮಾಡುತ್ತಿದ್ದರೂ ಸರ್ಕಾರ ಮಾತ್ರ ಅದನ್ನು ಘೋಷಿಸದೆ ನಿರ್ಲಕ್ಷಿಸುತ್ತಿದೆ ಎಂದು ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.

Advertisement

ನೆಹರು ಮೈದಾನದಲ್ಲಿ ಶನಿವಾರ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಿಸಬೇಕೆಂದು ಸರಕಾರವನ್ನು ಒತ್ತಾಯಿಸಲು ಹಮ್ಮಿಕೊಂಡಿದ್ದ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.

ಮೀಸಲಾತಿಗೆ ಸತತವಾಗಿ ಹೋರಾಟ ಮಾಡುತ್ತ ಬಂದಿದ್ದೇವೆ. ಒಡೆದಾಳುವ ನೀತಿಯಿಂದ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಮೀಸಲಾತಿ ಘೋಷಿಸದೆ ಹೋದಲ್ಲಿ ಶಾಪ ತಟ್ಟಲಿದೆ ಎಂದು ಈ ಹಿಂದೆ ಯಡಿಯೂರಪ್ಪ ಅವರಿಗೆ ಹೇಳಿದ್ದೆ. ಬಸವರಾಜ ಬೊಮ್ಮಾಯಿ ಅವರಿಗೂ ಅದನ್ನೇ ಹೇಳುತ್ತೇನೆ ಎಂದರು.

ಕೂಡಲ ಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸರ್ಕಾರಕ್ಕೆ ಈಗಾಗಲೇ ನಾಲ್ಕು ಬಾರಿ ಗಡುವು ನೀಡಿದ್ದೇವೆ. ಶ್ರಾವಣದಲ್ಲಿ ಸಮಾಜಕ್ಕೆ ಮೀಸಲಾತಿ ಘೋಷಿಸಬೇಕು. ಇಲ್ಲದಿದ್ದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಮಾಜ ತಕ್ಕ ಉತ್ತರ ನೀಡಲಿದೆ. ಮೀಸಲಾತಿ ಬಂದಾಗ ನಾವೆಲ್ಲರೂ ಒಂದೇ. ನಾನಂತೂ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡುತ್ತೇನೆ. ಪಂಚಮಸಾಲಿ ಸಮಾಜದವರ ಆಶೀರ್ವಾದದಿಂದಲೇ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿರುವುದು. ಅದನ್ನು ನೆನಪಿಟ್ಟುಕೊಂಡು 2ಎ ಮೀಸಲಾತಿ ಘೋಷಿಸಬೇಕು ಎಂದು ಆಗ್ರಹಿಸಿದರು.

Advertisement

ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ ಮಾತನಾಡಿ, ಸುಮಾರು 28 ವರ್ಷಗಳ ಹೋರಾಟ ಇದಾಗಿದೆ. ಮೀಸಲಾತಿಗಾಗಿ ಅಂದಿನಿಂದ ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಪಂಚಮಸಾಲಿ ಸಮಾಜದಿಂದಲೇ ಬಹುತೇಕರು ರಾಜಕಾರಣ ಮಾಡುತ್ತಿದ್ದು, ಈ ಬಾರಿ ಮೀಸಲಾತಿ ನೀಡದಿದ್ದಲ್ಲಿ ಅವರೆಲ್ಲರೂ ಪಲ್ಟಿ ಹೊಡೆಯುವುದು ಶತಸಿದ್ಧ ಎಂದರು.

ನಂತರ ನೆಹರೂ ಮೈದಾನದಿಂದ ಚನ್ನಮ್ಮ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸುಮಾರು ಒಂದೂವರೆ ತಾಸಿಗೂ ಹೆಚ್ಚು ಕಾಲ ವೃತ್ತ ಬಂದ್‌ ಮಾಡಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್‌. ಎಸ್‌. ಶಿವಶಂಕರ ಮಾತನಾಡಿ, ರಾಜಕಾರಣಿಗಳು ಅಧಿಕಾರಕ್ಕಾಗಿ, ಸಂಘ ಸಂಸ್ಥೆಗಳು ಸೌಲಭ್ಯಕ್ಕಾಗಿ ಹೋರಾಟ ನಡೆಸಿದರೆ ಶ್ರೀಗಳು ಹಗಲು ರಾತ್ರಿ ಎನ್ನದೇ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ನಮ್ಮ ಮಕ್ಕಳಿಗಾಗಿ ಈ ಹೋರಾಟ ಎಂಬುದನ್ನು ಮರೆಯಬಾರದು. ನಮ್ಮ ಹೋರಾಟ ಹತ್ತಿಕ್ಕಲು ಹಲವು ರೀತಿಯ ಪ್ರಯತ್ನ ಮಾಡಿದರು. ಹಲವು ಪೀಠ ಮಾಡಿದರು. ಆದರೆ ಅದ್ಯಾವುದಕ್ಕೂ ನಾವು ಜಗ್ಗದೇ ಮೀಸಲಾತಿಗೆ ನಮ್ಮ ಹೋರಾಟ ನಿರಂತರ ಎಂದರು.

ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡರ, ಬಸವರಾಜ ಪಾಟೀಲ ಯತ್ನಾಳ ಅವರ ಪುತ್ರ ರಾಮನಗೌಡ ಪಾಟೀಲ, ಮಾಜಿ ಸಂಸದ ಮಂಜುನಾಥ ಕುನ್ನೂರ, ಶಿವಲೀಲಾ ಕುಲಕರ್ಣಿ, ವಿಜಯ ಕುಲಕರ್ಣಿ, ನಾಗರಾಜ ಗೌರಿ ಇನ್ನಿತರರು ಮಾತನಾಡಿದರು.

ಶಿವಾನಂದ ಅಂಬಡಗಟ್ಟಿ, ಶಾಸಕ ಅರವಿಂದ ಬೆಲ್ಲದ, ವೀರೇಶ ಉಂಡಿ, ಗುರುರಾಜ ಹುಣಸಿಮರದ, ಸಚಿನ ಪಾಟೀಲ, ರತ್ನವ್ವ ಕಳ್ಳಿಮನಿ, ಶಶಿಕಾಂತ ಪಡಸಲಗಿ, ಪುಟ್ಟಸ್ವಾಮಿ, ದೀಪಾ ಗೌರಿ, ನಾಗರಾಜ ಗೌರಿ, ರಾಜಶೇಖರ ಮೆಣಸಿನಕಾಯಿ, ನಂದಕುಮಾರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next