Advertisement

ಜನ ಬಯಸಿದರೆ ರಾಜ್ಯ ಕಾಂಗ್ರೆಸ್‌ ಮುಕ್ತ

02:37 PM Dec 16, 2017 | |

ಸಿಂಧನೂರ: ರಾಜ್ಯದ ಜನ ಮನಸ್ಸು ಮಾಡಿದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಭ್ರಷ್ಟ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೆಸೆದು ರಾಜ್ಯವನ್ನು ಕಾಂಗ್ರೆಸ್‌ ಮುಕ್ತ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ನಗರದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಿಜೆಪಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಇಡೀ ದೇಶದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿರುವುದು ಕರ್ನಾಟಕದಲ್ಲಿ ಮಾತ್ರ. ಮತದಾರರು ಮನಸ್ಸು ಮಾಡಿದರೆ ರಾಜ್ಯವೂ ಕಾಂಗ್ರೆಸ್‌ ಮುಕ್ತ ಆಗಲಿದೆ. ಕಾಂಗ್ರೆಸ್‌ ಸರ್ಕಾರ ದುರಾಡಳಿತ ನಡೆಸುತ್ತಿದೆ. ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ರಾಜ್ಯದಲ್ಲಿ ಬದಲಾವಣೆ ಬೇಕಾದರೆ ಬಿಜೆಪಿಗೆ ಬೆಂಬಲಿಸಿ ಎಂದು ಕೋರಿದರು.

ಕೇಂದ್ರ ಸರಕಾರದ ಯೋಜನೆಗಳನ್ನು ತಮ್ಮದೇ ಹೇಳಿಕೊಂಡು ತಿರುಗುತ್ತಿರುವ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ನಾಚಿಕೆಯಾಗಬೇಕು. ಜನರ ತೆರಿಗೆ ಹಣದಲ್ಲಿ ಸತ್ಯ ಸಾಧನಾ ಯಾತ್ರೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈದರಾಬಾದ್‌ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ, ನಾವು ಏನು ಕೆಲಸ ಮಾಡಿದ್ದೇವೆ ಎಂದು ತಿಳಿಸುತ್ತೇವೆ ಎಂದು ಸವಾಲೆಸೆದರು.

ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಗೆ ಇದೇ ಕೊನೆ ಸರ್ಕಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆ ಮುಖ್ಯಮಂತ್ರಿ. ಮುಂದೆ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುವುದು ಅಸಾಧ್ಯ. 371 ಜೆ ಕಲಂ ಜಾರಿಯಾಗಿ ಇಷ್ಟು ವರ್ಷವಾದರೂ ಶಿಕ್ಷಣ, ಉದ್ಯೋಗದಲ್ಲಿ ಸೌಲಭ್ಯ ಸಿಕ್ಕಿಲ್ಲ, 35 ಸಾವಿರ ಹುದ್ಯೆ ಖಾಲಿ ಇದ್ದರೂ ನೇಮಕಾತಿ ನಡೆಸಿಲ್ಲ ಎಂದು ದೂರಿದರು. ಅರ್ಕಾವತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 650 ಎಕರೆ ಭೂಮಿ ಡಿನೋಟಿಫೈ ಮಾಡಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿದರು. ಮೇಲ್ಮನೆ ವಿಪಕ್ಷ ನಾಯಕ ಈಶ್ವರಪ್ಪ ಮಾತನಾಡಿ, 1.80 ಲಕ್ಷ ಕೋಟಿ ಬಜೆಟ್‌ ಮಂಡಿಸಿದರೂ 2.5 ಲಕ್ಷ ಕೋಟಿ ಸಾಲ ಮಾಡಿದ್ದೆ ಸಿದ್ದರಾಮಯ್ಯ ಸಾಧನೆ. ಕರ್ನಾಟಕ ರಾಜ್ಯದ ಪ್ರತಿಯೊಬ್ಬ ಜನರ ಮೇಲೆ 30 ಸಾವಿರ ರೂ. ಸಾಲ ಹೊರಿಸಿರುವುದು ಇವರ ಸಾಧನೆ.ನಮಗೆ ಯಾರ ಮೇಲೂ ಒಲವಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಎರಡೂಮೂರು ಬಾರಿ ಸಮೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಜನರ ಜೊತೆ ಬೆರೆಯುವ, ಜನರಿಗಾಗಿ ಬಾಳುವವರಿಗೆ ಈ ಬಾರಿ ಟಿಕೆಟ್‌ ಸಿಗಲಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದಲ್ಲಿ ಜಿಲ್ಲೆಯಲ್ಲಿ ಲಿಂಕ್‌ ಕೆನಾಲ್‌, ನಿರಂತರ ವಿದ್ಯುತ್‌, ಭೂ ಸಂತ್ರಸ್ತರಿಗೆ ಉದ್ಯೋಗ, ನಿರ್ಗತಿಕರಿಗೆ ಸೂರು ಒದಗಿಸುವದಾಗಿ ಭರವಸೆ ನೀಡಿದರು.

ಮಾಜಿ ಸಚಿವ ಶ್ರೀರಾಮುಲು, ಸಿ.ಟಿ. ರವಿ, ರಾಜುಗೌಡ, ಶಿವನಗೌಡ ನಾಯಕ, ರಾಜ್ಯ ಸಹ ಉಸ್ತುವಾರಿ ಪುರಂದರೇಶ್ವರಿ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಎಂಎಲ್‌ಸಿ ಹಾಲಪ್ಪ ಆಚಾರ್‌, ಬಿಜೆಪಿ ಜಿಲ್ಲಾಧ್ಯಕ್ಷ ಶರಣೇಗೌಡ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್‌, ಆರ್‌. ಬಸನಗೌಡ ತುರ್ವಿಹಾಳ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಎಪಿಎಂಸಿ ಮಾಜಿ ರಾಜ್ಯ ಉಪಾಧ್ಯಕ್ಷ ರಾಜಶೇಖರ್‌ ಪಾಟೀಲ್‌, ಜಿಪಂ ಸದಸ್ಯ ಅಮರೇಗೌಡ ವಿರೂಪಾಪುರ, ಕೊಲ್ಲಾ ಶೇಷಗಿರಿರಾವ್‌, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಧ್ವರಾಜ್‌ ಆಚಾರ್ಯ, ವೆಂಕನಗೌಡ ಮಲ್ಕಾಪುರ, ಆರ್‌. ಬಸನಗೌಡ, ಮಹಾದೇವಪ್ಪ ಗೌಡ, ಅಡಿವೆಪ್ಪ, ತಾಪಂ ಸದಸ್ಯ ಹನುಮೇಶ ಸೇರಿ ಬಿಜೆಪಿ ಮುಖಂಡರು, ಕಾರ್ಯಕರ್ತರು, 30 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಭಾಗವಹಿಸಿದ್ದರು.

Advertisement

ಯಾತ್ರೆಗೆ ಅದ್ಧೂರಿ ಸ್ವಾಗತ: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಶುಕ್ರವಾರ ನಗರಕ್ಕೆ ಆಗಮಿಸಿದ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಗೆ ಮುಖಂಡರು, ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ನಗರದ ಕುಷ್ಟಗಿ ರಸ್ತೆಯಲ್ಲಿ ಸಾವಿರಾರು ಬಿಜೆಪಿ ಯುವ ಕಾರ್ಯಕರ್ತರು ಬೈಕ್‌ ರ್ಯಾಲಿ ನಡೆಸುವ ಮೂಲಕ ಯಾತ್ರೆ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next