ಶಿರಸಿ: ಕದಂಬರ ರಾಜಧಾನಿ, ಬನವಾಸಿಯ ಪುರಾತನ ಮಧುಕೇಶ್ವರ ದೇವಸ್ಥಾನ ಸೋರುತ್ತಿದೆ ಎಂದು ಭಕ್ತರೋರ್ವರು ಸಾಮಾಜಿಕ ಕಳಕಳಿಯಿಂದ ಧಾರವಾಡದ ಪುರಾತತ್ವ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದರೆ, ಪಾರ್ವತಿ ದೇವಸ್ಥಾನದ ಸೋರಿಕೆ ದುರಸ್ತಿ ಮಾಡಿದ್ದೇವೆ ಎಂದು ಪ್ರತ್ಯುತ್ತರ ಬರೆದು ನಗೆಪಾಟಲಿಗೆ ಈಡಾದ ಘಟನೆ ನಡೆದಿದೆ.
ಬನವಾಸಿ ಮಧುಕೇಶ್ವರ ದೇವಸ್ಥಾನದ ನಂದಿ ಹಾಗೂ ಆನೆಯ ವಿಗ್ರಹದ ಜತೆಗೆ ಮಳೆಗಾಲದಲ್ಲಿ ಮಧುಕೇಶ್ವರ ದೇವಸ್ಥಾನ ಸೋರುತ್ತಿದೆ ಎಂದೂ, ಅದರ ತುರ್ತು ದುರಸ್ತಿ ಸಲುವಾಗಿ ಶಿರಸಿಯ ಪ್ರಸಿದ್ಧ ವೈದ್ಯ ಡಾ. ರವಿಕಿರಣ ಪಟವರ್ಧನ್ ಧಾರವಾಡದ ಪುರಾತತ್ವ ಇಲಾಖೆಗೆ ಮನವಿ ಮಾಡಿ ಪತ್ರ ಬರೆದಿದ್ದರು.
ಬನವಾಸಿ ಮಧುಕೇಶ್ವರ ದೇವಸ್ಥಾನ ಎಂದರೆ ಅತ್ಯಂತ ಪ್ರಾಚೀನ ಹಾಗೂ ಕದಂಬರ ಕಾಲದ, ರಾಜ್ಯದ, ದೇಶದ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದು. ಅದರ ಸೋರುವಿಕೆ ತಡೆ ಕುರಿತು ಮನವಿಗೆ ಸ್ಪಂದಿಸುವ ಇಲಾಖೆಯ ಜವಬ್ದಾರಿ ಆಗಿತ್ತು. ಆದರೆ, ಅದರ ಬದಲಿಗೆ ಕೇಂದ್ರ ಸರಕಾರದ ಅಧೀನದ ಇಲಾಖೆಯ ಧಾರವಾಡ ವಿಭಾಗದಿಂದ ಬಂದಂತಹ ಉತ್ತರವೇ ವಿಶಿಷ್ಟವಾಗಿದೆ.
2023ರಲ್ಲಿ ಮಧುಕೇಶ್ವರ ದೇವಸ್ಥಾನ ಸೋರುತ್ತಿದೆ ಎಂದರೆ 2017-18 ರಲ್ಲಿ ಪಾರ್ವತಿ ದೇವಸ್ಥಾನ ಸೋರಿಕೆಯನ್ನು ರಿಪೇರಿ ಮಾಡಿದ್ದೇವೆ ಎಂದು ಉತ್ತರ ನೀಡುತ್ತಿದ್ದಾರೆ!. ಈ ಉತ್ತರ ಸಮಾಜಿಕ ಜಾಲ ತಾಣದಲ್ಲೂ ಟ್ರೋಲ್ ಆಗಿದೆ.
ಪಾರ್ವತಿ ದೇವಸ್ಥಾನ ಸೋರಿಕೆ, ರಿಪೇರಿ ಮಾಡಿದರೆ ಮಧುಕೇಶ್ವರ ದೇವಸ್ಥಾನದ ಮಳೆಗಾಲದ ಸೂರಿಕೆ ಹೇಗೆ ನಿಲ್ಲುವುದು ಎಂಬುದು ಯಕ್ಷಪ್ರಶ್ನೆಯಾಗಿ ನನ್ನನ್ನೇ ಕಾಡುತ್ತಿದೆ ಎನ್ನುತ್ತಾರೆ ವೈದ್ಯ ಡಾ. ರವಿಕಿರಣ ಪಟವರ್ಧನ್.ಏಕೆಂದರೆ, ಮಧುಕೇಶ್ವರ ದೇವಸ್ಥಾನದ ಪಕ್ಕದಲ್ಲಿ ಪಾರ್ವತಿ ದೇವಸ್ಥಾನ ಪ್ರತ್ಯೇಕವಾಗಿಯೇ ಇದೆ!.