Advertisement

ದೇಶಪ್ರೇಮಿಗಳ ಸಂಖ್ಯೆ ಕುಗ್ಗಿದರೆ ರಾಷ್ಟ್ರಕ್ಕೆ ರೋಗ

06:00 PM Jul 27, 2022 | Team Udayavani |

ಹುಬ್ಬಳ್ಳಿ: ಗಡಿ ಸುಭದ್ರತೆಯಿಂದ ಕೂಡಿದ್ದರೆ ದೇಶ ಸುರಕ್ಷತೆಯಿಂದ ಕೂಡಿರುತ್ತದೆ. ದೇಶಪ್ರೇಮಿಗಳ ಸಂಖ್ಯೆ ಕಡಿಮೆಯಾದಾಗ ದೇಶಕ್ಕೆ ರೋಗ ಅಂಟುತ್ತದೆ ಎಂದು ಗದಗ ಶ್ರೀ ಶಿವಾನಂದ ಬ್ರಹನ್ಮಠದ ಶ್ರೀ ಜಗದ್ಗುರು ಸದಾಶಿವಾನಂದ ಸ್ವಾಮೀಜಿ ಹೇಳಿದರು.

Advertisement

ಮಂಗಳವಾರ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಿರಾಮಯ ಫೌಂಡೇಶನ್‌ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್‌ ವಿಜಯ ದಿವಸ ಮತ್ತು ಸ್ವಾತಂತ್ರ್ಯ ಅಮೃತೋತ್ಸವ ನಿಮಿತ್ತ ರಕ್ತದಾನ ಶಿಬಿರ ಹಾಗೂ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಾಣ ತ್ಯಾಗ ಮಾಡಿ ಪಡೆದ ಸ್ವಾತಂತ್ರ್ಯ, ಗಡಿಯಲ್ಲಿ ದೇಶದ ಭದ್ರತೆಯಲ್ಲಿ ತೊಡಗಿರುವ ವೀರಯೋಧರ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸ ತಂದೆ-ತಾಯಿಗಳು ಮಾಡಬೇಕು. ಗಡಿ ಕಾಯುವ ಸೈನಿಕ ಆಗದಿದ್ದರೂ ಪರವಾಗಿಲ್ಲ ದೇಶದ ಬಗ್ಗೆ ಗೌರವ, ಪ್ರೀತಿ ಬೆಳೆಸಿಕೊಳ್ಳಬೇಕು. ರಾಜಕಾರಣಿಗಳು ತಮ್ಮ ಮಕ್ಕಳನ್ನು ಸೇನೆಗೆ ಸೇರಿಸದಿದ್ದರೂ ಪರವಾಗಿಲ್ಲ. ಸೈನಿಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು.

ವೀರ ಸಾವರ್ಕರ ಅವರು ಸಶಸ್ತ್ರ ಕ್ರಾಂತಿಗೆ ಕರೆ ನೀಡಿದ್ದು ಬ್ರಿಟಿಷರಲ್ಲಿ ಎಚ್ಚರಿಕೆ ಗಂಟೆಯಾಗಿತ್ತು. ಕ್ರಾಂತಿಕಾರಿ ಹೋರಾಟದ ಹಿಂದೆ ಸಾವರ್ಕರ ಇದ್ದಾರೆ ಎಂಬುದನ್ನು ಬ್ರಿಟಿಷರು ಅರಿತಿದ್ದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಇಡೀ ಕುಟುಂಬ ತ್ಯಾಗಕ್ಕೆ ಸಿದ್ಧ ಎಂದು ಸಾವರ್ಕರ ಹೇಳಿದ್ದರು. ಆದರಿಂದು ತಮಗೊಂದು, ತಮ್ಮ ಮಕ್ಕಳಿಗೆ, ಸೊಸೆಗೆ ಒಂದೊಂದು ಕ್ಷೇತ್ರ ಬಯಸುವ ರಾಜಕಾರಣಿಗಳು ಹೆಚ್ಚಾಗಿದ್ದಾರೆ ಎಂದು ಹೇಳಿದರು.

ವೀರ ಸಾವರ್ಕರ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ ಮಾತನಾಡಿ, ಪಾಕ್‌ ಕುತಂತ್ರದಿಂದ ಕಾರ್ಗಿಲ್‌ ಯುದ್ಧ ನಡೆಯಿತು. ಸಾವಿರಾರು ಸೈನಿಕರು ವೀರಣ ಮರಣ ಹೊಂದಿದರು. ಯುದ್ಧದಲ್ಲಿ ಗಾಯಗೊಂಡರೂ ಕೆಚ್ಚೆದೆಯಿಂದ ಹೋರಾಟ ಮಾಡಿದರು. ಅವರ ಪರಾಕ್ರಮದಿಂದಾಗಿ ಪಾಕ್‌ ಸೋಲುಂಡಿತು. ಇಂತಹ ಯುದ್ಧದ ಬಗ್ಗೆ ಯಾವ ಪಠ್ಯದಲ್ಲಿ ಇಲ್ಲದಿರುವುದು ದುರ್ದೈವವಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಜೊತೆ ದೇಶಸೇವೆ ಮಾಡುತ್ತಿರುವ ಯೋಧರನ್ನು ನೆನಪಿಸಿಕೊಳ್ಳಬೇಕು.

Advertisement

ಅಗ್ನಿಪಥ ಯೋಜನೆ ಅತ್ಯುತ್ತಮವಾಗಿದ್ದು, ಯುವಕರು ಇದಕ್ಕೆ ಹೆಚ್ಚಿನ ಆಸಕ್ತಿ ತೋರಬೇಕು. ಜಿಹಾದಿ ಮನಸ್ಥಿತಿಯುಳ್ಳ ಕುತಂತ್ರಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದರು. ಪ್ರಜ್ಞಾ ಪ್ರವಾಹ ದಕ್ಷಿಣ ಮಧ್ಯ ಕ್ಷೇತ್ರ ಸಂಯೋಜಕ ರಘುನಂದನ ಮಾತನಾಡಿ, ಅನಾಸ್ತ್ರ ಮನಸ್ಥಿತಿಯೇ ಚೀನಾ ವಿರುದ್ಧದ ಯುದ್ಧದಲ್ಲಿ ಸೋಲಿಗೆ ಕಾರಣವಾಯಿತು. ಇದು ಕಾರ್ಗಿಲ್‌ ಯುದ್ಧದಲ್ಲಿ ಆಗಲಿಲ್ಲ. ಪಾಕ್‌ ಸೈನಿಕರನ್ನು ಹಿಮ್ಮೆಟ್ಟಿಸಿ ದೇಶದ ವೀರಯೋಧರು ವಿಜಯೋತ್ಸವ ಆಚರಿಸಿದರು.

ಯುರೋಪಿಯನ್ನರು ಭಾರತಕ್ಕೆ ಬಂದದ್ದು ವ್ಯಾಪಾರಕ್ಕಾಗಿ ಎನ್ನುವ ಭಾವನೆ ಜನರಲ್ಲಿದೆ. ಆದರೆ ಅವರು ಇಡೀ ಭಾರತವನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಪರಿವರ್ತನೆ ಮಾಡುವುದಾಗಿತ್ತು. ಅದರಂತೆ ಹಲವು ದಾಳಿಗಳು ನಡೆದವು. ಆದರೆ ಯಾವ ಕುತಂತ್ರಗಳಿಗೂ ಹಿಂದೂಗಳು ಬಲಿಯಾಗಲಿಲ್ಲ. ಸ್ವರಾಜ್ಯ ಉಳಿಸಿಕೊಳ್ಳಲು ಇಂದಿಗೂ ಸೈನಿಕರು ಸೇವೆ ಮಾಡುತ್ತಿದ್ದಾರೆ. ನಾಡ ಸೈನಿಕರು ಭಾರತ ಮಾತೆಯ ಭಕ್ತಿ ಮೂಡಿಸುವ ಕೆಲಸ ಮಾಡಬೇಕು. ಕನ್ನಡ ಭಕ್ತಿ ರಾಷ್ಟ್ರ ಭಕ್ತಿ ಎರಡು ಕೂಡ ದೇಶಭಕ್ತಿ. ಧರ್ಮಕ್ಕಾಗಿ ನಮ್ಮನ್ನು ಮಾರಿಕೊಳ್ಳವುದು ಹಾಗೂ ಹೆದರುವುದು ಬೇಡ ಎಂದರು. ನಿರಾಮಯ ಫೌಂಡೇಶನ್‌ನ ದೇವರಾಜ ದಾಡಿಬಾಯಿ, ಕಲ್ಲಪ್ಪ ಮೊರಬದ ಇನ್ನಿತರರಿದ್ದರು.

ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಹೋರಾಟ ಅಗತ್ಯ ಎಂಬುದು ಸಾವರ್ಕರ ನಿರ್ಧಾರವಾಗಿತ್ತು. ಸುಭಾಸ್‌ಚಂದ್ರ ಬೋಸ್‌ ಅವರ ಪ್ರಯತ್ನದ ಹಿಂದೆ ವೀರ ಸಾವರ್ಕರ ಇದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವೀರ ಸಾವರ್ಕರ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಿದ್ದಾರೆ. ಕೀಳುಮಟ್ಟದ ಹೇಳಿಕೆಗಳು ಕ್ಷಮೆಗೂ ಅರ್ಹವಲ್ಲ.
ಸಾತ್ಯಕಿ ಸಾವರ್ಕರ,
ವೀರ ಸಾವರ್ಕರ ಅವರ ಮೊಮ್ಮಗ

Advertisement

Udayavani is now on Telegram. Click here to join our channel and stay updated with the latest news.

Next