ವಿಜಯಪುರ: ಮರಾಠಾ ಅಭಿವೃದ್ಧಿ ನಿಗಮ ರದ್ದು ಮಾಡುವಂತೆ ಆಗ್ರಹಿಸಿ ಡಿ. 5 ರಂದು ಕನ್ನಡ ಪರ ಸಂಘಟನೆಗಳ ಹೆಸರಿನಲ್ಲಿ ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಬೆಂಬಲವಿಲ್ಲ. ತಾಕತ್ತಿದ್ದರೆ ವಾಟಾಳ್ ನಾಗರಾಜ್ ಇತರರು ವಿಜಯಪುರ ಬಂದ್ ಮಾಡಿ ತೋರಿಸಲಿ. ಕನ್ನಡದ ಹೆಸರಿನಲ್ಲಿ ನಡೆಸುವ ಇಂಥ ಹುಚ್ಚಾಟಕ್ಕೆ ಮಣಿದು ಮುಖ್ಯಮಂತ್ರಿಗಳು ನಿಗಮ ಆದೇಶವನ್ನು ಹಿಂಪಡೆಯಬಾರದು. ಒಂದೊಮ್ಮೆ ನಿಗಮ ರದ್ದಾದರೆ ಗಂಭೀರ ಪರಿಣಾಮ ಎದರುಸಬೇಕಾಗುತ್ತದೆ ಹಾಗೂ ರಾಜ್ಯದಲ್ಲಿ ದೊಡ್ಡ ಅನಾಹುತವೇ ನಡೆಯಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಎಚ್ಚರಿಸಿದ್ದಾರೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.5 ರಂದು ಕನ್ನಡಪರ ಸಂಘಟನೆಗಳು ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗಿರುವ ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟಕ್ಕೆ ಇಳಿದಿರುವುದು ಸರಿಯಲ್ಲ. ಹಿಂದೂ ಧರ್ಮ ಸಂರಕ್ಷಣೆಯಲ್ಲಿ ಮರಾಠಿಗರ ಪಾತ್ರ ಸಣ್ಣದೇನದಲ್ಲ. ಇಷ್ಟಕ್ಕೂ ಇದು ಮರಾಠಾ ಭಾಷಿಕ ಅಭಿವೃದ್ಧಿಗೆ ಅಲ್ಲ, ಕರ್ನಾಟಕದಲ್ಲಿರುವ ಮರಾಠಿಗರ ಅಭಿವೃದ್ಧಿಗೆ ಸ್ಥಾಪನೆ ಆಗಿರುವ ನಿಗಮ. ಸರ್ಕಾರದ ನಿರ್ಧಾರ ಸೂಕ್ತವಾಗಿದ್ದು, ನಮ್ಮ ಬೆಂಬಲವಿದೆ. ಎಂಇಎಸ್ ಸೇರಿದಂತೆ ಮಹಾರಾಷ್ಟ್ರ ನಾಯಕರ ನಡೆಗೆ ನನ್ನ ವಿರೋಧವಿದೆ. ಆದರೆ ಕನ್ನಡದಲ್ಲಿರುವ ಮರಾಠಿಗರ ಅಭಿವೃದ್ಧಿ ವಿಷಯದಲ್ಲಿ ವಿರೋಧ ಮಾಡುವುದು ಸಲ್ಲದ ಕ್ರಮ ಎಂದರು.
ಕನ್ನಡದ ಹೆಸರಿನಲ್ಲಿ ಬೆಂಗಳೂರಿನಲ್ಲಿ ಕುಳಿತು ಕೆಲವರು ನಡೆಸುವ ಇಂತಹ ಹೋರಾಟಕ್ಕೆ ಮುಖ್ಯಮಂತ್ರಿಗಳು ಮಣಿಯಬಾರದು ಎಂದು ಆಗ್ರಹಿಸಿದ ಅವರು, ಧೈರ್ಯವಿದ್ದರೆ ವಾಟಾಳ್ ನಾಗರಾಜ್, ಕರವೇ ಅಧ್ಯಕ್ಷ ನಾರಾಯಣಗೌಡ ಅವರು ವಿಜಯಪುರ ಬಂದ್ ಮಾಡಿ ತೋರಿಸಲಿ. ಅದು ಹೇಗೆ ವಿಜಯಪುರ ಬಂದ್ ಮಾಡಿಸುತ್ತಾರೆ ನಾನು ನೋಡುತ್ತೇನೆ ಎಂದು ಸವಾಲು ಎಸೆದರು.
ಇದನ್ನೂ ಓದಿ: ಸುಗ್ರಿವಾಜ್ಞೆ ಮೂಲಕ ತಂದ ಕಾಯ್ದೆಗಳನ್ನು ವಿರೋಧಿಸಿ ಸರ್ಕಾರಿ ಕಚೇರಿಗೆ ಮುತ್ತಿಗೆ: ಪಟೇಲ್
ಇಷ್ಟಕ್ಕೂ ಕನ್ನಡ ಪರ ಸಂಘಟನೆಗಳೆಂದರೆ ವಾಟಾಳ್ ನಾಗರಾಜ್ ಹಾಗೂ ನಾರಾಯಣಗೌಡ ಮಾತ್ರವೇ. ಬೆಂಗಳೂರಿನಲ್ಲಿ ಕುಳಿತು ಕನ್ನಡದ ಹೆಸರಿನಲ್ಲಿ ಇವರು ಮಾಡುತ್ತಿರುವ ಕೆಲಸಗಳು ನಮಗೂ ಗೊತ್ತಿದೆ. ಸರ್ಕಾರದಿಂದ 50-60 ಲಕ್ಷ ರೂ. ಅನುದಾನ ಪಡೆದಿರುವ ಇವರು ಮಾತ್ರ ಕನ್ನಡಿಗರೇ, ಉಳಿದ ಎಷ್ಟು ಕನ್ನಡಪರ ಸಂಘಟನೆಗಳಿಗೆ ಸರ್ಕಾರದ ಅನುದಾನ ಸಿಕ್ಕಿದೆ ಹೇಳಿ ಎಂದರು.
ಯಾವುದೋ ಹೊಟೇಲ್‍ನಲ್ಲಿ ಕುಳಿತು ಸಭೆ ಮಾಡುವ, ಜನ ವಿರೋಧಿ ಹೋರಾಟಕ್ಕೆ ಮುಂದಾಗುವ ಇಂಥವರ ಮಾತಿಗೆ ಸರ್ಕಾರ ಮಣಿಯಬಾರದು. ಇಷ್ಟಕ್ಕೂ ವಾಟಾಳ್ ನಾಗರಾಜ್ ಅವರಂಥ ಡೋಂಗಿ ಹೋರಾಟಗಾರರಿಂದ ನಾವು ಕಲಿಯಬೇಕಾದುದು ಏನೂ ಇಲ್ಲ. ನಮಗೂ ಕನ್ನಡ ಅಭಿಮಾನವಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ತುಂಗಭದ್ರಾ ಪುಷ್ಕರಣೋತ್ಸವ: ಪಂಡಿತರ ಆಗಮನ; ಯಶಸ್ವಿ ತುಂಗಭದ್ರಾರತಿ !