Advertisement

ಎಫ್ಐಆರ್‌ ವೆಬ್‌ಸೈಟ್‌ಗೆ ಹಾಕಿದರೆ ಸಾಕ್ಷ್ಯನಾಶ ಸಾಧ್ಯತೆ: ಲೋಕಾಯುಕ್ತ

07:57 PM Dec 01, 2022 | Team Udayavani |

ಬೆಂಗಳೂರು: “ಸೂಕ್ಷ್ಮ ಪ್ರಕರಣಗಳ ಎಫ್ಐಆರ್‌ ಅನ್ನು ತಕ್ಷಣವೇ ವೆಬ್‌ಸೈಟ್‌ಗೆ ಹಾಕಿದರೆ ಸಾಕ್ಷ್ಯನಾಶಪಡಿಸುವ ಸಾಧ್ಯತೆ ಇರುತ್ತದೆ’ ಎಂದು ಲೋಕಾಯುಕ್ತ ಸಂಸ್ಥೆ ಹೈಕೋರ್ಟ್‌ಗೆ ಹೇಳಿದೆ.

Advertisement

ಎಫ್ಐಆರ್‌ ದಾಖಲಾದ 24 ಗಂಟೆಗಳಲ್ಲಿ ಅದನ್ನು ವೆಬ್‌ಸೈಟ್‌ನಲ್ಲಿ ಹಾಕಲು ಲೋಕಾಯುಕ್ತಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ವಕೀಲ ಎಸ್‌.ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಲೋಕಾಯುಕ್ತ ಸಂಸ್ಥೆ ಈ ಮಾಹಿತಿ ನೀಡಿದೆ.

ವಿಚಾರಣೆ ವೇಳೆ ಲೋಕಾಯುಕ್ತ ಪರ ವಕೀಲ ವೆಂಕಟೇಶ್‌ ಅರಬಟ್ಟಿ ವಾದ ಮಂಡಿಸಿ, ಕೆಲವು ಸೂಕ್ಷ್ಮ ಪ್ರಕರಣದಲ್ಲಿ ಎಫ್ಐಆರ್‌ ಅನ್ನು ವೆಬ್‌ಸೈಟ್‌ನಲ್ಲಿ ಹಾಕಿದರೆ, ಅದರ ಮಾಹಿತಿ ಆರೋಪಿಗೆ ಸಿಗುವ ಮತ್ತು ಅದರಿಂದ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇರುತ್ತದೆ. ಇದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಧ್ಯೇಯೋದ್ದೇಶವನ್ನೇ ವಿಫ‌ಲಗೊಳಿಸುತ್ತದೆ. ಹಾಗಾಗಿ, ಸಮಾಜ ಮತ್ತು ಆರೋಪಿಗಳ ಹಕ್ಕುಗಳ ವಿಚಾರದಲ್ಲಿ ಸಮತೋಲನ ಕಾಯ್ದುಕೊಳ್ಳುವ ದೃಷ್ಟಿಯಿಂದ ಸೂಕ್ಷ್ಮ ಪ್ರಕರಣಗಳಿಗೆ ಸಂಬಂಧಿಸಿದ ಎಫ್ಐಆರ್‌ ಅನ್ನು ವಿಳಂಬವಾಗಿ ವೆಬ್‌ಸೈಟ್‌ಗೆ ಹಾಕಲಾಗುತ್ತದೆ. ಇದನ್ನು ಹೊರತುಪಡಿಸಿ ಇತರೆ ಪ್ರಕರಣಗಳ ಎಫ್ಐಆರ್‌ ಅನ್ನು ಸುಪ್ರಿಂಕೋರ್ಟ್‌ ಆದೇಶದಂತೆ ದಾಖಲಿಸಿದ 24 ಗಂಟೆಯೊಳಗೆ ವೆಬ್‌ಸೈಟ್‌ಗೆ ಹಾಕಲಾಗುತ್ತದೆ ಎಂದು ತಿಳಿಸಿದರು.

ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಲೋಕಾಯುಕ್ತ ಸಹ ಕೆಲವೊಂದು ಪ್ರಕರಣಗಳಲ್ಲಿ ಗೌಪ್ಯತೆ ಕಾಯ್ದುಕೊಳ್ಳಬೇಕಾಗುತ್ತದೆ. ಲೋಕಾಯುಕ್ತರು ಪ್ರಮಾಣ ಸಲ್ಲಿಸುವುದರಿಂದ ಅರ್ಜಿಯಲ್ಲಿ ಎತ್ತಲಾಗಿರುವ ಅಂಶಗಳು ಅಸ್ತಿತ್ವ ಕಳೆದುಕೊಳ್ಳಲಿವೆ ಎಂಬುದಾಗಿ ಅರ್ಜಿದಾರರು ತಿಳಿಸಿದ್ದಾರೆ. ಹಾಗೆಯೇ, ಅರ್ಜಿಯಲ್ಲಿ ಎತ್ತಲಾಗಿರುವ ಆಕ್ಷೇಪಗಳಿಗೆ ಪರಿಹಾರವೂ ದೊರೆತಿದೆ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.

ಅರ್ಜಿಯಲ್ಲಿ ಏನಿತ್ತು?: ಎಫ್ಐಆರ್‌ ದಾಖಲಾದ 24 ಗಂಟೆಗಳಲ್ಲಿ ಅದನ್ನು ಸಂಬಂಧಪಟ್ಟ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕೆಂದು 2016ರಲ್ಲಿ ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಇದನ್ನು ಸಿಬಿಐ ಸೇರಿ ಉಳಿದ ತನಿಖಾ ಸಂಸ್ಥೆಗಳು ಪಾಲಿಸುತ್ತಿವೆ. ಸುಪ್ರೀಂಕೋರ್ಟ್‌ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ 2018ರಲ್ಲಿ ಎಸಿಬಿ ಮತ್ತು ಬಿಎಂಟಿಎಫ್ಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ಅದನ್ನು ಎಸಿಬಿ ಪಾಲಿಸುತ್ತಾ ಬಂದಿತ್ತು. ಈ ಮಧ್ಯೆ, ಎಸಿಬಿಯನ್ನು ರದ್ದುಗೊಳಿಸಿ 2022ರ ಆ.11ರಂದು ತೀರ್ಪು ನೀಡಿದ ಹೈಕೋರ್ಟ್‌, ಲೋಕಾಯುಕ್ತದ ಅಧಿಕಾರವನ್ನು ಮರುಸ್ಥಾಪಿಸಿ ಆದೇಶಿಸಿದೆ.  ಆದರೆ, ಎಫ್ಐಆರ್‌ ದಾಖಲಾದ 24 ಗಂಟೆಗಳಲ್ಲಿ ಅದನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂಕೋರ್ಟ್‌ ಆದೇಶವನ್ನು ಲೋಕಾಯುಕ್ತ ಪೊಲೀಸರು ಪಾಲಿಸುತ್ತಿಲ್ಲ.  ಆದ್ದರಿಂದ ಎಫ್ಐಆರ್‌ ದಾಖಲಾದ 24 ಗಂಟೆಗಳಲ್ಲಿ ಅದನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಲೋಕಾಯುಕ್ತಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next