ಚಿಕ್ಕೋಡಿ: ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಬೇಕು ಇಲ್ಲದಿದ್ದರೇ ಏ, 23ರಂದು ನಡೆಯುವ ಲೋಕಸಭೆ ಚುನಾವಣೆ ಬಹಿಷ್ಕಿರಿಸಲಾಗುವುದೆಂದು ಚಿಕ್ಕೋಡಿ ತಾಲೂಕಿನ ಧುಳಗನವಾಡಿ ಗ್ರಾಮಸ್ಥರು ಸರ್ಕಾರದ ವಿರುದ್ಧ ಕಾಲಿ ಕೊಡಗಳ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಧುಳಗನವಾಡಿ ಗ್ರಾಮದ ಖಾಲಿ ಟ್ಯಾಂಕ ಬಳಿ ಖಾಲಿ ಕೊಡಗಳೊಂದಿಗೆ ಮಹಿಳೆಯರು ಮತ್ತು ಪುರುಷರು ಪ್ರತಿಭಟನೆ ನಡೆಸಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಗ್ರಾಮಕ್ಕೆ ಕಳೆದ ಹತ್ತು ದಿನಗಳಿಂದ ಹನಿ ನೀರು ಬಿಟ್ಟಿಲ್ಲ ಇದರಿಂದ ಜೀವನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.
ಗ್ರಾಮಕ್ಕೆ ದೂಧಗಂಗಾ ನದಿಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದೆ. ಆದರೂ ಸಹ ಗ್ರಾಮಕ್ಕೆ ಸಮರ್ಪಕ ನೀರು ಬರುತ್ತಿಲ್ಲ, ಯಾಕೆ ನೀರು ಬರುತ್ತಿಲ್ಲವೆಂದು ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ನದಿಯಲ್ಲಿ ನೀರು ಖಾಲಿಯಾಗಿದೆಂದು ಸುಳ್ಳು ಹೇಳಿ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಗ್ರಾಮದ ಮುಖಂಡ ರಾವಸಾಹೇಬ ಕಮತೆ ಮಾತನಾಡಿ, ನಾಯಿಂಗ್ಲಜ್ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪ್ರತಿ ಹಳ್ಳಿಗಳಿಗೆ ಸಮರ್ಪಕ ಕುಡಿಯುವ ನೀರಿನ ಯೋಜನೆ ಲಾಭ ಸಿಗಬೇಕೆಂದು ಬಹುಗ್ರಾಮ ಯೋಜನೆ ರೂಪಿಸಲಾಗಿದೆ. ಇಡೀ ಜಿಲೆಯಲ್ಲಿ ಬಹುಗ್ರಾಮ ಯೋಜನೆ ಅಚ್ಚಕಟ್ಟಾಗಿ ರೂಪುಗೊಂಡಿದೆ. ಆದರೆ ಸ್ಥಳೀಯ ಅಧಿಕಾರಿಗಳು ಇಚ್ಚಾಶಕ್ತಿ ಕೊರತೆಯಿಂದ ಗ್ರಾಮಗಳಿಗೆ ಸಮರ್ಪಕ ನೀರು ಕೊಡುತ್ತಿಲ್ಲ, ಈಗ ಚುನಾವನೆ ಬಂದಿದೆ. ಇದೇ ರೀತಿ ಮುಂದುವರೆದರೇ ಚುನಾವಣೆ ಬಹಿಷ್ಕಾರ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
ಕೂಡಲೇ ಚುನಾವಣಾಧಿಕಾರಿಗಳು ಧುಳಗನವಾಡಿ ಗ್ರಾಮಕ್ಕೆ ಸಮರ್ಪಕ ನೀರು ಒದಗಿಸಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಚಿಕ್ಕೋಡಿ ಎಲ್ಲ ತಾಲೂಕು ಕಚೇರಿಗಳಿಗೆ ಬೀಗ ಹಾಕಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಪ್ರಕಾಶ ಮಗದುಮ್, ಗ್ರಾಪಂ ಸದಸ್ಯ ಮೀರಾಸಾಬ ಸುತಾರ, ಸಿದ್ಧಗೌಡ ಕಮತೆ, ರಾಜೇಂದ್ರ ಮೊಳಗೆ, ಅಣ್ಣಾಸಾಹೇಬ ಮಗದುಮ್, ಚೇತನ ಕಮತೆ, ಮಲ್ಲಗೌಡ ಚಿಮನೆ, ಬಾಬಾಸಾಹೇಬ ಕಮತೆ, ಪ್ರಭಾಕರ ಮೊಳಗೆ, ಮಲ್ಲೇಶ ಚಿಮನೆ, ಅಪ್ಪಾಸಾಹೇಬ ಖೋತ, ಪಿಂಟು ಗಿರಗಾಂವೆ, ಪಿಂಟು ಖೋತ, ಮಹಾದೇವಿ ಪಾಟೀಲ, ಸುವರ್ಣ ಮೊಳಗೆ, ಕಮಲ ಖೋತ, ರಾಜಶ್ರೀ ಕಮತೆ, ಅನಿತಾ ಚಿಮನೆ, ಸೇವಂತಿ ಕಮತೆ ಸೇರಿದಂತೆ ಇತರರು ಇದ್ದರು.