Advertisement

ಅಮಾಯಕರ ಮೇಲೆ ಸುಳ್ಳು ಕೇಸು ದಾಖಲಿಸಿದರೆ ಕ್ರಮ

12:43 PM Sep 19, 2018 | Team Udayavani |

ಬೆಂಗಳೂರು: ಕಾಶ್ಮೀರದ ನಿವಾಸಿಯೊಬ್ಬನಿಗೆ “ಮನೆ ಬಾಡಿಗೆ ಕರಾರು ಪತ್ರದ’ ಬೆರಳಚ್ಚು (ಟೈಪ್‌) ಮಾಡಿ ಕೊಟ್ಟ ಮಾತ್ರಕ್ಕೆ ಅಮಾಯಕ ವ್ಯಕ್ತಿಯೊಬ್ಬರ ಮೇಲೆ “ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಿಕೊಂಡಿದ್ದಕ್ಕೆ ಕಿಡಿ ಕಾರಿದ ಹೈಕೋರ್ಟ್‌, ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮಂಗಳವಾರ ಆದೇಶಿಸಿದೆ.

Advertisement

ತಮ್ಮ ಮೇಲಿನ ಪ್ರಕರಣ ರದ್ದುಗೊಳಿಸುವಂತೆ ಕೋರಿ ಆರ್‌. ಕೃಷ್ಣ ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಪಿ.ಎಸ್‌.ದಿನೇಶ್‌ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪೊಲೀಸರ ಕಾರ್ಯವೈಖರಿ ವಿರುದ್ಧ ತೀವ್ರ ಕಿಡಿ ಕಾರಿತು.

ಅಮಾಯಕರ ಮೇಲೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸುವುದಕ್ಕೆ ಇದೊಂದು “ಕೈಗನ್ನಡಿ’ ಎಂದು ಮಾತಿನ ಚಾಟಿ ಬೀಸಿತು. ಅಲ್ಲದೇ ಅರ್ಜಿದಾರ ಕೃಷ್ಣ ವಿರುದ್ಧದ ಸಿಸಿಬಿ ಪೊಲೀಸರು ದಾಖಲಿಸಿದ ದೂರು ಹಾಗೂ ಯಶವಂತಪುರ ಸಲ್ಲಿಸಿದ ದೋಷಾರೋಪ ಪಟ್ಟಿ ರದ್ದುಪಡಿಸಿ ನ್ಯಾಯಪೀಠ ಆದೇಶಿಸಿತು. ಈ ದೂರು ದಾಖಲಾಗಿದ್ದು 2010ರಲ್ಲಿ.

ದೂರು ದಾಖಲಿಸಿಕೊಂಡಿದ್ದ ಅಂದಿನ ಸಿಸಿಬಿ ಇನ್ಸ್‌ಪೆಕ್ಟರ್‌ ಎಚ್‌.ಕೆ.ಮರಿಸ್ವಾಮಿ ಗೌಡ ಮತ್ತು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಅಂದಿನ ಯಶವಂತಪುರ ಠಾಣಾ ಇನ್ಸ್‌ಪೆಕ್ಟರ್‌ ಸೇರಿದಂತೆ ಪ್ರಕರಣದಲ್ಲಿನ ಎಲ್ಲ ತಪ್ಪಿತಸ್ಥ ಪೊಲೀಸರ ವಿರುದ್ಧ ಮೂರು ತಿಂಗಳಲ್ಲಿ ಶಿಸ್ತುಕ್ರಮ ಜರುಗಿಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಪೊಲೀಸ್‌ ಮಹಾನಿರ್ದೇಶಕರಿಗೆ ನ್ಯಾಯಪೀಠ ನಿರ್ದೇಶನ ನೀಡಿತು.

ಏನಿದು ಪ್ರಕರಣ: ಕಾಶ್ಮೀರದ ನಿವಾಸಿ ಎನ್ನಲಾದ ಆರೀಫ್ ಎಂಬಾತ 2006 ಫೆ.5ರಿಂದ 14ರವರಗೆ ಶಿವಾಜಿನಗರದ  “ಬೈತುಲ್‌ ಮಹಲ್‌’ ಖಾಸಗಿ ಅತಿಥಿ ಗೃಹದಲ್ಲಿ ತಂಗಿದ್ದ. ಆತನ ಚಲವಲನದ ಮೇಲೆ ಸಿಸಿಬಿ ಪೊಲೀಸರು ಸಂಶಯ ವ್ಯಕ್ತಪಡಿಸಿ, ಅತಿಥಿ ಗೃಹದ ಮೇಲ್ವಿಚಾರಕರನ್ನು ವಿಚಾರಿಸಿದ್ದರು.

Advertisement

ಆರೀಫ್ಗೆ ಒಂದು ಬೆಡ್‌ ನೀಡಲು, ಆತನ ವಾಹನ ಚಾಲನಾ ಪರನವಾಗಿ ಪತ್ರ, ಶಿವಾಜಿನಗರದ ಮನೆಯೊಂದರ ಬಾಡಿಗೆ ಕರಾರು ಪತ್ರ, ಭಾರತೀಯ ಜೀವಾ ವಿಮಾ ಪಾಲಿಸಿ ಮತ್ತು ಕೆ.ಆರ್‌.ಪುರದ ಶಾಲೆಯೊಂದ‌ಕ್ಕೆ ಸಂಬಂಧಿಸಿದ ವರ್ಗಾವಣೆ ಪತ್ರದ ನಕಲು (ಜೆರಾಕ್ಸ್‌) ಪ್ರತಿ ಪಡೆದಿರುವುದಾಗಿ  ತಿಳಿಸಿದ್ದರು. 

ಆದರೆ, ಇವೆಲ್ಲಾ ನಕಲಿ ದಾಖಲೆಗಳಾಗಿವೆ ಎಂದು ಎಚ್‌.ಕೆ.ಮರಿಸ್ವಾಮಿ ಗೌಡ ಅವರು ಕೃಷ್ಣ ವಿರುದ್ಧ ಯಶವಂತಪುರ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಯಶವಂತಪುರ ಠಾಣಾ ಇನ್ಸ್‌ಪೆಕ್ಟರ್‌, ಅರ್ಜಿದಾರ ಕೃಷ್ಣ ವಿರುದ್ಧ ಅಧೀನ ನ್ಯಾಯಾಲಯಕ್ಕೆ  ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಕೃಷ್ಣ 2012ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next