Advertisement

ವ್ಯವಹಾರ ಮತ್ಸರರಹಿತರಾದರೆ ಸಂಘಟನೆ ಬಲಿಷ್ಠ

08:10 AM Aug 07, 2017 | Harsha Rao |

ಉಡುಪಿ: ಒಂದೇ ರೀತಿಯ ಉದ್ಯಮದವರು ಒಂದೇ ಸಂಘಟನೆಯಲ್ಲಿದ್ದಾಗ ಬಹುತೇಕ ವ್ಯವಹಾರ ಮತ್ಸರ ಇರುವುದು ಸ್ವಾಭಾವಿಕ. ಆದರೆ ಅಂತಹ ವ್ಯಾವಹಾರಿಕ ಮತ್ಸರ, ಭಿನ್ನಾಭಿಪ್ರಾಯಗಳನ್ನು ಇರಿಸಿಕೊಳ್ಳದೇ ಸಂಘಟಿತರಾಗಿ ಮುಂದುವರಿಯುತ್ತಿರುವುದು ಶಾಮಿಯಾನ ಸಂಯೋಜಕರ ಒಕ್ಕೂಟದ ಮಹತ್ಸಾಧನೆಯೇ ಆಗಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಅಭಿಪ್ರಾಯಪಟ್ಟರು.

Advertisement

ಉಡುಪಿಯ ಮಿಶನ್‌ ಕಾಂಪೌಂಡ್‌ನ‌ ಯುಬಿಎಂಸಿ ಹಾಲ್‌ನಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾ ಶಾಮಿಯಾನ ಸಂಯೋಜಕರ ಒಕ್ಕೂಟದ ದಶಮಾನೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೇಡಿಕೆಗೆ ಸ್ಪಂದನೆ: ಒಕ್ಕೂಟವಿತ್ತ ಬೇಡಿಕೆಗೆ ಸ್ಪಂದಿಸಿದ ಸಚಿವರು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸೂಕ್ತ ಸ್ಥಳ ನಿಗದಿಗೊಳಿಸಿ ತಿಳಿಸಿದರೆ ಕಂದಾಯ ಇಲಾಖೆಯೊಂದಿಗೆ ಚರ್ಚಿಸಿ ನಿವೇಶನ ಮಂಜೂರು ಮಾಡಿಸುವಲ್ಲಿ ಪ್ರಯತ್ನಿಸಲಾಗುವುದು. ಶಾಮಿಯಾನ ಕಾರ್ಮಿಕರಿಗೆ ಪೊಲೀಸ್‌ ಇಲಾಖೆ ಯಿಂದಾಗುವ ಸಮಸ್ಯೆ ಬಗ್ಗೆ ಪೊಲೀಸ್‌ ವರಿಷ್ಠಾಧಿಕಾರಿಗಳಲ್ಲಿ ಸಮಾಲೋಚನೆ ನಡೆಸಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಸ್ಮರಣ ಸಂಚಿಕೆ ಬಿಡುಗಡೆ: ಒಕ್ಕೂಟದ ದಶಮಾನೋತ್ಸವ ಸಂಭ್ರಮದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಶಾಮಿಯಾನ ಸಂಯೋಜಕರ ಒಕ್ಕೂಟವು ತಮ್ಮ ಉದ್ಯಮದಲ್ಲಿ ದುಡಿಯುವ ಕಾರ್ಮಿಕರ ಕುರಿತು ಅತೀವ ಕಾಳಜಿ ತೋರ್ಪಡಿಸುತ್ತಿರುವುದು ಶ್ಲಾಘನೀಯ ಎಂದರು.

ಸಮ್ಮಾನ-ಪುರಸ್ಕಾರ
ಇದೇ ಸಂದರ್ಭ ಸಚಿವ ಪ್ರಮೋದ್‌ ಮಧ್ವರಾಜ್‌ ಅವರನ್ನು ಒಕ್ಕೂಟದ ವತಿಯಿಂದ ವಿಶೇಷವಾಗಿ ಸಮ್ಮಾನಿಸಿ ಗೌರವಿಸಲಾಯಿತು. 9 ಮಂದಿ ಹಿರಿಯ ಶಾಮಿಯಾನ ಕಾರ್ಮಿಕರನ್ನು ಸಮ್ಮಾನಿಸಲಾಯಿತು. ಪ್ರತಿಭಾವಂತ 9 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮಾಜಿ ಅಧ್ಯಕ್ಷರಾದ ಬಾಲಕಷ್ಣ ಪೂಜಾರಿ, ರಮಾನಾಥ ಅಲ್ಸೆ ಹಾಗೂ ಮಾರ್ಗದರ್ಶಕ ವಿಜಯ ಕುಮಾರ್‌ ಅವರನ್ನು ಗೌರವಿಸಲಾಯಿತು. 7 ಮಂದಿ ಅಶಕ್ತರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯಧನದ ಚೆಕ್‌ ವಿತರಿಸಲಾಯಿತು.

Advertisement

ಉಡುಪಿ ಜಿಲ್ಲೆ ಶಾಮಿಯಾನ ಸಂಯೋಜಕರ ಒಕ್ಕೂಟದ ಅಧ್ಯಕ್ಷ ನವೀನ್‌ ಅಮೀನ್‌ ಶಂಕರಪುರ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉತ್ತರ ಕರ್ನಾಟಕ ಟೆಂಟ್‌ ಆ್ಯಂಡ್‌ ಡೆಕೋರೇಶನ್‌ ವೆಲ್‌ಫೇರ್‌ ಅಸೋಸಿಯೇಶನ್‌ ಅಧ್ಯಕ್ಷ ಮೆಹಬೂಬ್‌ ಮುಲ್ಲ ಸಿದ್ದಾಪುರ, ಅಖೀಲ ಭಾರತ ಟೆಂಟ್‌ ಆ್ಯಂಡ್‌ ಡೆಕೋರೇಶನ್‌ ವೆಲ್‌ಫೇರ್‌ ಅಸೋಸಿಯೇಶನ್‌ ಹೊಸದಿಲ್ಲಿಯ ಕಾರ್ಯದರ್ಶಿ ಗುಂಡಯ್ಯಸ್ವಾಮಿ ಹಿರೇಮಠ ಮುಖ್ಯ ಅತಿಥಿಗಳಾಗಿದ್ದರು.

ಜಿಲ್ಲಾ ಉಪಾಧ್ಯಕ್ಷ ರಾಜೇಶ್‌ ಶೇಟ್‌, ಪ್ರಧಾನ ಕಾರ್ಯದರ್ಶಿ ಗಣೇಶ್‌ ಎಂ.ಕೆ. ಶಿರಿಯಾರ, ಜಿಲ್ಲಾ ಕೋಶಾಧಿಕಾರಿ ಸುಕೇಶ್‌ ಹೆಗ್ಡೆ ಕಡ್ತಲ, ಜತೆಕಾರ್ಯದರ್ಶಿ ಚಿತ್ತರಂಜನ್‌ ದೇವಾಡಿಗ ಬಂಟ್ವಾಳ, ಆಯವ್ಯಯ ಮೇಲ್ವಿಚಾರಕ ರಾಜೇಶ್‌ ಉಡುಪಿ, ಬೈಂದೂರು ವಲಯಾಧ್ಯಕ್ಷ ಕರುಣಾಕರ, ಕುಂದಾಪುರ ವಲಯಾಧ್ಯಕ್ಷ ಉದಯ ಕುಮಾರ್‌, ಬ್ರಹ್ಮಾವರ ವಲಯಾಧ್ಯಕ್ಷ ಶೌಕತ್‌ ಅಲಿ, ಉಡುಪಿ ವಲಯಾಧ್ಯಕ್ಷ ರಾಜೇಶ್‌ ಅಲೆವೂರು, ಕಾಪು ವಲಯಾಧ್ಯಕ್ಷ ಶ್ರೀಧರ್‌ ಪ್ರಭು, ಕಾರ್ಕಳ ವಲಯಾಧ್ಯಕ್ಷ ನಾರಾಯಣ ಸಾಲ್ಯಾನ್‌ ಶಿರ್ತಾಡಿ ಹಾಗೂ ಜಿಲ್ಲಾ 6 ವಲಯದ ಪದಾಧಿಕಾರಿಗಳು, ಸರ್ವ ಸದಸ್ಯರು ಭಾಗವಹಿಸಿದ್ದರು.

ಜಿಲ್ಲಾ ಸಂಚಾಲಕ ವಿಜಯ ಸುವರ್ಣ ಪ್ರಸ್ತಾವನೆಗೈದರು. ಅರುಣ್‌ ಕುಮಾರ್‌ ವರದಿ ವಾಚಿಸಿದರು. ಸಂತೋಷ್‌ ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷ ಕರುಣಾಕರ ಕುಂದಾಪುರ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next