Advertisement
“ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಒಂದಾಗಿವೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿ ಹೊಂದಾಣಿಕೆ ಮಾತುಕತೆ ನಡೆಸಿದ್ದಾರೆ” ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪದಿಂದ ಚುನಾವಣೆಯಲ್ಲಿ ಆಗಬಹುದಾದ ಮತನಷ್ಟಕ್ಕೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೀಗೆ ಹೇಳುವ ಮೂಲಕ ಮದ್ದೆರೆಯುವ ಪ್ರಯತ್ನ ಮಾಡಿದ್ದಾರೆ.
ಖಾಸಗಿ ಆಂಗ್ಲ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಎಚ್.ಡಿ.ದೇವೇಗೌಡ, 2006ರಲ್ಲಿ ಬಿಜೆಪಿಯವರ ಜತೆ ಹೋಗಿ ಕುಮಾರಸ್ವಾಮಿ ತಪ್ಪು ಮಾಡಿದ್ದರು. ಆ ತಪ್ಪಿನಿಂದ ಅವರು ಪಾಠ ಕಲಿತಿದ್ದಾರೆ. ಅಲ್ಲದೇ, ಮತ್ತೆ ಅಂತಹ ತಪ್ಪು ಮಾಡುವುದಿಲ್ಲ ಎಂದು ಪದೇ ಪದೆ ಹೇಳಿದ್ದಾರೆ. ಹೀಗಿದ್ದರೂ ಕುಮಾರಸ್ವಾಮಿ ಮತ್ತು ಬಿಜೆಪಿ ವಿಚಾರದಲ್ಲಿ ಕಾಂಗ್ರೆಸ್‌ನವರು ಚುನಾವಣಾ ವಾತಾವರಣವನ್ನೇ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಒಂದೊಮ್ಮೆ ಕುಮಾರಸ್ವಾಮಿ ಮತ್ತೆ ಬಿಜೆಪಿ ಜತೆ ಹೋದರೆ ಅವರು ನನ್ನ ಮಗನೇ ಅಲ್ಲ. ಕುಟುಂಬದಿಂದ ಅವರನ್ನು ಬಹಿಷ್ಕರಿಸುತ್ತೇವೆ ಎಂದಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ, ಪ್ರಾದೇಶಿಕ ಪಕ್ಷಗಳನ್ನು ಬಳಸಿಕೊಂಡು ಬಳಿಕ ಬದಿಗೆಸೆಯುತ್ತಾರೆ. ಕಾಂಗ್ರೆಸ್‌ವರು ಹಿಂದೆ ರಾಜ್ಯದಲ್ಲಿ ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸಿ ಪಕ್ಷ ನಾಶ ಮಾಡಲು ಹೊರಟರು. ಬಿಜೆಪಿ ಜತೆ ಹೋದ ಶಿವಸೇನೆ, ಚಂದ್ರಬಾಬು ನಾಯ್ಡು ಅವರ ಪರಿಸ್ಥಿತಿ ಏನಾಯಿತು? ಹೀಗಾಗಿ ರಾಜಕಾರಣದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ನನ್ನ ಅನುಮತಿ ಬೇಕೇ ಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
Related Articles
ಈ ಮಧ್ಯೆ ಎಚ್.ಡಿ.ಕುಮಾರಸ್ವಾಮಿ ಕೂಡ ಬಿಜೆಪಿ ಜತೆ ಹೊಂದಾಣಿಕೆಯನ್ನು ತಳ್ಳಿಹಾಕಿದ್ದಾರೆ. “”ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಉದ್ಭವವಾದರೆ ಜೆಡಿಎಸ್ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಲಿದೆ. ಈ ಬಾರಿ ಪಕ್ಷದ ಶಾಸಕರನ್ನು ಅಷ್ಟು ಸಲೀಸಾಗಿ ಖರೀದಿಸಲು ಸಾಧ್ಯವಿಲ್ಲ. ಈಗಲೂ ನನ್ನ ತಂದೆ ಬಿಜೆಪಿಯನ್ನು ವಿರೋಧಿಸುತ್ತಿದ್ದು, ಅವರಿಗೆ ವಿರುದ್ಧವಾಗಿ ಬಿಜೆಪಿ ಜತೆ ಕೈಜೋಡಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
Advertisement
ಆದರೆ, 2006ರಲ್ಲಿ ಬಿಜೆಪಿ ಜತೆ ಕೈಜೋಡಿಸಿದ್ದನ್ನು ಸಮರ್ಥಿಸಿಕೊಂಡ ಅವರು, “”ಅಂದು ನನ್ನ ತಂದೆಯ ಮಾತಿಗೆ ವಿರುದ್ಧವಾಗಿ ಬಿಜೆಪಿ ಜತೆ ಕೈಜೋಡಿಸಬೇಕಾಯಿತು. ನನ್ನ ಪಕ್ಷವನ್ನು (ಜೆಡಿಎಸ್) ಉಳಿಸಿಕೊಳ್ಳಲು ಈ ನಿರ್ಧಾರ ಅನಿವಾರ್ಯವಾಗಿತ್ತು. ಇದರಿಂದ ತಂದೆಯವರ ಆರೋಗ್ಯ ಹದಗೆಟ್ಟಿತು. ನಂತರದಲ್ಲಿ ಅಧಿಕಾರ ದಾಹಕ್ಕೆ ಬಿದ್ದ ಬಿಜೆಪಿ ನನ್ನ ವಿರುದ್ಧವೇ ಷಡ್ಯಂತ್ರ ಮಾಡಿತು. ಸಚಿವರೊಬ್ಬರು ನನ್ನ ಮೇಲೆ 150 ಕೋಟಿ ರೂ. ಗಣಿ ಕಪ್ಪದ ಆರೋಪ ಮಾಡಿದರು. ಇನ್ನೊಬ್ಬರು ಸುಪಾರಿ ಕೊಟ್ಟೆ ಎಂದು ನನ್ನ ಮೇಲೆ ಪ್ರಕರಣ ದಾಖಲಿಸಿದ್ದರು. ಇದನ್ನು ಮರೆಯಲು ಸಾಧ್ಯವಿಲ್ಲ” ಎಂದಿದ್ದಾರೆ.
ಇದೇ ವೇಳೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಗಳನ್ನೂ ತಳ್ಳಿಹಾಕಿದ್ದಾರೆ.