Advertisement

ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ

02:41 PM Jun 06, 2018 | |

ಮೈಸೂರು: ಕಾಂಗ್ರೆಸ್‌ನವರ ಆಶೀರ್ವಾದ ಇರುವವರೆಗೆ ಮುಖ್ಯಮಂತ್ರಿಯಾಗಿರುತ್ತೇನೆ ಎನ್ನುವ ಮೂಲಕ ಮುಖ್ಯಮಂತ್ರಿ ಸ್ಥಾನ ಭದ್ರವಾಗಿಲ್ಲ ಎಂದು ಒಪ್ಪಿಕೊಂಡಿರುವ ಕುಮಾರಸ್ವಾಮಿಗೆ ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಯಡಿಯೂರಪ್ಪ ಸವಾಲು ಹಾಕಿದರು.

Advertisement

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದಿಂದ ಮಂಗಳವಾರ ಏರ್ಪಡಿಸಿದ್ದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಈಗಲೂ ಬಿಜೆಪಿ 150: ರಾಜ್ಯದಲ್ಲಿ ಈಗ ಚುನಾವಣೆ ನಡೆದರೂ ಬಿಜೆಪಿ 150 ಸ್ಥಾನ ಗೆಲ್ಲಲಿದೆ. ಈ ಬಗ್ಗೆ ಜನತೆ ಕುಂತಲ್ಲಿ, ನಿಂತಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ 130ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚನೆ ಮಾಡುವ ವಾತಾವರಣವಿತ್ತು. ಆದರೆ, ಬೇರೆ ಬೇರೆ ಕಾರಣಗಳಿಂದಾಗಿ 104 ಸ್ಥಾನಗಳಿಗೆ ಸೀಮಿತವಾಗಬೇಕಾಯಿತು. ಹೀಗಾಗಿ ಬಿಜೆಪಿ ಸರ್ಕಾರ ರಚನೆಯಾಗದಿರುವುದಕ್ಕೆ ರಾಜ್ಯದ ಉದ್ದಗಲಕ್ಕೆ ಜನರಲ್ಲಿ ಆಕ್ರೋಶವಿದೆ ಎಂದರು.

ಜನಹಿತ ಮರೆತವರು: ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಮೇಲೆ ಗೊಂದಲದ ಗೂಡಾಗಿದೆ. ಕಚ್ಚಾಟ, ಬಡಿದಾಟ ಆರಂಭವಾಗಿದೆ. ಜನಹಿತ ಮರೆತು ಮುಖ್ಯಮಂತ್ರಿ ಸಂಪುಟ ವಿಸ್ತರಣೆಯಲ್ಲಿ ತಲ್ಲೀನರಾಗಿದ್ದಾರೆ. ನಾನು ಅದೃಷ್ಟದ ರಾಜಕಾರಣಿ, ರಾಜ್ಯದ 6.5ಕೋಟಿ ಜನ ಆಯ್ಕೆ ಮಾಡಿದ ಮುಖ್ಯಮಂತ್ರಿಯಲ್ಲ, ನಾನು ರಾಜ್ಯದ ಜನರ ಮುಲಾಜಿನಲ್ಲಿಲ್ಲ, ಕಾಂಗ್ರೆಸ್‌ ನಾಯಕರ ಮುಲಾಜಿನಲ್ಲಿದ್ದೇನೆ ಎನ್ನುವ ಮೂಲಕ ಅಧಿಕಾರದ ಮದದಿಂದ ರಾಜ್ಯದ ಜನತೆಗೆ ಅಪಮಾನ ಮಾಡುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಕಾಟಾಚಾರಕ್ಕೆ ರೈತರ ಸಭೆ: ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ 53 ಸಾವಿರ ಕೋಟಿ ಸಾಲಮನ್ನಾ ಮಾಡುವ ಜೊತೆಗೆ ಖಾಸಗಿಯವರ ಬಳಿ ಮಾಡಿರುವ ಸಾಲವನ್ನೂ ಮನ್ನಾ ಮಾಡುವುದಾಗಿ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿಬಂದು, ಈಗ ಸಾಲಮನ್ನಾ ವಿಚಾರದಿಂದ ಹಿಂದೆ ಸರಿದು ಬೂಟಾಟಿಕೆ ಮಾಡುತ್ತಿದ್ದಾರೆ. ಭರವಸೆ ಈಡೇರಿಸುವ ಯೋಗ್ಯತೆ ಇಲ್ಲದಿದ್ದ ಮೇಲೆ ಪ್ರಣಾಳಿಕೆಯಲ್ಲಿ ಭರವಸೆ ಏಕೆ ಕೊಟ್ಟಿರಿ ಎಂದು ಪ್ರಶ್ನಿಸಿದ ಅವರು,

Advertisement

ಸಿದ್ದರಾಮಯ್ಯ ಸರ್ಕಾರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ ಮೇಲೆ ಸಣ್ಣ ರೈತರ ಸಾಲ ಬಾಕಿ ಉಳಿದಿಲ್ಲ. ಬಿಜೆಪಿ ಬಂದ್‌ ಕರೆ ಕೊಟ್ಟ ಬಳಿಕ ಎಚ್ಚೆತ್ತುಕೊಂಡ ಕುಮಾರಸ್ವಾಮಿ, ಕಾಟಾಚಾರಕ್ಕೆ ರೈತರ ಸಭೆ ನಡೆಸಿದರು. ಹೈನುಗಾರರಿಗೆ ಪ್ರತಿ ಲೀಟರ್‌ಗೆ ನೀಡುತ್ತಿದ್ದ 5 ರೂ. ಪ್ರೋತ್ಸಾಹಧನದಲ್ಲಿ 2 ರೂ. ಕಡಿತ ಮಾಡಿ ತಮ್ಮದು ರೈತ ವಿರೋಧಿ ಸರ್ಕಾರ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಅಂಡ್‌ ಕಂಪನಿ ಸರ್ಕಾರ: ನಮ್ಮ ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು 15 ದಿನ ಕಾಲಾವಕಾಶ ಕೊಟ್ಟರೆ, ಕುಮಾರಸ್ವಾಮಿ ರಾಜಕೀಯ ದೊಂಬರಾಟ ಮಾಡಿ ಮುಖ್ಯಮಂತ್ರಿ ಆಗಿದ್ದಾರೆ. ಬಹಳ ದಿನ ಉಳಿಯುವುದಿಲ್ಲ ಈ ಸರ್ಕಾರ, ಈ ಸತ್ಯ ಅವರಿಗೂ ಗೊತ್ತಿದೆ. ಕಳೆದ ಮೂರು ತಿಂಗಳಿಂದ ರಾಜ್ಯದ ಅಭಿವೃದ್ಧಿ ಸ್ಥಗಿತವಾಗಿದೆ. ಹಣಕಾಸು ಬಿಡುಗಡೆಯಾಗುತ್ತಿಲ್ಲ. ಗುತ್ತಿಗೆದಾರರು ಈ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಕುಮಾರಸ್ವಾಮಿ ಅಂಡ್‌ ಕಂಪನಿ ಸರ್ಕಾರದ ಆಡಳಿತವನ್ನು ಮುಂದಿನ 15 ರಿಂದ 20 ದಿನಗಳ ಕಾಲ ಶಾಂತ ರೀತಿಯಿಂದ ಕಾದು ನೋಡಿ ಹೋರಾಟ ನಡೆಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್‌ ಸಿಂಹ, ವಿಧಾನಪರಿಷತ್‌ ಸದಸ್ಯೆ ತೇಜಸ್ವಿನಿ, ಶಾಸಕರಾದ ನಾಗೇಂದ್ರ, ಹರ್ಷವರ್ಧನ್‌, ರಾಮದಾಸ್‌, ವಿಧಾನಪರಿಷತ್‌ ಮಾಜಿ ಸದಸ್ಯ ತೋಂಟದಾರ್ಯ, ವಿಭಾಗ ಸಂಘಟನಾ ಕಾರ್ಯದರ್ಶಿ ಸುರೇಶ್‌ ಬಾಬು, ನಗರ ಬಿಜೆಪಿ ಅಧ್ಯಕ್ಷ ಡಾ.ಬಿ.ಪಿ.ಮಂಜುನಾಥ್‌, ಕೆ.ಆರ್‌.ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮಂಜುನಾಥ್‌ ಉಪಸ್ಥಿತರಿದ್ದರು.

ಸನ್ಮಾನ: ಇದೇ ಸಂದರ್ಭದಲ್ಲಿ ಕೆ.ಆರ್‌. ಕ್ಷೇತ್ರದ ಮತಗಟ್ಟೆಗಳಲ್ಲಿ ಶೇಕಡಾವಾರು ಅತಿ ಹೆಚ್ಚು ಮತಗಳನ್ನು ತಂದುಕೊಟ್ಟ ಕಾರ್ಯಕರ್ತರನ್ನು ಯಡಿಯೂರಪ್ಪ ಸನ್ಮಾನಿಸಿದರು.

ಯಡಿಯೂರಪ್ಪ ಬಾಯಲ್ಲಿ ಸಿದ್ದರಾಮಯ್ಯ ಜಪ!: ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಕುಮಾರಸ್ವಾಮಿ ಅನ್ನುವ ಬದಲು ಸಿದ್ದರಾಮಯ್ಯ ಜಪ ಮಾಡುವ ಮೂಲಕ ಮತ್ತೆ ಯಡವಟ್ಟು ಮಾಡಿಕೊಂಡರು.

ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಘಟಕದಿಂದ ಮಂಗಳವಾರ ಏರ್ಪಡಿಸಿದ್ದ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ 25 ನಿಮಿಷದ ಭಾಷಣದಲ್ಲಿ ಐದು ಬಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರನ್ನು ಪ್ರಸ್ತಾಪಿಸಿದರು. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ವಿಶ್ವಾಸಮತ ಸಾಬೀತು ಮಾಡಿದ ದಿನ ಕೂಡ ವಿಧಾನಸಭೆಯಲ್ಲಿ ಯಡಿಯೂರಪ್ಪನವರು ಸಿದ್ದರಾಮಯ್ಯ ಜಪ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next