ಬೆಳ್ತಂಗಡಿ: ಜೀವನದ ಪಾತ್ರವಾಗಿರುವ ಸಮಸ್ಯೆ ಹಾಗೂ ಸವಾಲು ಎದುರಿಸುವಲ್ಲಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹಿರಿಯ ಸಹೋದರ ಸೋಮಭಾಯಿ ಮೋದಿ ಹೇಳಿದರು.
ಉಜಿರೆಯಲ್ಲಿ ಮಂಗಳವಾರ ಶ್ರೀ ಸಿದ್ಧವನ ಗುರುಕುಲದ ನವೀಕೃತ ಪ್ರಾರ್ಥನ ಭವನ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಚ್ಛತೆಯ ಮನೋಭಾವ ಮೈಗೂಡಿಸಿ ಕೊಂಡಾಗ ಪ್ರಧಾನಿಯವರ ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು ಶಿಸ್ತು, ಸಂಯಮ, ಸೇವಾ ಮನೋಭಾವ ಬೆಳೆಸಿಕೊಳ್ಳಲು ಗುರುಕುಲ ಶಿಕ್ಷಣ ಪದ್ಧತಿ ಪ್ರೇರಕವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಹಾಗೂ ಸೇವಾ ಮನೋಭಾವ ಬೆಳೆಸಿಕೊಂಡು ಸಮಾಜದ ಸಭ್ಯ ನಾಗರಿಕರಾಗಿರಬೇಕು ಎಂದು ಸಲಹೆ ನೀಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಎಸ್. ಡಿ.ಎಂ. ಶಿಕ್ಷಣ ಸಂಸ್ಥೆಗಳ ಸೇವೆ ಮತ್ತು ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಶಿಕ್ಷಣದೊಂದಿಗೆ ಸಂಶೋಧನೆಗೂ ಆದ್ಯತೆ ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ರತ್ನಮಾನಸ ಮತ್ತು ಸಿದ್ಧವನ ಗುರುಕುಲದಲ್ಲಿ ವಿದ್ಯಾರ್ಥಿಗಳಿಗೆ ಕೃಷಿ, ಹೈನುಗಾರಿಕೆಯಿಂದ ಸಮಾಜ ಸೇವೆ, ನಾಯಕತ್ವ ಇತ್ಯಾದಿ ವಿಷಯಗಳಲ್ಲಿ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಜೀವನ ಶಿಕ್ಷಣ ನೀಡುತ್ತಿದೆ. ತಾನು ಗುರುಕುಲದಲ್ಲಿ ಕಳೆದ ವಿದ್ಯಾರ್ಥಿ ಜೀವನವನ್ನು ಸ್ಮರಿಸಿದರು.
ಶಾಸಕ ಹರೀಶ್ ಪೂಂಜ, ಹೇಮಾವತಿ ವಿ. ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ| ಬಿ. ಯಶೋವರ್ಮ, ಲಲಿತ್ ಶಾ, ಮತ್ತು ಬಿಜೆಪಿ ಕಾಯಕರ್ತ ರಾಜಶೇಖರ ಉಪಸ್ಥಿತರಿದ್ದರು.
ಪ್ರೊ| ಎಸ್ ಪ್ರಭಾಕರ್ ಸ್ವಾಗತಿಸಿದರು. ಡಿ.ಹರ್ಷೇಂದ್ರ ಕುಮಾರ್ ವಂದಿಸಿದರು. ಡಾ| ಬಿ.ಎ.ಕುಮಾರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.