Advertisement
ಗಂಭೀರವಾದ ಲಯಭರಿತ ಸದ್ದು. ಅನಂತ ಜಲರಾಶಿ. ಭೋರ್ಗರೆಯುವ ನೀರು ಬಾನಿನಿಂದ ಶ್ವೇತವರ್ಣದ ಜಲಧಾರೆಯಂತೆ ಧುಮ್ಮಿಕ್ಕುವ ರಭಸಕ್ಕೆ ತಾನೇತಾನಾಗಿ ವ್ಯಾಪಿಸಿಕೊಂಡ ಹಬೆ. ನೀರ ಧಾರೆ ಚಿಕ್ಕ ಚಿಕ್ಕ ಹನಿಗಳಾಗಿ ತಂಪನ್ನು ಸಿಂಚನಗೈಯುತ್ತಿದ್ದರೆ, ಅದರೊಳಗೆ ಲೀನವಾದ ಭಾವ, ಅಗಾಧತೆಗೆ ಕಲ್ಪನೆಗಳು ಗರಿಗೆದರಿ ಇನ್ನೆಲ್ಲಿಗೋ ಕೊಂಡೊಯ್ಯುವ ರೀತಿಯೇ ವಿಶಿಷ್ಟ .
Related Articles
Advertisement
“ಬಾ ಸಾಕು, ಸಂಜೆಯಾಗುತ್ತಿದೆ’ ಎಂದು ಅಮ್ಮ ಕೂಗಿದಾಗ ಜಲಧಾರೆಯಲ್ಲಿ ನೆಟ್ಟಿದ್ದ ದೃಷ್ಟಿಯನ್ನು ಪ್ರಯಾಸದಿಂದ ತಿರುಗಿಸಿ, ” ಇನ್ನಷ್ಟು ಹೊತ್ತು ಕೂತು ಬರುತ್ತೇನೆ, ನೀವು ಹೋಗಿ ರೆಸ್ಟ್ ಮಾಡಿ’ ಅಂದವಳೇ ಮತ್ತೆ ಶ್ವೇತಧಾರೆಯ ಲೋಕದಲ್ಲಿ ಲೀನವಾದೆ. ಇಷ್ಟರಲ್ಲಿ ಮುಸು ಮುಸು ಅಳುವಿನ ಧ್ವನಿ ನೀರಿಂದ ಎದ್ದು ಹೊರಬಂದಂತಾಯಿತು. ಆ ಕಡೇ ಬೆಂಚಿನಲ್ಲಿ ಒಬ್ಬಳೇ ಕೂತು ಅಳುವಿನ ಮಧ್ಯೆ ಆ ಜಲಧಾರೆಗೆ ಅದೇನು ಗೋಳು ಹೇಳಿಕೊಳ್ಳುತ್ತಿದ್ದಳ್ಳೋ ಏನೋ…ನಾನು ಅವಳಲ್ಲಿಗೆ ಹೋದೆ. ಕದಡಿದ ಮುಖದಲ್ಲಿ ಒಂದಷ್ಟು ಸ್ಪಂದನೆಗೆ ಹರಿದು, ಜಲಪಾತದಂತೆ ಹುದುಗಿಸಿಕೊಂಡಿರಬಹುದಾದ ನೋವು ಮಾಯವಾಯಿತು. ಒಂದೆರಡು ಮಾತಾಡಿಸಿ ಪಕ್ಕದಲ್ಲೇ ಕೂತೆ. ಬೆಂಗಳೂರಿನ ಜೆ.ಪಿ ನಗರದವರು. ಆಕೆಯ ಕಸಿನ್ ಅಕ್ಕನ ಕಾಲೇಜಿನಲ್ಲೇ ಓದುತ್ತಿರೋದು. ಹೀಗೆ ಪರಿಚಯದಿಂದ ಶುರುವಾದ ಮಾತು ಆಕೆ ಜಲಪಾತಕ್ಕೆ ಒಪ್ಪಿಸುತ್ತಿದ್ದ ಸಂಕಟದೆಡೆಗೆ ತಿರುಗಿತು.
ಆಕೆಯ ಅಳುವಿನ ಸಾರಾಂಶ ಇಷ್ಟಿತ್ತು. ಈಗ ಎರಡು ವರ್ಷದ ಹಿಂದೆ ಆಕೆ ಬದುಕೆಂದುಕೊಂಡವನು ಬೇರೊಂದು ಹಾದಿ ಕಂಡುಕೊಂಡ. ಅದರಿಂದ ಚೇತರಿಸಿಕೊಂಡು ತನ್ನ ಕನಸಿನ ಕೋರ್ಸ್ ಮುಗಿಸಿ, ಮೂರ್ನಾಲ್ಕು ಸ್ನೇಹಿತರು ಸೇರಿ ತೆರೆದ ಚಿಕ್ಕ ಆರ್ಕಿಟೆಕ್ಟ್ ಆಫೀಸ್, ಉಳಿದಿಬ್ಬರ ಮೋಸದಿಂದ ಜವಾಬ್ದಾರಿ ತಲೆ ಮೇಲೆ ಬಿದ್ದಿತ್ತು. ಅದು ಅವಳ ಪಾಲಿಗೆ ಕೇವಲ ಅವಳು ಕೆಲಸವಾಗಿರಲಿಲ್ಲ. ಆಕೆಯ ಶ್ರದ್ಧೆ- ಭಕ್ತಿಯೇ ಆಗಿತ್ತು. ಒಂದರಮೇಲೊಂದು ಪೆಟ್ಟು . ತೀವ್ರ ಆಘಾತವಾಗಿ ಹೀಗೆ ಕುಸಿದು ಕುಳಿತಿದ್ದಾಳೆ.
ಒಂದೇ ದೋಣಿಯಲ್ಲಿ ಎಷ್ಟೆಷ್ಟೋ ಜನ ಪಯಣಿಸುತ್ತಿರುತ್ತೇವೆ ಅಲ್ಲವಾ? ಅಂದೆ. ಅವಳಿಗೆ ಅರ್ಥವಾಗದೇ ನನ್ನನ್ನೊಮ್ಮೆ ನೋಡಿದಳು.
ಆಕೆಯ ಪ್ರಶ್ನೆಗಳೇ ನನ್ನ ಮುಂದಿದ್ದವು. ಇಬ್ಬರೂ ಒಂದೇ ವರದಿ-ಪಿರ್ಯಾದಿಯನ್ನು ಜಲಪಾತಕ್ಕೆ ಬೇರೆ ಬೇರೆ ರೀತಿ ಒಪ್ಪಿಸುತ್ತಾ ಉತ್ತರಕ್ಕಾಗಿ ತಡಕುತ್ತಿದ್ದೆವು.
ಯಾವುದೇ ವ್ಯಕ್ತಿಯ ಮೇಲಾಗಲಿ ಅಥವಾ ಕೆಲಸ-ಓದು ಹೀಗೆ ಯಾವುದರಲ್ಲೇಆಗಲಿ, ತಪಸ್ಸಿನಂತೆ ಕಾಯ್ದಿರಿಸಿದ ನಮ್ಮ ಶ್ರದ್ಧೆಯನ್ನ ಅಚಾನಕವಾಗಿ ಬೇರೆಕಡೆ ಹರಿಸು ಎಂದರೆ ಮನುಷ್ಯ ಛಿದ್ರನಾಗದೇ ಉಳಿಯದೆ ಇರಲು ಸಾಧ್ಯವಾ? ಈಗ್ಗೆ ಹದಿನೈದು ವರ್ಷಗಳ ಹಿಂದೆ ನಮ್ಮ ದೊಡ್ಡಕ್ಕ ಏಳನೇ ತರಗತಿವರೆಗಿನ ಶಾಲೆಯೊಂದನ್ನು ತೆರೆದಳು. ಲಾಭದ ಯೋಚನೆ ಮರೆತು, ಕಡಿಮೆ ವೆಚ್ಚದಲ್ಲಿ ಒಳ್ಳೆ ಸೌಲಭ್ಯಎನ್ನುವಂತೆ ಮಾಡಿದಳು. ಎರಡು ವರ್ಷದಲ್ಲಿ ಒಳ್ಳೇ ಸ್ರೆ$rಂತ್ ಬಂತು. ಆದರೆ ಲಾಭದಾಯಕವಾಗಿರಲಿಲ್ಲ. ವರ್ಷಗಳು ಕಳೆದಂತೆ ಕುಟುಂಬದ ಎಲ್ಲರ ಒತ್ತಡದಿಂದ ಅನಿವಾರ್ಯವಾಗಿ ಶಾಲೆಯನ್ನು ಬಿಟ್ಟುಕೊಟ್ಟಳು. ಒಳ್ಳೆ ಬೆಲೆಯೇನೋ ಬಂತು. ಅವಳು ಮಾತ್ರ ಶಾಲೆಗಾಗಿ ಅರ್ಧ ಜೀವವಾಗಿಬಿಟ್ಟಿದ್ದಳು. ಈಗಲೂ ಆ ಶಾಲೆಯ ಸುತ್ತಾ ಆಗಾಗ ಓಡಾಡಿ ಬರುತ್ತಾಳೆ. ಆ ಶಾಲೆಯ ಹೆಸರು ಕಿವಿಗೆ ಬಿದ್ದೊಡನೇ ಕಣ್ಣುತುಂಬಿಕೊಳ್ಳುತ್ತಾಳೆ. ಇತ್ತೀಚೆಗೆ ಹಂಪಿಗೆ ಹೋಗಿದ್ದೆ. ಪೋರ್ಚುಗೀಸ್ ಪ್ರವಾಸಿಯೊಬ್ಬ- ವಿಜಯನಗರ ಸಾಮ್ರಾಜ್ಯದ ಆ ಪೇಟೆಯನ್ನು ನೋಡುವಾಗ ಅಲ್ಲಿಂದ ಕಾಲು ಮುಂದಿಡಲಾಗಲಿಲ್ಲ. ಆ ಸ್ಥಳವನ್ನು ಒಂದು ದಿನದಲ್ಲಿ ನೋಡುತ್ತೇವೆ ಅಂದರೆ ಅಸಾಧ್ಯವೇ ? ಅಂದಿದ್ದಾನೆ. ಈಗಲೂ ಸಮುದ್ರಗಳನ್ನು ದಾಟಿ, ಲಕ್ಷಾಂತರ ಕಿ.ಮೀ ದೂರದ ಯಾವುದೋ ದೇಶಗಳಿಂದ ಬಂದು, ಪ್ರತಿ ಸ್ಮಾರಕವನ್ನು ಸೂಕ್ಷ¾ ವಾಗಿ ನೋಡುತ್ತಿದ್ದ ವಿದೇಶಿಯರನ್ನು ಗಮನಿಸಿದಾಗ ಆಶ್ಚರ್ಯವಾಗುತ್ತಿತ್ತು. ಎಷ್ಟೊಂದು ತಲ್ಲೀನತೆ ಅಂತ. ಎಷ್ಟೋ ದೇವಾಲಯಗಳ ಗರ್ಭಗುಡಿಗಳಲ್ಲಿ ವಿಗ್ರಹಗಳೇ ಇಲ್ಲ. ಎಷ್ಟೋ ಕಡೆ ಶಿಲ್ಪಗಳು ಜಜ್ಜಿ ಹೋಗಿವೆ. ಆದರೂ, ಪ್ರತಿಯೊಂದೂ ಸಮುದ್ರ ದಾಟಿ ಬಂದವರಿಂದ ಓದಿಸಿಕೊಳ್ಳುತ್ತವೆ. ಏಕೆಂದರೆ, ಹಿಂದಿನ ಅದರ ವೈಭವ, ಜೀವಂತಿಕೆ, ಕೋಟೆ ಕಟ್ಟಿರುವ ರೀತಿ…ಹೀಗೆ, ಇತಿಹಾಸಕ್ಕೆ ವಿದೇಶಿಗರು ಗಾಢವಾಗಿದ್ದಾರೆ. ಗಾಢವಾಗಿಯೇ ಬದುಕುತ್ತಿದ್ದಾರೆ ಅನಿಸತೊಡಗಿತು. ಶಾಲೆ ತೊರೆದ ಅಕ್ಕನಂತೆ. ನಮ್ಮ ಜೀವನವೂ ಆ ಜೋಗ ಜಲಪಾತದ ಧಾರೆಯಂತೆಯೇ. ಏಕಪ್ರಕಾರವಾಗಿ, ದ್ವಂದ್ವವಿಲ್ಲದೇ ಆತ್ಮವನ್ನಿಟ್ಟು ಹೂಡಿದ ಭಾವನೆಗಳು, ಮಾಡಿದ ಕೆಲಸಗಳು ನಮ್ಮ ಬದುಕಿನ ಹಂಪಿಗಳೇ ಆಗಿಬಿಟ್ಟಿವೆ. ಎಂದಿಗೂ ಅವು ಸ್ಮಾರಕಗಳೇ. ಅದರ ಪ್ರತಿ ಗಳಿಗೆಗಳೂ ನಮ್ಮನ್ನು ನಾವು ತೊಡಗಿಸಿಕೊಂಡ ಅವಶೇಷಗಳಂತೆ ಕಾಣುತ್ತದೆ. ಆ ಕಾಲ ಬದುಕಲು ಸಾಧ್ಯವಾಗಿದ್ದೇ ಅದರ ಸಾರ ಮತ್ತು ವಿಶೇಷತೆಯಿಂದ. ಅಷ್ಟು ಆಳವಾಗಿ ಬದುಕಲು ಸಾಧ್ಯವಾಗಿದ್ದರಿಂದ. ಯಾವುದೋ ಕೆಲಸ ಅಥವಾ ಓದು ಆದರೆ ಅದನ್ನು ತಲುಪುವ ಇನ್ನೊಂದು ಮಾರ್ಗ ಕಂಡುಕೊಳ್ಳಬಹುದೇನೋ. ಆದರೆ ವ್ಯಕ್ತಿಯೊಬ್ಬರ ಮೇಲಿನ ಪವಿತ್ರ ಭಾವನೆಗಳಾದರೆ, ಅಷ್ಟೇ ಶ್ರದ್ದೆ ಮತ್ತೂಬ್ಬರ ಮೇಲೆ ಮೂಡುವುದು ಸಾಧ್ಯವಾಗದ ಮಾತು. ಈ ಜಲಪಾತದಂತೆ ಶ್ರದ್ದಾ ಭಕ್ತಿಯಿಂದ ಏಕಪ್ರಕಾರವಾಗಿ ಒಂದರ ಮೇಲೆ ನಮ್ಮನ್ನು ನಾವು ಆತ್ಮದಿಂದ ತೊಡಗಿಸಿಕೊಳ್ಳಲು ಸಾಧ್ಯವಾಗುವುದೇ ಸಾರವೆನಿಸಿತು. ನೀರಿನ ಹಬೆ ತಣ್ಣಗಾಗಿದ್ದರಿಂದ ಮನಕ್ಕೂ ತಂಪು ನೀಡಿತು. ಆಕೆಯಲ್ಲಿ ಇದ್ದ ಶ್ರದ್ಧೆಯನ್ನು ಗುರುತಿಸಿ, ಆದನ್ನು ಊರುಗೋಲು ಮಾಡಿಕೊಂಡು ಮತ್ತೆ ಜೀವನೋತ್ಸಾಹದಿಂದ ಮೇಲೇಳಬಹುದಾದ ರೀತಿ ಬಗ್ಗೆ ಹೇಳಿ ಸಮಾಧಾನಪಡಿಸಿದೆ. ಅಮ್ಮನನ್ನು ಪರಿಚಯಿಸುತ್ತೇನೆ ಬಾ ಎನ್ನುತ್ತಾ ಮೇಲೆದ್ದೆವು. ಜಲಪಾತ ತನ್ನ ಗಂಭೀರ ಲಯ ಸಂಜೆಯ ಕೆಂಪು-ಹಳದಿ ಮಿಶ್ರಿತ ಬಣ್ಣದೊಂದಿಗೆ ರಂಗು ಹೆಚ್ಚಿಸಿಕೊಂಡಿತ್ತು. -ಮಂಜುಳಾ ಡಿ.