ಹೊಸದಿಲ್ಲಿ : ಪಾಕಿಸ್ಥಾನ ಭಯೋತ್ಪಾದನೆಯನ್ನು ನಿಲ್ಲಿಸಿದರೆ ನಾವು ಕೂಡ ನೀರಜ್ ಚೋಪ್ರಾ ಆಗುವೆವು ಎಂದು ಭಾರತೀಯ ಸೇನಾ ಪಡೆ ಮುಖ್ಯಸ್ಥ ಬಿಪಿನ್‌ರಾವತ್ ಹೇಳಿದ್ದಾರೆ.
ವಿಶ್ವ ಸಮುದಾಯದಿಂದ ಪ್ರತ್ಯೇಕಗೊಂಡು ಏಕಾಕಿಯಾಗಿ, ಆರ್ಥಿಕವಾಗಿ ದಿವಾಳಿ ಎದ್ದಿರುವ ಪಾಕಿಸ್ಥಾನಕ್ಕೆ ತನ್ನ ಈ ದಯನೀಯ ಸ್ಥಿತಿಯಿಂದ ಮೇಲೆ ಬರಲು ಭಾರತದ ಸಹಾಯ ಹಸ್ತ ಬೇಕಾಗಿದೆ ಎಂದು ಅಂತಾರಾಷ್ಟ್ರೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಿರುವ ಇಂದಿನ ಸಂದರ್ಭದಲ್ಲಿ ರಾವತ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಭಾರತ – ಪಾಕ್ ಗಡಿಯಲ್ಲಿ ನೀವು ಕ್ರೀಡಾ ಮನೋಭಾವವನ್ನು ತೋರುವಿರಾ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸುತ್ತಿದ್ದ ಜನರಲ್ ರಾವತ್ ಅವರು, ‘ಪಾಕಿಸ್ಥಾನ ಒಂದೊಮ್ಮೆ ಭಯೋತ್ಪಾದನೆಯನ್ನು ನಿಲ್ಲಿಸಿದರೆ ನಾವು ಕೂಡ ನೀರಜ್ ಚೋಪ್ರಾ ಆಗುವೆವು’ ಎಂದು ಮಾರ್ಮಿಕವಾಗಿ ಹೇಳಿದರು.
ಏಶ್ಯನ್ ಗೇಮ್ಸ್ ಜವೆಲನ್ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರು ತನ್ನ ಪಾಕ್ ಪ್ರತಿಸ್ಪರ್ಧಿ ವಿರುದ್ಧ ಸದ್ಭಾವನೆ ತೋರುವ ಮೂಲಕ ಉಭಯ ದೇಶಗಳ ಅಭಿಮಾನಿಗಳನ್ನು ಗೆದ್ದಿದ್ದರು.
‘ಭಯೋತ್ಪಾದನೆಯನ್ನು ನಿಲ್ಲಿಸುವ ಮೂಲಕ ಪಾಕಿಸ್ಥಾನ ಮೊದಲ ಹೆಜ್ಜೆಯನ್ನು ಇಡಬೇಕು; ಆಗ ನಾವು ಕೂಡ ನೀರಜ್ ಚೋಪ್ರಾ ಅವರಂತೆ ಮುಂದಡಿ ಇಡುವೆವು’ ಎಂದು ರಾವತ್ ಹೇಳಿದರು.
ಏಶ್ಯನ್ ಗೇಮ್ಸ್ ಪದಕ ವಿಜೇತರನ್ನು ಸೇನೆಯ ವತಿಯಿಂದ ಸಮ್ಮಾನಿಸುವ ಕಾರ್ಯಕ್ರಮದಲ್ಲಿ ಜನರಲ್ ರಾವತ್ ಮಾತನಾಡುತ್ತಿದ್ದರು. ಜವೆಲಿನ್ ಕಂಚು ಗೆದ್ದಿದ್ದ ಪಾಕಿಸ್ಥಾನದ ಅರ್ಷದ್ ನದೀಮ್ ಅವರನ್ನು ನೀರಜ್ ಚೋಪ್ರಾ ಕೈಕುಲುಕಿ ಅಭಿನಂದಿಸಿದ್ದರು. ಆ ಸನ್ನಿವೇಶದ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.