Advertisement

ಸಮಸ್ಯೆಗಳಿಗೆ ಸ್ಪಂದಿಸದಿದ್ರೆ ಜಾಗ ಖಾಲಿ ಮಾಡಿ

08:21 AM Jun 07, 2019 | Team Udayavani |

ರಾಮನಗರ: ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗದ ಅಧಿಕಾರಿಗಳು ಜಾಗ ಖಾಲಿ ಮಾಡಿ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ನಗರದ ಶಾಸಕರ ಭವನದಲ್ಲಿ ಗುರುವಾರ ನಡೆದ ಜನಸ್ಪಂದನಾ ಸಭೆಯಲ್ಲಿ ನಾಗರಿಕರಿಂದ ಕೇಳಿ ಬಂದ ಅಧಿಕಾರಿಗಳ ನಿರ್ಲಕ್ಷ್ಯ, ವಿನಾಕಾರಣ ವಿಳಂಬ ಮುಂತಾದ ದೂರುಗಳಿಗೆ ಕೆಂಡಮಂಡಳರಾದ ಶಾಸಕರು ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಲು ಇಚ್ಚಾಶಕ್ತಿ ಇಲ್ಲದ ಅಧಿಕಾರಿಗಳು ಜಾಗ ಖಾಲಿ ಮಾಡಿ ಎಂದರು.

ಆಡಳಿತ ವ್ಯವಸ್ಥೆಯ ಬಗ್ಗೆ ಜನರಿಗೆ ಬೇಸರವಾಗಿದೆ. ತಮ್ಮ ಬಳಿ ನೇರವಾಗಿಯೇ ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಅವಕಾಶ ನೀಡದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಾಗಿದೆ. ಹಾಗೊಮ್ಮೆ ಆಗದಿದ್ದರೆ ಇಲ್ಲಿಂದ ತೆರಳಿ ಎಂದು ತಿಳಿಸಿದರು.

ಕುಡಿಯುವ ನೀರು ಸಮಸ್ಯೆ ಬಗ್ಗೆಯೇ ಹೆಚ್ಚು ನಾಗರಿಕರು ಆರೋಪಿಸಿದರು. ಈ ವಿಚಾರದಲ್ಲಿಯೂ ಆಕ್ರೋಶಗೊಂಡ ಶಾಸಕರು ಸಂಬಂದಿಸಿದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಐಜೂರು ಭಾಗದಲ್ಲಿ ನೀರಿನ ಸಮಸ್ಯೆ ದಿನೇ ದಿನೆ ತೀವ್ರಗೊಳ್ಳುತ್ತಿದೆ. ಅಧಿಕಾರಿಗಳು ಸಾರ್ವಜನಿಕರ ಹೋರಾಟ, ಮನವಿಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆ ಭಾಗದ ನಾಗರಿಕರು ಅಲವತ್ತುಕೊಂಡರು.

ರಸ್ತೆ ಅಭಿವೃದ್ಧಿ, ಆರೋಗ್ಯ ಸಂಬಂಧಿತ ಕಾಯಿಲೆಗಳಿಗೆ ಕೆಲವರು ನೆರವು ಕೋರಿದರು. ಕೆಲವರು ತಮ್ಮ ಗ್ರಾಮಗಳಲಿ ಕೊಳವೆ ಬಾವಿಗಳಿಗೆ ಮನವಿ ಮಾಡಿದರು. ಕಸ ವಿಲೇವಾರಿ ಸಮಸ್ಯೆ ಬಗ್ಗೆಯೂ ನಾಗರಿಕರು ದೂರಿದರು. ಮಿನಿ ವಿಧಾನಸೌಧದಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಬೇಕಾಗಿದೆ ಎಂದು ಕೆಲವರು ಶಾಸಕರ ಗಮನ ಸೆಳೆದರು.

Advertisement

ಜನಸ್ಪಂದನ ಸಭೆಯಲ್ಲಿ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರ ದೊಡ್ಡ ಗುಂಪು ಶಾಸಕರ ಬಳಿ ತಮ್ಮ ಅಹವಾಲು ತೋಡಿಕೊಳ್ಳುತ್ತಿದ್ದ ನಡುವೆಯೇ ಶಾಸಕರು ನಾಗರಿಕರು ತಮ್ಮ ಸಮಸ್ಯೆ ಆಲಿಸಿ ಎಂದು ಅಲವತ್ತುಕೊಂಡರು. ಕೆಲವು ನಾಗರಿಕರು ಪಕ್ಷದ ಕಾರ್ಯಕರ್ತರನ್ನು ಆಮೇಲೆ ಮಾತನಾಡಿಸಿ ಮೊದಲು ನಮ್ಮ ಅಹವಾಲು ಸ್ವೀಕರಿಸಿ ಎಂದು ಮನವಿ ಮಾಡಿದರು. ನಂತರ ಸಾರ್ವಜನಿಕರಿಗೆ ಅವಕಾಶ ದೊರೆಯಿತು. ತಹಶೀಲ್ದಾರ್‌ ರಾಜು, ನಗರಸಭೆ ಆಯುಕ್ತೆ ಬಿ.ಶುಭಾ, ತಾಲೂಕು ಪಂಚಾಯ್ತಿ ಇಓ ಎಂ.ಬಾಬು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಮಾಧ್ಯಮಗಳ ವಿರುದ್ಧ ಕಿಡಿಕಿಡಿ: ಜನಸ್ಪಂದನ ಸಭೆಗೆ ಆಗಮಿಸಿದ ಮಾಧ್ಯಮ ಪ್ರತಿನಿಧಿಗಳವಿರುದ್ಧ ಶಾಸಕಿ ಅನಿತಾ ಕುಮಾರಸ್ವಾಮಿ ಹರಿಹಾಯ್ದರು. ಮನಸ್ಸಿಗೆ ಬಂದಂತೆ ಪ್ರಶ್ನೆಗಳನ್ನು ಕೇಳುವುದಿದ್ದರೆ ತಾವು ಮಾತನಾಡೋದಿಲ್ಲ ಎಂದು ಷರತ್ತು ಹಾಕಿದರು. ನೀಡಿದ ಎಲ್ಲ ಭರವಸೆಗಳನ್ನು ತಕ್ಷಣ ಈಡೇರಿ ಸಲು ಸಾಧ್ಯಲ್ಲ. ಕಾಲಾವಕಾಶ ಬೇಕಾಗುತ್ತದೆ. ದೂರದಲ್ಲಿ ನಿಂತು ಸಮಸ್ಯೆಗಳಿವೆ ಎಂದು ಹೇಳುವುದು ಸುಲಭ. ಆದರೆ ಮಡುವುದು ಎಷ್ಟು ಕಷ್ಟ . ಅದು ತಿಳಿಯಬೇಕಾದರೆ ಮಾಧ್ಯಮ ಪ್ರತಿನಿಧಿಗಳು ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದು ಜನರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿ, ಆಗ ನಿಮಗೆ ಕಷ್ಟ ಏನೆಂದು ಗೊತ್ತಾಗುತ್ತೆ ಎಂದು ಸವಾಲು ಎಸೆದರು.

Advertisement

Udayavani is now on Telegram. Click here to join our channel and stay updated with the latest news.

Next